ಸಾಹಿತ್ಯದಲ್ಲಿ ಪದ ಬಳಕೆಯ ವೇಳೆ ಎಚ್ಚರ ಅಗತ್ಯ: ಶಾಂತರಾಮ ಶೆಟ್ಟಿ

ಮಂಗಳೂರು, ಎ.23: ಸಾಹಿತಿಗಳು ಸಾಹಿತ್ಯ ಬರೆಯುವಾಗ ತಮ್ಮ ್ಲ ಪದ ಬಳಕೆಯಲ್ಲಿ ಎಚ್ಚರ ವಹಿಸಬೇಕು. ಪದ ಬಳಕೆಯಲ್ಲಿ ತಪ್ಪು ಉಂಟಾದರೆ ಬರೆದ ಸಾಹಿತ್ಯವೇ ಅನರ್ಥವಾಗುತ್ತದೆ ಎಂದು ಸಾಹಿತಿ ಶಾಂತಾರಾಮ ಶೆಟ್ಟಿ ಹೇಳಿದ್ದಾರೆ.
ಮಂಗಳೂರಿನ ಜೈಲ್ ರಸ್ತೆಯಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್)ನಲ್ಲಿ ಮಂಗಳವಾರ ಮನೋಜ್ ಕುಮಾರ್ ಶಿಬಾರ್ಲ ಅವರ ‘ಕಾಲು ಸಾವಿರ ’ಚುಟುಕುಗಳ ಕೃತಿ ಬಿಡುಗಡೆ ಗೊಳಿಸಿ ಅವರು ಮಾತನಾಡಿದರು.
ಓದು ಹವ್ಯಾಸ , ಅಧ್ಯಯನ ಪ್ರವೃತ್ತಿ ಹೊಂದಿದರೆ ಸಾಹಿತ್ಯದ ಬರವಣಿಗೆ ಚೆನ್ನಾಗಿ ಸಾಗುತ್ತದೆ. ಎಲ್ಲರಿಗೂ ಸಾಹಿತ್ಯ ಒಲಿಯುವುದಿಲ್ಲ. ಸಾಹಿತಿಗೆ ಬರೆಯುವ ಕಲೆ ಮುಖ್ಯವಾಗಿದೆ. ಓದುಗನನ್ನು ಮನದಟ್ಟು ಮಾಡುವಂತೆ ಬರೆಯುವುದೇ ಸಾಹಿತ್ಯ ಎಂದರು.
ಮನೋಜ್ ಕುಮಾರ್ ಶಿಬಾರ್ಲ ಅವರು ಪ್ರಾಸ್ತಾವಿಸಿದರು.
ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲೆ ರಾಜಲಕ್ಷ್ಮೀ ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ವ.ಉಮೇಶ ಕಾರಂತ ಕೃತಿ ಪರಿಚಯ ಮಾಡಿದರು. ಸಾಹಿತಿ ನಳಿನಾಕ್ಷಿ ಉದಯರಾಜ್, ದ.ಕ.ಚು.ಸಾ.ಪ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ, ಹಿರಿಯ ಪತ್ರಕರ್ತ ಚಾಲಕೃಷ್ಣ ಶಿಬಾರ್ಲ ಉಪಸ್ಥಿತರಿದ್ದರು.
ಪುಸ್ತಕದ ಪ್ರಕಾಶಕರಾದ ಮಹೇಶ್ ಆರ್. ನಾಯಕ್ ಸ್ವಾಗತಿಸಿದರು. ಸಾಹಿತಿ ವಿಜಯಲಕ್ಷ್ಮೀ ಕಟೀಲ್ ವಂದಿಸಿದರು. ಅನಂತರ ನಡೆದ ಚೈತ್ರದ ಚುಟುಕುಗಳು ಕವಿಗೋಷ್ಠಿಯನ್ನು ಎನ್. ಸುಬ್ರಾಯ ಭಟ್ ನಿರ್ವಹಿಸಿದರು