ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಸಾಮಾನ್ಯ ಸಭೆ

ವಿಟ್ಲ: ವಿಟ್ಲದ ಪಳಿಕೆ ಎಂಬಲ್ಲಿ ನಿರ್ಮಾಣಗೊಂಡಿರುವ ಪಿಯು ಕಾಲೇಜ್ ಪರವಾನಿಗೆ ಪಡೆದ ಮೂಲ ಉದ್ದೇಶವನ್ನು ಮರೆಮಾಚಿ ಬೇರೆ ಕಾರ್ಯಕ್ಕೆ ಬಳಸುವ ಹುನ್ನಾರ ನಡೆಯುತ್ತಿದೆ. ಸರ್ಕಾರಿ ಜಾಗವನ್ನು ಅತಿಕ್ರಮಣ ಮಾಡಿಕೊಳ್ಳುವ ಕಾರ್ಯವೂ ಆಗಿದೆ. ಪರವಾನಿಗೆ ಇಲ್ಲದೆ ಕಟ್ಟಡ ನಿರ್ಮಾಣ ಆಗುತ್ತಿದ್ದು, ಇದರ ಬಗ್ಗೆ ಸೂಕ್ತ ಕ್ರಮ ಆಗಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಅರುಣ್ ಎಂ ವಿಟ್ಲ ತಿಳಿಸಿದರು.
ವಿಟ್ಲ ಪಟ್ಟಣ ಪಂಚಾಯತ್ ನಲ್ಲಿ ಅಧ್ಯಕ್ಷ ಕರುಣಾಕರ ನಾಯ್ತೋಟ್ಟು ಅಧ್ಯಕ್ಷತೆ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.
94ಸಿ ಹಾಗೂ ಸಿಸಿ ನಿವೇಶನದಲ್ಲಿ ನಿರ್ಮಾಣ ಮಾಡಿದ ಮನೆಗಳ ದಾಖಲೆಗಳ ಬಗ್ಗೆ ಗೊಂದಲ ಏರ್ಪಡಿಸುವುದು ಸರಿಯಲ್ಲ. ಈ ನಿವೇಶನಕ್ಕೆ ಸಿಂಗಲ್ ಸೈಟ್ ನ ಅಗತ್ಯವಿಲ್ಲ, ಅದನ್ನು ಕೇಳುವುದೂ ಸರಿಯಲ್ಲ. ಪುಡಾ ಸಭೆಯಲ್ಲಿ ಸಮಸ್ಯೆಯ ಬಗ್ಗೆ ಮಾತನಾಡ ಬೇಕು ಸ್ಥಾಯಿ ಸಮಿತಿ ಅಧ್ಯಕ್ಷ ರವಿ ಪ್ರಕಾಶ್ ಅವರು ಹೇಳಿದರು.
ಮಳೆ ಬರುವ ಮೊದಲು ಚರಂಡಿಗಳ ದುರಸ್ಥಿ ನಡೆಯಬೇಕು. ದೇವಸ್ಥಾನ ರಸ್ತೆಯಲ್ಲಿ ಎಲ್ಲಾ ವಾಹನ ನಿಲ್ಲಿಸಿ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಬಸ್ ನಿಲ್ದಾಣ ಏಲಂ ಆಗಿದ್ದು, ಬಸ್ ಮಾತ್ರ ರಸ್ತೆಯಲ್ಲಿ ನಿಲ್ಲುತ್ತಿದೆ. ವಾಹನ ಸಂಚಾರ ನಿಯಂತ್ರಣ ಸರಿಪಡಿಸುವುದು ಪೊಲೀಸ್ ಇಲಾಖೆಯ ಜವಾಬ್ದಾರಿಯಾ ದರೂ ಕೆಲಸ ನಡೆಯುತ್ತಿಲ್ಲ. ಸಂಚಾರ ನಿಯಂತ್ರಣಕ್ಕೆಂದು ಒಬ್ಬರು ಉಪ ನಿರೀಕ್ಷಕರನ್ನು ನೇಮಕ ಮಾಡಿದ್ದು, ರಸ್ತೆಯಲ್ಲಿ ನಿಂತು ವಾಹನ ಸಂಚಾರ ಸರಿ ಪಡಿಸುವ ಕಾರ್ಯ ಮಾಡಬೇಕು. ವಿವಿಧ ರಸ್ತೆಯಲ್ಲಿ ಚರಂಡಿ ಮೇಲಿನ ಸ್ಲ್ಯಾಬ್ ತುಂಡಾಗಿ ಸಮಸ್ಯೆಯಾಗುತ್ತಿದೆ. ಸಂತೆ ಅಂಗಡಿಯವರು ಮತ್ತೆ ರಸ್ತೆಗೆ ಬರು ತ್ತಿದ್ದು, ಅದನ್ನು ಪಂಚಾಯಿತಿ ವಶಕ್ಕೆ ಪಡೆಯುವ ಕಾರ್ಯವಾಗಬೇಕು. ನೀರು ಸರಬರಾಜು ವ್ಯವಸ್ಥೆಯನ್ನು ಸರಿಯಾಗಿ ಕೆಲಸ ನಿರ್ವಹಿಸಬೇಕು ಎಂದು ಸದಸ್ಯರು ಆಗ್ರಹಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷರಾದ ರವಿಪ್ರಕಾಶ್, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಕರುಣಾಕರ ವಿ., ಕಿರಿಯ ಅಭಿಯಂತರರಾದ ಡೊಮಾನಿಕ್ ಡಿಮೆಲ್ಲೋ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸದಸ್ಯರಾದ ಹರೀಶ್ ಸಿ.ಎಚ್, ಜಯಂತ ಸಿ.ಎಚ್, ಕೃಷ್ಣ, ವಸಂತ, ಹಸೈನಾರ್ ನೆಲ್ಲಿಗುಡ್ಡೆ, ವಿಕೆಎಂ ಅಶ್ರಫ್, ಅಶೋಕ್ ಕುಮಾರ್ ಶೆಟ್ಟಿ,,, ಶಾಕೀರ, ಸುನೀತ, ವಿಜಯಲಕ್ಷ್ಮಿ ಪದ್ಮನಿ, ಲತಾವೇಣಿ, ನಾಮನಿರ್ದೇಶಿತ ಸದಸ್ಯ ಮಹಮ್ಮದ್ ಇಕ್ಬಾಲ್ ಹಾನೆಸ್ಟ್, ಶ್ರೀನಿವಾಸ ಶೆಟ್ಟಿ ಕೊಲ್ಯ, ಸುನೀತಾ ಕೋಟ್ಯಾನ್, ಮೊದಲಾದವರು ಉಪಸ್ಥಿತರಿದ್ದರು. ಸಿಬ್ಬಂದಿಗಳು ಸಹಕರಿಸಿದರು.