ವಿದ್ವಾನ್ ರಾಮಚಂದ್ರ ಉಚ್ಚಿಲ್ ಜನ್ಮ ಶತಮಾನೋತ್ಸವ ಸಂಸ್ಮರಣೆ

ಮಂಗಳೂರು, ಎ.27: ಚರಾ ಎಂಬ ನಾಮದಲ್ಲಿ ಬರೆಯುತ್ತಿದ್ದ ರಾಮಚಂದ್ರ ಉಚ್ಚಿಲರ ಲೇಖನಗಳು ವಿಡಂಬನಾತ್ಮಕವಾಗಿದ್ದು ಓದುಗರನ್ನು ಬಡಿದೆಬ್ಬಿಸುವ ಕೆಲಸ ಮಾಡುತ್ತಿದ್ದವು ಎಂದು ಹಿರಿಯ ವೈದ್ಯ ಮತ್ತು ಸಾಹಿತಿ ಡಾ. ರಮಾನಂದ ಬನಾರಿ ಹೇಳಿದ್ದಾರೆ.
ವಿದ್ವಾನ್ ರಾಮಚಂದ್ರ ಉಚ್ಚಿಲ್ ಜನ್ಮ ಶತಮಾನೋತ್ಸವ ಸಂಸ್ಮರಣ ಸಮಿತಿ, ಗುರು ಶಿಷ್ಯ ಒಕ್ಕೂಟ ಮತ್ತು ಚ.ರಾ. ಪ್ರಕಾಶನದ ಆಶ್ರಯದಲ್ಲಿ ಸೋಮೇಶ್ವರ ಉಚ್ಚಿಲದ ಬೋವಿ ಹಿರಿಯ ಪ್ರಾಥಮಿಕ ಶಾಲೆಯ ವಜ್ರ ಮಹೋತ್ಸವ ಸ್ಮಾರಕ ಕಟ್ಟಡ ಸಭಾಗೃಹದಲ್ಲಿ ನಡೆದ ವಿದ್ವಾನ್ ರಾಮಚಂದ್ರ ಉಚ್ಚಿಲ್ ಜನ್ಮ ಶತಮಾನೋತ್ಸವ ಸಂಸ್ಮರಣೆ, ತಾಳಮದ್ದಳೆ ಮತ್ತು ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮುಂಬೈಯ ಮರ್ಕೆಂಟೈಲ್ ಬ್ಯಾಂಕ್‌ನಲ್ಲಿ ಉದ್ಯೋಗಕ್ಕೆ ನಿಷ್ಠರಾಗಿದ್ದು ಪತ್ರಿಕಾ ಅಂಕಣಕಾರರಾಗಿ, ರಾತ್ರಿ ಶಾಲೆಯ ಅಧ್ಯಾಪಕರಾಗಿ ಅಪಾರ ಶಿಷ್ಯ ಸಂಪತ್ತನ್ನು ಹೊಂದಿದ್ದ ಉಚ್ಚಿಲರು ತಮ್ಮ ಜ್ಞಾನ ಶಕ್ತಿ, ಸ್ಮರಣ ಶಕ್ತಿ ಮತ್ತು ಇಚ್ಛಾಶಕ್ತಿಗೆ ಹೆಸರಾಗಿದ್ದರು. ಅವರ ಬದುಕು - ಬರಹಗಳನ್ನು ದಾಖಲೀಕರಿಸಿದ ಪುತ್ರಿ ಡಾ. ವಾಣಿ ಉಚ್ಚಿಲ್ಕರ್ ಅವರದು ಶ್ರೇಷ್ಠ ಕಾರ್ಯ’ ಎಂದು ಡಾ. ಬನಾರಿ ನುಡಿದರು.
ಹಿರಿಯ ಸಾಹಿತಿ, ಸಂಶೋಧಕ ಹಾಗೂ ಮುಂಬೈ ವಿಶ್ವವಿದ್ಯಾನಿಲಯ ಕನ್ನಡ ವಿಭಾಗದ ಮುಖ್ಯಸ್ಥ ಡಾ. ತಾಳ್ತಜೆ ವಸಂತಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಿದ್ವಾಂಸ ಮತ್ತು ಯಕ್ಷಗಾನ ಅರ್ಥಧಾರಿ ಡಾ.ಎಂ.ಪ್ರಭಾಕರ ಜೋಶಿ ಸಂಸ್ಮರಣ ಭಾಷಣ ಮಾಡಿದರು.
ದಿ.ರಾಮಚಂದ್ರ ಉಚ್ಚಿಲರ ನೆನಪಿನ 4 ಸಂಪುಟಗಳ ಸಹಿತ 8 ಕೃತಿ ಸಂಚಯಗಳನ್ನು ಬಿಡುಗಡೆಗೊಳಿಲಾ ಯಿತು. ಈ ಸಂದರ್ಭ ಡಾ.ವಾಣಿ ಎನ್.ಉಚ್ಙಿಲ್ಕರ್‌ರ ’ಭಾವ ತರಂಗ’ ಕವನ ಸಂಕಲನ, ’ಜ್ಞಾನ ದರ್ಶನ’ ಪ್ರಬಂಧ ಸಂಗ್ರಹ, ’ನನ್ನ ಚೇತನ’ ಸಂಸ್ಮರಣ ಲೇಖನಗಳು ಹಾಗೂ ನವೀನ್ ಎನ್.ಉಚ್ಚಿಲ್ಕರ್ ಮತ್ತು ನವನೀತ ಎನ್.ಉಚ್ಚಿಲ್ಕರ್ ಸಂಪಾದಿಸಿದ ’ಎಲೆಮರೆಯ ಬರಹಗಾರ ದಿವಂಗತ ನಾರಾಯಣ ಕೆ. ಉಚ್ಚಿಲ್ಕರ್’ ಕೃತಿಗಳನ್ನು ಡಾ. ತಾಳ್ತಜೆ ವಸಂತ ಕುಮಾರ್ ಬಿಡುಗಡೆಗೊಳಿಸಿದರು.
ಅಡ್ಕ ಭಗವತಿ ಕ್ಷೇತ್ರದ ಮೂಲ್ಯಚ್ಚ ರವೀಂದ್ರನಾಥ ಆರ್.ಉಚ್ಚಿಲ್, ಕಾರ್ಯಕಾರಿ ಸಮಿತಿಯ ಚಿದಾನಂದ ಆರ್. ಉಚ್ಚಿಲ್, ರಾಜಶೇಖರ ಆರ್. ಉಚ್ಚಿಲ್, ನವನೀತ ಎನ್. ಉಚ್ಚಿಲ್ಕರ್, ವಾಸುದೇವ ಉಚ್ಚಿಲ್, ನಿಧೀಶ್ ಉಪಸ್ಥಿತರಿದ್ದರು.
ಚರಾ ಜನ್ಮ ಶತಮಾನೋತ್ಸವ ಸಲಹಾ ಸಮಿತಿಯ ಸದಸ್ಯ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ ದರು. ಗ್ರಂಥ ಸಂಪಾದಕಿ ಹಾಗೂ ಚರಾ ಪ್ರಕಾಶನದ ಕಾರ್ಯದರ್ಶಿ ಡಾ.ವಾಣಿ ಎನ್.ಉಚ್ಚಿಲ್ಕರ್ ಕೃತಿ ಪರಿಚಯ ನೀಡಿದರು. ಕಲಾ ಗಂಗೋತ್ರಿಯ ಕೆ.ಸದಾಶಿವ ಮಾಸ್ಟರ್ ವಂದಿಸಿದರು.