ಮಂಗಳೂರು ಮನಪಾ ವ್ಯಾಪ್ತಿಯಲ್ಲಿ ಹೂಳೆತ್ತುವ ಕಾಮಗಾರಿಗೆ ಸಿಗದ ವೇಗ!

ಸಾಂದರ್ಭಿಕ ಚಿತ್ರ
ಮಂಗಳೂರು: ಕರಾವಳಿಯಲ್ಲಿ ಮುಂಗಾರು ಪೂರ್ವ ಮಳೆ ಸುರಿಯಲು ಆರಂಭಗೊಂಡಿದೆ. ಯಾವುದೇ ಕ್ಷಣ ಇದು ಬಿರುಸುಗೊಳ್ಳಬಹುದು ಎಂದು ಹವಾಮಾನ ಇಲಾಖೆಯು ತಿಳಿಸಿದೆ. ಆದರೆ ಮಳೆಗಾಲವನ್ನು ಎದುರಿಸಲು ಮಂಗಳೂರು ಮಹಾನಗರ ಪಾಲಿಕೆಯು ಎಚ್ಚೆತ್ತುಕೊಂಡಿಲ್ಲ ಎಂಬ ಮಾತು ಕೇಳಿಬರುತ್ತಿದೆ.
ಅಂದರೆ ನಗರದ ಚರಂಡಿಗಳು, ರಾಜಕಾಲುವೆಗಳಲ್ಲಿ ತುಂಬಿರುವ ಹೂಳುಗಳನ್ನು ಮೇಲೆಕ್ಕೆತ್ತುವ ಕಾಮಗಾರಿಗೆ ವೇಗ ನೀಡಿಲ್ಲ. ಮಳೆಗಾಲದಲ್ಲಿ ಸರಾಗವಾಗಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡದಿ ದ್ದರೆ ಕೃತಕ ನೆರೆ ಸೃಷ್ಟಿಯಾಗಿ ಅಂಗಡಿ, ಮನೆಗಳಿಗೆ ನುಗ್ಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಅಂದಹಾಗೆ, ತುಂಬಿದ ಹೂಳನ್ನು ಮೇಲಕ್ಕೆ ಎತ್ತದ ಕಾರಣ ಪ್ರತೀ ಮಳೆಗಾಲದಲ್ಲಿ ಮಂಗಳೂರು ನಾನಾ ಸಮಸ್ಯೆಗಳನ್ನು ಎದುರಿಸುವುದು ಸಾಮಾನ್ಯ ಎಂಬಂತಾಗಿದೆ. ಈ ಹಿಂದಿನ ವರ್ಷಗಳಲ್ಲಿ ಮಳೆಗಾಲದಲ್ಲಿ ಸಂಭವಿಸಿರುವ ಘಟನೆಗಳನ್ನು ಆಡಳಿತ ವ್ಯವಸ್ಥೆಯು ಗಂಭೀರವಾಗಿ ಪರಿಗಣಿಸಬೇಕಿದೆ. ಇಲ್ಲದಿದ್ದಲ್ಲಿ ನಗರದ ನಿವಾಸಿಗಳು ಮತ್ತೆ ಸಂಕಷ್ಟ ಅನುಭವಿಸುವ ಸಾಧ್ಯತೆಯಿದೆ. ಮಂಗಳೂರು ಮಹಾನಗರ ಪಾಲಿಕೆಯ ಎಲ್ಲಾ ೬೦ ವಾರ್ಡ್‌ಗಳಲ್ಲಿ ಮೊದಲ ಹಂತದ ಕಾಮಗಾರಿಗಳನ್ನು ಮುಗಿಸಿದರೆ ಬಳಿಕದ ದಿನಗಳಿಗೆ ಸ್ವಲ್ಪ ಅನುಕೂಲವಾಗಲಿದೆ. ಹಾಗಾಗಿ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ, ಮಳೆ ನೀರು ನಿಲ್ಲದಂತೆ ಯೋಜನೆ ರೂಪಿಸಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.
ನಗರ ವ್ಯಾಪ್ತಿಯಲ್ಲಿ ರಾಜ ಕಾಲುವೆಗಳ, ಚರಂಡಿಗಳ ಹೂಳೆತ್ತುವ ಪ್ರಕ್ರಿಯೆ ಈಗಾಗಲೇ ಆರಂಭ ಗೊಂಡಿದೆ. ಆದರೆ ಕಾಮಗಾರಿ ಅರೆಬರೆ ಮಾಡದೆ ವ್ಯವಸ್ಥಿತವಾಗಿ ಹೂಳೆತ್ತುವಂತೆ ಪಾಲಿಕೆ ಅಧಿಕಾರಿ ಗಳು ಗಮನಿಸಬೇಕಾಗಿದೆ. ಈಗಾಗಲೆ ಹೂಳೆತ್ತಿ ದಂಡೆಯಲ್ಲಿ ಹಾಕಿರುವುದನ್ನು ಕೂಡಲೆ ತೆರವುಗೊಳಿಸ ಬೇಕು. ಇಲ್ಲದಿದ್ದರೆ ಮಳೆ ಸುರಿದರೆ ಅವು ಮತ್ತೆ ನೀರಿನೊಂದಿಗೆ ಕಾಲುವೆಗೆ ಇಳಿಯುವ ಸಾಧ್ಯತೆ ಇದೆ. ಇದರಿಂದ ಮಾಡಿದ ಕೆಲಸ ವ್ಯರ್ಥವಾಗಲಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಆದರೆ ಪೂರ್ಣಗೊಳ್ಳದ ಕಾರಣ ಮಳೆ ಬಿರುಸು ಪಡೆದರೆ ಸಮಸ್ಯೆ ತೀವ್ರಗೊಳ್ಳಲಿದೆ. ಪ್ರಮುಖ ರಸ್ತೆಯ ಹಲವು ಕಡೆಗಳಲ್ಲಿ ಕಾಣಿಸಿಕೊಂಡ ಗುಂಡಿಗಳನ್ನು ಇನ್ನೂ ಮುಚ್ಚಿಲ್ಲ, ನಗರದೊಳಗಡೆ ಯಾವುದೇ ಮುನ್ನೆಚ್ಚರಿಕೆ ಫಲಕ ಹಾಕದೆ ರಸ್ತೆ ಬದಿಗಳನ್ನು ಅಗೆದು ಅಲ್ಲೇ ಮಣ್ಣು ರಾಶಿ ಹಾಕಿರುವುದು ಕೂಡ ಕಂಡು ಬಂದಿವೆ. ಅಲ್ಲಲ್ಲಿ ಪೈಪ್ ಅಳವಡಿಸಲು ರಸ್ತೆ ಬದಿ ಮಣ್ಣು ಅಗೆಯುವ ಪ್ರಕ್ರಿಯೆ ಮುಂದುವರಿದಿದೆ. ನಗರದ ಹಂಪನ ಕಟ್ಟೆಯಲ್ಲಿ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್, ಮೋರ್ಗನ್ಸ್‌ಗೇಟ್ ಬಳಿ ರೈಲ್ವೆ ಅಂಡರ್ ಪಾಸ್ ಕಾಮಗಾರಿಗಳು ಪ್ರಗತಿಯಲ್ಲಿದೆ. ಬಿರುಸಿನ ಮಳೆಕ್ಕಿಂತ ಮುನ್ನ ಈ ಬಗ್ಗೆ ಎಚ್ಚರಿಕೆ ವಹಿಸದಿದ್ದರೆ ಇಲ್ಲಿ ಸಮಸ್ಯೆ ಎದುರಾಗುವ ಅಪಾಯವಿದೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿವೆ.
*ಮಳೆಗಾಲಕ್ಕೆ ಸಮರ್ಪಕವಾಗಿ ಸಿದ್ಧತೆ ನಡೆಸದ ಕಾರಣ 2019ರ ಮೇ 29ರಂದು ಸುರಿದ ಮಹಾ ಮಳೆಗೆ ಮಂಗಳೂರು ನಗರದ ಬಹುತೇಕ ಪ್ರದೇಶಗಳಲ್ಲಿ ಕೃತಕ ನೆರೆಯುಂಟಾಗಿ ಜಲಾವೃತ ಗೊಂಡಿತ್ತು. ಕಳೆದ ಬಾರಿಯೂ ಪೂರ್ವ ಮುಂಗಾರು ವೇಳೆ ಸುರಿದ ಮಳೆಗೆ ನಗರದ ಕೊಟ್ಟಾರ ಚೌಕಿ, ಪಂಪ್‌ವೆಲ್ ಭಾಗದಲ್ಲಿ ನೀರು ಉಕ್ಕಿ ರಸ್ತೆಗಳು ಜಲಾವೃತಗೊಂಡಿತ್ತು. ಕೊಟ್ಟಾರ ಚೌಕಿಯಲ್ಲಿ ರಸ್ತೆಗೆ ಸಮನಾಗಿ ತೋಡಿನಲ್ಲಿ ಮಳೆ ನೀರು ಹರಿದ ಪರಿಣಾಮ ಆಟೊ ರಿಕ್ಷಾ ರಸ್ತೆಬಿಟ್ಟು ನೀರಿಗೆ ಬಿದ್ದ ಕಾರಣ ಚಾಲಕ ಮೃತಪಟ್ಟಿದ್ದರು.
"ಮಳೆಗಾಲದ ಸಿದ್ಧತೆಗೆ ಸಂಬಂಧಿಸಿ ರಾಜಕಾಲುವೆಗಳ ಹಾಗೂ ತೋಡುಗಳ ಹೂಳು ತೆಗೆಯಲು ಟೆಂಡರ್ ಪ್ರಕ್ರಿಯೆ ನಡೆದು ಕಾಮಗಾರಿ ಆರಂಭಗೊಂಡಿದೆ. ಕೆಲಸ ಕಾರ್ಯಗಳ ಬಗ್ಗೆ ಪಾಲಿಕೆ ಅಧಿಕಾರಿಗಳು ನಿಗಾ ವಹಿಸುತ್ತಿದ್ದಾರೆ. ಮಳೆಗಾಲದ ಮುಂಚಿತವಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ"
-ರವಿಚಂದ್ರ ನಾಯಕ್, ಆಯುಕ್ತರು, ಮಂಗಳೂರು ಮನಪಾ