‘ದೇಶಕ್ಕೆ ಮಾಡಿದ ಅಪಮಾನ’ ಸಿಎಂ ಹೇಳಿಕೆಗೆ ಸಂಸದ ಬ್ರಿಜೇಶ್ ಚೌಟ ಖಂಡನೆ

ಬ್ರಿಜೇಶ್ ಚೌಟ
ಮಂಗಳೂರು: ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರ ದಾಳಿಯ ವಿರುದ್ದ ದೇಶವೇ ಒಗ್ಗಟ್ಟಿನಿಂದ ನಿಂತಿರುವಾಗ ಸಾರ್ವಜನಿಕ ಸ್ಥಾನದಲ್ಲಿರುವ ಸಿಎಂ ಸಿದ್ದರಾಮಯ್ಯನವರು ಸಂವೇದನೆ ರಹಿತರಂತೆ, ಬೇಜವಾಬ್ದಾರಿಯುತ, ಬಾಲಿಶ ಮತ್ತು ರಾಜಕೀಯ ಅಭದ್ರತೆಯಿಂದ ಕೂಡಿದ ಹೇಳಿಕೆ ನೀಡಿರುವುದು ನಿಜಕ್ಕೂ ವಿಷಾದನೀಯ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ.
ಪಾಕಿಸ್ತಾನದ ಜೊತೆ ಯುದ್ಧ ಸಾರುವ ಅಗತ್ಯ ಇಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಖಂಡಿಸಿರುವ ಚೌಟ ಅವರು, ಪಹಲ್ಗಾಮ್ ನಲ್ಲಿ ನಡೆದ ಘಟನೆ ನಮ್ಮ ರಾಷ್ಟ್ರದ ಮೇಲೆ ನಡೆದ ಹೇಡಿತನ ದಾಳಿ. ಜವಾಬ್ದಾರಿಯುತ ಸ್ಥಾನದಲ್ಲಿ ಅದರಲ್ಲೂ ಮುಖ್ಯಮಂತ್ರಿ ಸ್ಥಾನದಲ್ಲಿದ್ದುಕೊಂಡು ‘ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವವರನ್ನು ಶಿಕ್ಷಿಸುವುದು ಬೇಡ ನಮ್ಮ ಭದ್ರತೆಯನ್ನು ಬಲಪಡಿಸಿ’ ಎಂಬ ರೀತಿಯ ಹೇಳಿಕೆ ನೀಡಿರುವುದು ಅಕ್ಷಮ್ಯ ಎಂದು ಹೇಳಿಕೆ ನೀಡಿದ್ದಾರೆ.
ಭದ್ರತಾ ಪಡೆಗಳಿರಲಿಲ್ಲ ಎಂಬ ಸುಳ್ಳು ಸುದ್ದಿ ಹಬ್ಬಿಸುವುದು ಅಥವಾ ಭಯೋತ್ಪಾದಕ ದಾಳಿಯನ್ನು ಸಲೀಸಾಗಿ ಗುಪ್ತಚರ ವೈಫಲ್ಯ ಎಂದು ಪರಿಗಣಿಸುವುದು ಬೇಜವಾಬ್ದಾರಿತನದ ಪರಮಾವಧಿ ಆಗಿದೆ ಎಂದು ಸಂಸದ ಚೌಟ ಹೇಳಿಕೆಯಲ್ಲಿ ತಿಳಿಸಿದ್ದಾರೆ.