ಬೆಳ್ತಂಗಡಿ: ಸಿಡಿಲು ಸಹಿತ ಭಾರೀ ಮಳೆ

ಬೆಳ್ತಂಗಡಿ: ತಾಲೂಕಿನ ಹೆಚ್ಚಿನ ಭಾಗಗಳಲ್ಲಿ ಶನಿವಾರ ಸಂಜೆ ಭಾರಿ ಗುಡುಗು, ಗಾಳಿ ಸಹಿತ ಮಳೆ ಸುರಿದಿದೆ.
ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಕ್ಕಿಂಜೆಯ ಕತ್ತರಿಗುಡ್ಡ ಎಂಬಲ್ಲಿ ಹಂಝ ಎಂಬವರ ಮನೆಯ ಶೀಟುಗಳು ಹಾರಿ ಹೋಗಿದ್ದು, ಮನೆಗೆ ಹಾನಿ ಉಂಟಾಗಿದೆ. ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಚಾರ್ಮಾಡಿ ಬೀಟಿಗೆಯಲ್ಲಿ ಭಾರೀ ಗಾಳಿ ಬೀಸಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದುದ್ದು ಅಡಿಕೆ ತೋಟಕ್ಕೂ ವ್ಯಾಪಕ ಹಾನಿ ಸಂಭವಿಸಿದೆ. ಚಾರ್ಮಾಡಿ ಪರಿಸರದಲ್ಲಿ ಹಲವು ಕಡೆ ಅಡಕೆ, ರಬ್ಬರ್ ಗಿಡಗಳು ಧರಾಶಾಯಿಯಾಗಿವೆ.
ಉಜಿರೆ ಕಾಲೇಜು ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಕಂಬ ತುಂಡಾಗಿ ಸಂಚಾರಕ್ಕೆ ಸಮಸ್ಯೆಯಾಯಿತು. ಕಡಿರುದ್ಯಾವರದಲ್ಲಿ ಆಲಿಕಲ್ಲು ಸಹಿತ ಮಳೆ ಸುರಿದಿದೆ.
ನಿರಂತರ 3ಗಂಟೆ ಭಾರಿ ಗುಡುಗು ಸಿಡಿಲು ಮುಂದುವರಿದಿದೆ. ತಾಲೂಕಿನ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಾತ್ರಿಯೂ ಮಳೆ ಮುಂದುವರಿದಿದೆ.
ಧರ್ಮಸ್ಥಳ ಕನ್ಯಾಡಿಯ ನಿವಾಸಿ ಬೊಮ್ಮ ಗೌಡ ಎಂಬವರ ಮನೆ ಸಮೀಪದ ಕೊಟ್ಟಿಗೆಗೆ ಸಿಡಿಲು ಬಡಿದು ಕೊಟ್ಟಿಗೆಯಲ್ಲಿದ್ದ ದನ ಸಾವನ್ನಪ್ಪಿದೆ.
ಮುಂಡಾಜೆ ಗ್ರಾಮದ ವಿವಿದೆಡೆ ವಿದ್ಯುತ್ ಕಂಬಗಳ ಮೇಲೆ ಮರ ಮುರಿದು ಬಿದ್ದ ಘಟನೆಗಳು ನಡೆದಿದೆ. ಗಾಳಿ ಮಳೆಯಿಂದಾಗಿ ಆಗಿರುವ ಹೆಚ್ಚಿನ ಹಾನಿಗಳ ಬಗ್ಗೆ ಇನ್ನಷ್ಟೆ ಮಾಹಿತಿ ತಿಳಿದು ಬರಬೇಕಾಗಿದೆ.