ತುಳು ಭಾಷೆಗಾಗಿ ಹೋರಾಟ, ತ್ಯಾಗಕ್ಕೂ ಸಿದ್ದ : ಕೆ.ಟಿ. ಆಳ್ವ

Update: 2025-04-27 19:51 IST
ತುಳು ಭಾಷೆಗಾಗಿ ಹೋರಾಟ, ತ್ಯಾಗಕ್ಕೂ ಸಿದ್ದ : ಕೆ.ಟಿ. ಆಳ್ವ
  • whatsapp icon

ಮಂಗಳೂರು: ತುಳು ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ನನ್ನ ಈ ಇಳಿವಯಸ್ಸಿನಲ್ಲೂ ನಾನು ತುಳು ಭಾಷೆಯ ಸಲುವಾಗಿ ಯಾವುದೇ ಹೋರಾಟ, ತ್ಯಾಗಕ್ಕೂ ಸಿದ್ಧ ಎಂದು ಹಿರಿಯ ಗಾಂಧಿವಾದಿ, ನಿವೃತ್ತ ಉಪನ್ಯಾಸಕ, ತುಳು ಬರಹಗಾರ ಕೆ.ಟಿ. ಆಳ್ವ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ವತಿಯಿಂದ ತೊಂಬತ್ತೆರಡರ ವಯಸ್ಸಿನ ಕೆ.ಟಿ. ಆಳ್ವರಿಗೆ ಮುಡಿಪು-ಪಜೀರ್‌ನ ಅವರ ನಿವಾಸದಲ್ಲಿ ಮುಡಿಪು ಪದವಿ ಪೂರ್ವ ಕಾಲೇಜಿನ ಹಳೆ ವಿದ್ಯಾರ್ಥಿಗಳ ಬಳಗದ ಸಹಭಾಗಿತ್ವದಲ್ಲಿ ಶನಿವಾರ ನಡೆದ ಸರಳ ಕಾರ್ಯಕ್ರಮದಲ್ಲಿ ನೀಡಲಾದ ಚಾವಡಿ ತಮ್ಮನ ಗೌರವನ್ನು ಸ್ವೀಕರಿಸಿ ಅವರು ಮಾತನಾಡಿದರು.

ಯಾವುದೇ ಸನ್ಮಾನ, ಪುರಸ್ಕಾರವನ್ನು ಜೀವನದಲ್ಲಿ ಎಂದೂ ಬಯಸದ ನನ್ನನ್ನು ತುಳು ಅಕಾಡಮಿ ಚಾವಡಿ ತಮ್ಮನದ ಮೂಲಕ ಗೌರವಿಸಿರುವುದು ನನ್ನ ಯೋಗ ಭಾಗ್ಯವೆಂದ ತಿಮ್ಮಣ್ಣ ಆಳ್ವ ತುಳು ಭಾಷೆಯ ಬಗ್ಗೆ ಜನ ಸಾಮಾನ್ಯರ ಕೈಗೆಟಕುವಂತಹ ಶಬ್ದಕೋಶವೊಂದನ್ನು ಹೊರ ತರಲು ಅಕಾಡಮಿ ಮುಂದಾಗಬೇಕೆಂದು ಸಲಹೆ ನೀಡಿದರು.

ಪಜೀರ್ ಗ್ರಾಪಂ ಅಧ್ಯಕ್ಷ ರಫೀಕ್ ಪಜೀರ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕಾಡಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ ತುಳುವಿಗಾಗಿ ಸೇವೆ ಸಲ್ಲಿಸಿದ ಹಿರಿಯ ಸಾಧಕರ ಮನೆಗೆ ತೆರಳಿ, ಊರವರ ಸಮ್ಮುಖದಲ್ಲಿ ಅಕಾಡಮಿಯ ಚಾವಡಿ ತಮ್ಮನದ ಗೌರವ ವನ್ನು ಅರ್ಪಿಸುವ ಕಾರ್ಯಕ್ರಮವನ್ನು ಅಕಾಡೆಮಿ ಆಯೋಜಿಸುತ್ತಿದೆ. ಆ ಮೂಲಕ ಅಕಾಡಮಿಯು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಿಲು ಮುಂದಾಗಿದೆ ಎಂದರು.

ನಿವೃತ್ತ ಪ್ರಾಂಶುಪಾಲ ಡಾ. ಎನ್.ಇಸ್ಮಾಯಿಲ್, ಹಿರಿಯ ಲೆಕ್ಕ ಪರಿಶೋಧಕ ಪುಂಡರಿಕಾಕ್ಷ, ಪಜೀರ್ ಗ್ರಾಪಂ ಸದಸ್ಯರಾದ ಇಮ್ತಿಯಾಜ್, ಸೀತಾರಾಮ ಶೆಟ್ಟಿ ಮುಗುಳಿ, ಭರತ್ ರಾಜ್ ಶೆಟ್ಟಿ, ಮಾಜಿ ತಾಪಂ ಸದಸ್ಯ ಉಮೇಶ್ ಮಾತನಾಡಿದರು. ಪತ್ರಕರ್ತ ಶಶಿಧರ ಪೊಯ್ಯತ್ತಬೈಲ್ ಅಭಿನಂದನಾ ಭಾಷಣ ಮಾಡಿದರು.

ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಲೇಖಕರಾದ ಚಂದ್ರಹಾಸ ಕಣಂತೂರು, ಶಶಿಧರ್ ಮಂಟಮೆ, ಬಾಬು ಪಿಲಾರ್, ಎಡ್ವರ್ಡ್ ತೊಕ್ಕೊಟ್ಟು, ಅಮಿತಾ ಪಾಲ್ಗೊಂಡರು. ಡಾ. ರಾಜರಾಮ್ ಆಳ್ವ ಉಪಸ್ಥಿತರಿದ್ದರು.

ಮುಡಿಪು ಸರಕಾರಿ ಪ.ಪೂ ಕಾಲೇಜಿನ ಹಳೆ ವಿದ್ಯಾರ್ಥಿ ಬಳಗದ ಪ್ರವೀಣ್ ಅಮ್ಮೆಂಬಳ ಕಾರ್ಯಕ್ರಮ ನಿರೂಪಿಸಿದರು. ಲೇಖಕ ಇಸ್ಮತ್ ಪಜೀರ್ ಸ್ವಾಗತಿಸಿದರು. ಅನ್ನಪೂರ್ಣೇಶ್ವರಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News