ವೈದ್ಯರನ್ನು ಎತ್ತಿಕಟ್ಟಿ ಕೋಮು ದ್ರುವೀಕರಣದ ಪ್ರಯತ್ನ ಖಂಡನೀಯ: ದ.ಕ.ಮುಸ್ಲಿಂ ಯುವಜನ ಪರಿಷತ್

ಪುತ್ತೂರು: ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿರುವ ಘಟನೆಯಲ್ಲಿ ಆರೋಪಿಗಳ ವರ್ತನೆಯು ಸಮರ್ಥನೀಯವಲ್ಲ. ಆದರೆ ಇದೇ ವಿಚಾರವನ್ನು ಮುಂದಿಟ್ಟು ವೈದ್ಯರನ್ನು ಎತ್ತಿಕಟ್ಟಿ ಕೋಮು ದ್ರುವೀಕರಣ ನಡೆಸುವುದೂ ಖಂಡನೀಯವಾಗಿದೆ. ಆಸ್ಪತ್ರೆ ರಕ್ಷಾ ಸಮಿತಿ ಮುಗಿಸ ಬಹುದಾಗಿದ್ದ ವಿಷಯದ ಬಗ್ಗೆ ರಂಪ ರದ್ದಾಂತ ಮಾಡಿ ಕೋಮು ಗಲಭೆಗೆ ಪ್ರಚೋದನೆ ನೀಡಿರುವ ಪ್ರಯತ್ನ ನಡೆಸುತ್ತಿರುವುದನ್ನು ಎಲ್ಲರೂ ಖಂಡಿಸಬೇಕಾಗಿದೆ ಎಂದು ದ.ಕ.ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಆರೋಪಿಸಿದರು.
ಅವರು ಶನಿವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಸರ್ಕಾರಿ ಆಸ್ಪತ್ರೆ ಯಲ್ಲಿ ನಡೆದಿರುವ ಘಟನೆಯಲ್ಲಿ ರೋಗಿಯ ಸಂಬಂಧಿಕರಾದ ತಾಯಿ ಮತ್ತು ಮಗ ರೋಗಿ ಜೊತೆ ಮಾತನಾಡುತ್ತಿದ್ದಾಗ ವೈದ್ಯಾಧಿಕಾರಿ ಆಶಾ ಪುತ್ತೂರಾಯ ರೌಂಡ್ಸ್ಗೆ ಬಂದಿದ್ದು, ಇವರನ್ನು ನೋಡಿದ ಅವರು ಇಲ್ಲಿ ಯಾಕೆ ಕುಳಿತದ್ದು ಅನ್ ಎಜ್ಯುಕೇಟಡ್ ಅಂತ ಅವಾಝ್ ಹಾಕಿದ್ದರು ಎನ್ನಲಾಗಿದ್ದು, ಈ ವೇಳೆ ವೈದ್ಯರಿಗೆ ಮತ್ತು ಅವರ ನಡುವೆ ಮಾತಿನ ಚಕಮಕಿ ನಡೆದಿತ್ತು. ಬಳಿಕ ವೈದ್ಯರು ಪೊಲೀಸರಿಗೆ ಫೋನ್ ಮೂಲಕ ದೂರು ನೀಡಿ ಪೊಲೀಸರು ಬಂದು ಅವರನ್ನು ಠಾಣೆಗೆ ಕರೆದುಕೊಂಡು ಹೋಗಿ ಅಲ್ಲಿಗೆ ವೈದ್ಯರನ್ನೂ ಕರೆಸಿ ಆತನ ಮೊಬೈಲ್‌ನಲ್ಲಿದ್ದ ವೀಡಿಯೋ ಡಿಲೀಟ್ ಮಾಡಿ ರಾಜಿಯಲ್ಲಿ ಇತ್ಯರ್ಥಪಡಿಸಿ ಅವರನ್ನು ಕಳುಹಿಸಿ ಕೊಟ್ಟಿದ್ದರು.
ಅದಾದ ಬಳಿಕ ಐಎಂಎ, ಸಂಘ ಪರಿವಾರ, ಪುತ್ತಿಲ ಪರಿವಾರ ಸೇರಿ ಮಾನಭಂಗ ಯತ್ನ ಮತ್ತು ಕರ್ತವ್ಯಕ್ಕೆ ಅಡ್ಡಿ ಎಂದು ಮಹಿಳಾ ಠಾಣೆಗೆ ದೂರು ನೀಡುತ್ತಾರೆ. ಇದರಿಂದ ಅವರ ಮೇಲೆ ಜಾಮೀನು ರಹಿತ ಕೇಸು ದಾಖಲಾಗುತ್ತದೆ. ಈ ನಡುವೆ ಸಂಘ ಪರಿವಾರದವರು ನಾಳೆ ಬೆಳಗ್ಗೆ 8 ಗಂಟೆಯೊಳಗೆ ಆರೋಪಿಯನ್ನು ಬಂಧನ ಮಾಡದಿದ್ದಲ್ಲಿ ನಾವು ರಸ್ತಾರೋಖೋ ಚಳುವಳಿ ಮಾಡುತ್ತೇವೆ ಎಂದು ಧಮ್ಕಿ ಹಾಕಿದ್ದರು. ವೈದ್ಯರ ಸಂಘಟನೆಯಾದ ಐಎಂಎ ಸಂಘಟನೆಗೂ ರೌಡಿ ಶೀಟರ್ ಆಗಿರುವ ಪುತ್ತಿಲನಿಗೂ ಏನು ಸಂಬಂಧ? ಈತ ಇತ್ತೀಚೆಗೆ ಅತ್ಯಾಚಾರ ಕೇಸಿನಲ್ಲಿ ಹೈಕೋರ್ಟ್ನಿಂದ ಸ್ಟೇ ಪಡೆದುಕೊಂಡ ವ್ಯಕ್ತಿ. ಆತನನ್ನು ಪೊಲೀಸ್ ಇಲಾಖೆಯವರು ಕರೆಸಿಕೊಂಡು ಎದುರುಗಡೆ ಕುಳಿತುಕೊಳ್ಳಿಸುವುದೇ ಮಹಾತಪ್ಪು. ಆತ ಪೊಲೀಸರಿಗೆ ಅವಾಝ್ ಹಾಕುತ್ತಾನೆ ಎಂದಾದರೆ ನಮ್ಮ ಪೊಲೀಸ್ ಇಲಾಖೆ ಯಾವ ಮಟ್ಟಕ್ಕೆ ಮುಟ್ಟಿದೆ ಎಂದು ನಾವು ಯೋಚಿಸ ಬೇಕಾಗಿದೆ ಎಂದ ಅಶ್ರಫ್ ಕಲ್ಲೇಗ, ಅವರು ವೈದ್ಯಾಧಿಕಾರಿ ಆಶಾ ಪುತ್ತೂರಾಯ ಅವರು ತನ್ನ ಮೇಲಿನ ಅಧಿಕಾರಿಗಳಿಗೆ, ಆಸ್ಪತ್ರೆ ರಕ್ಷಾ ಸಮಿತಿ ಸದಸ್ಯರಿಗೆ ಅಥವಾ ಆಸ್ಪತ್ರೆ ರಕ್ಷಾ ಸಮಿತಿ ಅಧ್ಯಕ್ಷರಾಗಿರುವ ಶಾಸಕರಿಗೆ ಮಾಹಿತಿ ನೀಡದೆ ಏಕಾಏಕಿ ಹಿಂದುತ್ವ ಸಂಘಟನೆಗೆ ದೂರು ಕೊಡುತ್ತಾರೆ ಎಂದರೆ ಇದರ ಉದ್ದೇಶವೇನು? ಒಟ್ಟಿನಲ್ಲಿ ಈ ಘಟನೆಗೂ ಮುಸ್ಲಿಮರಿಗೂ ಯಾವುದೇ ಸಂಬಂಧವಿಲ್ಲ. ಆದರೂ ಪುತ್ತಿಲ ಹೇಳಿಕೆ ನೀಡುತ್ತಾ ಮತಾಂಧ ಮುಸ್ಲಿಮ್ ಎಂದು ಹೇಳುತ್ತಾನೆ. ಆತ ಕೋಮು ಗಲಭೆ ಮಾಡುವ ಉದ್ದೇಶದಿಂದಲೇ ಈ ತರಹ ಮಾತನಾಡುವುದು. ಈತನಿಗೆ ವಕ್ಫ್ ಪ್ರತಿಭಟನೆಯ ವೇಳೆ ಗಲಾಟೆ ಮಾಡುವ ಉದ್ದೇಶವಿತ್ತು. ಅದು ವಿಫಲವಾಗಿದ್ದಕ್ಕೆ ಇದೀಗ ಮತ್ತೊಮ್ಮೆ ಕೋಮು ಗಲಭೆಗೆ ಈ ಪ್ರಯತ್ನ ನಡೆಸುತ್ತಿರುವುದಾಗಿ ಆರೋಪಿಸಿದರು.
ಪುತ್ತೂರಿನಲ್ಲಿ ವೈದ್ಯರಾದ ಅರ್ಚನಾ ಕರ್ಕೆರಾ ಹಾಗೂ ಅನಿಲ್ ಎಂಬವರ ಮೇಲೆ ದೊಡ್ಡ ವಿವಾದ ಆಗಿತ್ತು. ಆಗ ಐಎಂಎ ಸಂಘಟನೆಯವರು ಮಾತನಾಡಿಲ್ಲ. ಇದೀಗ ಆರೋಪಿ ಓರ್ವ ಮುಸ್ಲಿಂ ಎಂದಾದಾಗ ಪ್ರತಿಭಟನೆಗೆ ಮುಂದಾಗಿದೆ. ಅವರ ಉದ್ದೇಶವೇ ಮುಸ್ಲಿಂ ಸಮುದಾಯದ ಅವಹೇಳನ ಮಾಡುವುದು ಮತ್ತು ಮುಸ್ಲಿಂ ಭಯೋತ್ಪಾದಕರು ಎಂದು ಬಿಂಬಿಸುವುದು ಆಗಿದೆ. ಓರ್ವ ಆರ್‌ಎಸ್‌ಎಸ್ ಹಿನ್ನಲೆಯ ವ್ಯಕ್ತಿಯ ಪತ್ನಿ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿ ಆದ್ರೆ ಎಷ್ಟು ನ್ಯಾಯ ಕೊಡಿಸಬಹುದು ಎಂದು ಪ್ರಶ್ನಿಸಿದ ಅವರು ಡಾ.ಆಶಾ ಪುತ್ತೂರಾಯ ಅವರನ್ನು ತಕ್ಷಣವೇ ಇಲ್ಲಿಂದ ವರ್ಗಾವಣೆ ಮಾಡಬೇಕು ಹಾಗೂ ಇಲ್ಲಿಗೆ ಬೇರೆ ಅಧಿಕಾರಿಗಳನ್ನು ನೇಮಿಸಬೇಕು ಎಂದು ಆಗ್ರಹಿಸಿದರು.
ಪೊಲೀಸ್ ಅಧಿಕಾರಿಗಳು ಅಡ್ಯಾರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ರಸ್ತೆ ತಡೆ ಮಾಡಿದ್ದಾರೆ ಎಂದು ಸುಮೊಟೋ ಕೇಸು ದಾಖಲಿಸಿದ್ದಾರೆ. ಇಂದು ಮಹಿಳಾ ಠಾಣೆಯ ಮುಂಭಾಗದಲ್ಲಿ ಕೆಲವು ಮಂದಿ ಸೇರಿಕೊಂಡು ರಸ್ತೆ ತಡೆ ಮಾಡಿದರು. ಇದೀಗ ರಸ್ತೆ ತಡೆ ಮಾಡಿದವರ ವಿರುದ್ದ ಪೊಲೀಸರು ಸುಮೋಟೋ ಕೇಸು ದಾಖಲಿಸುತ್ತಾರಾ ಎಂಬುದನ್ನು ನಾವು ಕಾದು ನೋಡಬೇಕಾಗಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ದ.ಕ. ಮುಸ್ಲಿಂ ಯುವಜನ ಪರಿಷತ್ ಕಾರ್ಯದರ್ಶಿ ಬಶೀರ್ ಪರ್ಲಡ್ಕ, ಕೋಶಾಧಿಕಾರಿ ಅಶ್ರಫ್ ಬಾವು ಪಡೀಲ್, ಮಾಜಿ ಅಧ್ಯಕ್ಷ ಹಮೀದ್ ಸಾಲ್ಮರ ಉಪಸ್ಥಿತರಿದ್ದರು.