ವಿಟ್ಲ: ನಿರ್ಜನ ಪ್ರದೇಶದ ಗುಡ್ಡದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

Update: 2025-04-25 22:39 IST
ವಿಟ್ಲ: ನಿರ್ಜನ ಪ್ರದೇಶದ ಗುಡ್ಡದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
  • whatsapp icon

ವಿಟ್ಲ : ನಿರ್ಜನ ಪ್ರದೇಶದ ಗುಡ್ಡದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಸಾಲೆತ್ತೂರು ಗ್ರಾಮದಲ್ಲಿ ಪತ್ತೆಗಾಗಿದೆ.

ಪಾಲ್ತಾಜೆ ನಿವಾಸಿ ನಾರಾಯಣ ಪೂಜಾರಿ ಮೃತ ವ್ಯಕ್ತಿ. ಶನಿವಾರ ಮಧ್ಯಾಹ್ನ ಸ್ಥಳೀಯ ನಿವಾಸಿಯೊಬ್ಬರು ಗುಡ್ಡಕ್ಕೆ ಕಟ್ಟಿಗೆ ತರಲು ಹೋದಾಗ ಪೊದೆಗಳ ಎಡೆಯಲ್ಲಿ ಬಿದ್ದುಕೊಂಡಿರುವ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಕಂಡುಬಂದಿದೆ. ತಕ್ಷಣವೇ ಆ ವ್ಯಕ್ತಿ ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ.

ಸುದ್ದಿ ತಿಳಿದು ವಿಟ್ಲ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದಾಗ ಮೃತ ವ್ಯಕ್ತಿ ಪಾಲ್ತಾಜೆ ನಿವಾಸಿ ನಾರಾಯಣ ಪೂಜಾರಿ ಎಂಬುದು ತಿಳಿದುಬಂದಿದೆ. ಮೃತರ ಪತ್ನಿ ಮತ್ತು ಮಕ್ಕಳು ಕೆಲ ವರ್ಷಗಳ ಹಿಂದೆ ನಾರಾಯಣ ಪೂಜಾರಿ ಜೊತೆ ಮನಸ್ತಾಪ ಬಂದು ಪೆರುವಾಯಿ ಸಮೀಪ ವಾಸವಾಗಿದ್ದಾರೆ. ಕೆಲ ಸಮಯಗಳಿಂದ ಒಬ್ಬಂಟಿಯಾಗಿ ನಿರ್ಜನ ಪ್ರದೇಶದ ಪಾಲ್ತಾಜೆ ಗುಡ್ಡದಲ್ಲಿ ಮಲಗುತ್ತಿದ್ದ ನಾರಾಯಣ ಪೂಜಾರಿ ಮೂರು ದಿನಗಳ ಹಿಂದೆ ಮೃತಪಟ್ಟಿರಬೇಕೆಂದು ಶಂಕಿಸಲಾಗಿದೆ. ಮೃತದೇಹ ಭಾಗಶಃ ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ.

ವಿಟ್ಲದ ಮುರಳೀಧರ ನೇತೃತ್ವದ ಫ್ರೆಂಡ್ಸ್ ವಿಟ್ಲ ತಂಡದವರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಟ್ಲ ಸಮುದಾಯ ಆಸ್ಪತ್ರೆಗೆ ಸಾಗಿಸಿದ್ದಾರೆ. ಕುಡಿತದ ಚಟ ಹೊಂದಿದ್ದ ನಾರಾಯಣ ಪೂಜಾರಿ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News