ವೀರ ಚಂದ್ರಹಾಸ ಚಲನಚಿತ್ರದ ಮೂಲಕ ಯಕ್ಷಗಾನ ಜಾಗತಿಕ ಮಟ್ಟಕ್ಕೆ

ಮಂಗಳೂರು, ಎ.26: ಕರಾವಳಿ ಕರ್ನಾಟಕದ ಸಮೃದ್ಧ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಯಕ್ಷಗಾನವನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನವೇ ವೀರಚಂದ್ರಹಾಸ ಚಲನಚಿತ್ರ ಎಂದು ಚಿತ್ರದ ನಿರ್ದೇಶಕ ರವಿ ಬಸ್ರೂರು ಹೇಳಿದರು.
ಸಂಗೀತ ನಿರ್ದೇಶಕನಾಗಿ, ಕಲಾವಿದನಾಗಲು ನೆರವಾಗಿದ್ದು, ಯಕ್ಷಗಾನ ಹಾಗೂ ಬಯಲಾಟದ ಸಾಂಗತ್ಯ. ಈ ಋಣ ಭಾರ ತೀರಿಸಲು ವೀರಚಂದ್ರಹಾಸ ನಿರ್ದೇಶಿಸಿದ್ದೇನೆ ಎಂದು ಅವರು ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1500 ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಈ ಕಲೆಯನ್ನು ವಿಶ್ವದಾದ್ಯಂತ ವಿಜೃಂಭಣೆಯಿಂದ ಮೆರೆಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಪರಂಪರೆಯನ್ನು ಉಳಿಸುವ ಹಾಗೂ ಭವಿಷ್ಯದ ಪೀಳಿಗೆಗೆ ನಮ್ಮ ಕಲೆಯನ್ನು ಪರಿಚಯಿಸುವ ಒಂದು ಹೊಸ ವಿಧಾನವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಚಿತ್ರದ ಮೂಲಕ ಮಾಡಿದ್ದು, ಕಲಾಭಿಮಾನಿಗಳಿಂದ ದೊರೆತ ಸ್ಪಂದನೆಯಿಂದ ಧನ್ಯತಾ ಭಾವನೆ ಮೂಡಿದೆ ಎಂದರು.
ಕಳೆದ ಏಪ್ರಿಲ್ 18 ರಂದು ಬಿಡುಗಡೆಗೊಂಡ ಚಿತ್ರಕ್ಕೆ ಬೆಂಗಳೂರಿನ ಚಿತ್ರ ಮಂದಿರಗಳಲ್ಲಿ ಅತ್ಯುತ್ತಮ ಬೆಂಬಲ ದೊರೆತ್ತಿದ್ದು, ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಬೆಂಬಲ ಹೆಚ್ಚುತ್ತಿದೆ. ಇದನ್ನು ಕೇವಲ ಚಲನ ಚಿತ್ರವಾಗಿ ನೋಡದೆ, ಯಕ್ಷಗಾನವಾಗಿ ಹೊಸ ಬಗೆಯಾಗಿ ನೋಡಬೇಕು. ವೀಕ್ಷಿಸಿದ ಒಬ್ಬರಿಂದ ಇನ್ನೊಬ್ಬರಿಗೆ ಪ್ರಚಾರ ಪಡೆಯಬೇಕು. ಆ ಹಿನ್ನೆಲೆಯಿಂದಲೇ ನಾವು ಟ್ರೈಲರ್ ಬಿಡುಗಡೆ ಮಾಡಿಲ್ಲ ಎಂದರು.
ಕಾಂತಾರ ಪ್ರೇರಣೆ
ಚಿತ್ರದ ಮೇಲೆ ರಿಷಬ್ ಶೆಟ್ಟಿ ಅವರ ಕಾಂತಾರ ಚಿತ್ರದ ಪ್ರಭಾವವಿದೆ. ಸಂಸ್ಕೃತಿ ಕೇಂದ್ರಿತ ಕಥಾವಸ್ತು ಹೊಂದಿರುವ ಕಾಂತಾರ ಚಿತ್ರದ ಮೂಲಕ ತುಳುನಾಡಿನ ಗಂಡುಕಲೆ, ಪರಂಪರೆ, ನಂಬಿಕೆ, ಸಂಸ್ಕೃತಿ ಯನ್ನು ಇಡೀ ಪ್ರಪಂಚಕ್ಕೆ ತೋರಿಸಲು ಸಾಧ್ಯವಾಯಿತು. ವೀರಚಂದ್ರಹಾಸ ಯಕ್ಷಚಿತ್ರದ ಮೂಲಕ ಕೂಡ ಅಂತಹ ಒಂದು ಪ್ರಯತ್ನ ನಡೆಸಿದ್ದೇನೆ ಎಂದು ಬಸ್ರೂರು ಹೇಳಿದರು.
ಯಕ್ಷಗಾನವು ಕೇವಲ ಒಂದು ಕಲೆಯಷ್ಟೇ ಅಲ್ಲ. ಅದು ಕರ್ನಾಟಕದ ಸಂಸ್ಕೃತಿ, ಪರಂಪರೆ, ಭಕ್ತಿ ಹಾಗೂ ಶೌರ್ಯವನ್ನು ಪ್ರತಿಬಿಂಬಿಸುವ ಅದ್ಭುತ ಕಲಾತ್ಮಕ ಮಾಧ್ಯಮ. ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತದ ಪೌರಾಣಿಕ ಕತೆಗಳನ್ನು ಶ್ರಾವ್ಯ, ಸಂಗೀತ ಮತ್ತು ನೃತ್ಯ ಶೈಲಿಗಳ ಮೂಲಕ ಸಜೀವಗೊಳಿಸುವ ಈ ಕಲಾ ಪ್ರಕಾರವು ಅನೇಕ ಪೀಳಿಗೆಗಳ ಕಲಾಸಕ್ತರಿಗೆ ಪ್ರೇರಣೆಯಾಗಿದೆ ಎಂದರು.
ಚಲನಚಿತ್ರ ನಟ ಡಾ.ಶಿವರಾಜ ಕುಮಾರ್ ಅವರು ಗೌರವ ಕಲಾವಿದರಾಗಿ ಯಕ್ಷವೇಷದಲ್ಲೇ ಶಿವ ಪುಟ್ಟಸ್ವಾಮಿಯ ಪಾತ್ರದಲ್ಲಿ ನಟಿಸಿ ಪೋತ್ಸಾಹಿಸಿದ್ದಾರೆ. ಖ್ಯಾತ ಯಕ್ಷಗಾನ ಭಾಗವತರಾಗಿ ಜನ್ಸಾಲೆ ರಾಘವೇಂದ್ರ ಆಚಾರ್ಯ, ಪಟ್ಲ ಸತೀಶ್ ಶೆಟ್ಟಿ ಚಿತ್ರದಲ್ಲಿ ಹಾಡಿದ್ದಾರೆ ಎಂದು ಹೇಳಿದರು.
ಪಟ್ಲ ಸತೀಶ್ ಶೆಟ್ಟಿ ಅವರು ಮಾತನಾಡಿ, ನನಗೆ ಇದೊಂದು ದೊಡ್ಡ ಅವಕಾಶ. ಯಕ್ಷಗಾನ ಏನೂ ಗೊತ್ತಿಲ್ಲದವರು ಕೂಡ ಚಿತ್ರ ವೀಕ್ಷಣೆಯಿಂದ ಈ ಕಲೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬಹುದು ಎನ್ನುವಷ್ಟರ ಮಟ್ಟಿಗೆ ಒಳ್ಳೆಯ ರೀತಿಯಲ್ಲಿ ಚಿತ್ರ ಮೂಡಿಬಂದಿದೆ ಎಂದು ಹೇಳಿದರು.
ಜನ್ಸಾಲೆ ರಾಘವೇಂದ್ರ ಆಚಾರ್ಯ ಉಪಸ್ಥಿತರಿದ್ದರು.