ಖರೀದಿಸುವ ನೆಪದಲ್ಲಿ ಚಿನ್ನಾಭರಣ ಲಪಟಾಯಿಸಿದ ಮಹಿಳೆ: ಪ್ರಕರಣ ದಾಖಲು

ಮಂಗಳೂರು: ಮಹಿಳೆಯೊಬ್ಬಳು ಚಿನ್ನಾಭರಣ ಖರೀದಿಸುವಂತೆ ನಟಿಸಿ ಬಳಿಕ ಹಣ ಪಾವತಿಸದೆ ಚಿನ್ನಾಭರಣ ಲಪಟಾಯಿಸಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಫರೀದಾ ಎಂಬ ಈ ಮಹಿಳೆಯು ಹಲವೆಡೆ ಹೀಗೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಲಪಟಾಯಿಸಿರುವುದಾಗಿ ವರದಿಯಾಗಿದೆ.
ಮಾ.25ರಂದು ತನಗೆ ಕರೆ ಮಾಡಿದ ಫರೀದಾ, ತಾನು ಕುಂಜತ್‌ಬೈಲ್‌ನವಳಾಗಿದ್ದು ಮಗುವಿನ ನಾಮಕರಣಕ್ಕೆ ಚಿನ್ನದ ಒಂದು ಬ್ರಾಸ್‌ಲೆಟ್, ಒಂದು ಚೈನ್, ಎರಡು ಉಂಗುರ ಬೇಕಾಗಿದೆ. ಡಿಸೈನ್‌ನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿ. ನಾನು ಸೆಲೆಕ್ಟ್ ಮಾಡಿ ನಿಮಗೆ ಹಣವನ್ನು ನೆಫ್ಟ್ ಮಾಡುತ್ತೇನೆ ಎಂದು ಹೇಳಿದ್ದಳು.
ಅದರಂತೆ ತಾನು ಡಿಸೈನ್‌ಗಳ ಫೋಟೋಗಳನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ್ದೆ. ಆವಾಗ ಫರೀದಾ ‘ಒಂದು ಚೈನ್, ಒಂದು ಬ್ರಾಸ್‌ಲೆಟ್ ಮತ್ತು ಎರಡು ಉಂಗುರಗಳನ್ನು ಆಯ್ಕೆ ಮಾಡಿ ಮರುದಿನ ಕರೆ ಮಾಡಿ, ಹಣವನ್ನು ನೆಫ್ಟ್ ಮೂಲಕ ಕಳುಹಿಸುತ್ತೇನೆ. ಆಯ್ಕೆ ಮಾಡಿದ ಚಿನ್ನವನ್ನು ಹಿಯಾಝ್ ಕೆ.ಎಸ್. ಎಂಬ ಹುಡುಗನಲ್ಲಿ ಕಳುಹಿಸಿಕೊಡಿ’ ಎಂದಿದ್ದಳು. ಅದರಂತೆಯೇ ಹಿಯಾಝ್ ನನ್ನು ಅಂಗಡಿಗೆ ಕಳುಹಿಸಿಕೊಟ್ಟು ಬ್ಯಾಂಕ್‌ನ 1.36 ಲ.ರೂ. ಮೊತ್ತದ ಡಿಪಾಸಿಟ್ ಪೇ ಸ್ಲಿಪ್‌ನ್ನು ವಾಟ್ಸ್‌ಆ್ಯಪ್ ಮೂಲಕ ಕಳುಹಿಸಿದ್ದಳು. ಆದರೆ ಹಣ ತನ್ನ ಖಾತೆಗೆ ಜಮೆಯಾಗಿರಲಿಲ್ಲ. ಈ ಬಗ್ಗೆ ತಾನು ತಿಳಿಸಿದಾಗ ಫರೀದಾ ‘ಸರ್ವರ್ ಸ್ಲೋ ಇದೆ. 30 ನಿಮಿಷದಲ್ಲಿ ನಿಮಗೆ ಜಮೆಯಾಗುತ್ತದೆ. ಹುಡುಗನಲ್ಲಿ ಚಿನ್ನವನ್ನು ಕೊಡಿ’ ಎಂದು ತಿಳಿಸಿದಳು. ಅದನ್ನು ನಂಬಿದ ತಾನು ಚಿನ್ನಾಭರಣಗಳನ್ನು ಕಳುಹಿಸಿಕೊಟ್ಟಿದ್ದೆ. ಅದೇ ದಿನ ಸಂಜೆ ತಾನು ಫರೀದಾಗೆ ಕರೆ ಮಾಡಿ ಹಣ ಬಂದಿಲ್ಲ ಎಂದು ತಿಳಿಸಿದೆ. ಆವಾಗ ಕೂಡ ಸರ್ವರ್ ಸಮಸ್ಯೆ ಇರಬಹುದು. ನಾಳೆ ಅಂಗಡಿಗೆ ಬಂದು ಹಣವನ್ನು ನೀಡುತ್ತೇನೆಂದು ಫರೀದಾ ಉತ್ತರಿಸಿದ್ದಳು. ಮರುದಿನ ಹಣ ಕೇಳಿದಾಗ ನಿಮಗೇನು ಅವಸರ, ಹಣ ಕೊಡುತ್ತೇನೆ ಎಂದಿದ್ದಳು. ತಾನು ತನಗೆ ಬರಬೇಕಾದ ಹಣವನ್ನು ಪದೇ ಪದೇ ಕೇಳಿದಾಗ ಹಣವನ್ನು ನೀಡದೆ ಬೆದರಿಕೆ ಹಾಕಿದ್ದಾಳೆ ಎಂದು ಚಿನ್ನದ ಅಂಗಡಿಯ ಮಾಲಕ ಕಾವೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.