ಪುತ್ತೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಸರ್ಕಾರಿ ವೈದ್ಯರು ಪಾಲ್ಗೊಂಡಿಲ್ಲ: ಡಾ. ದೀಪಕ್ ರೈ ಸ್ಪಷ್ಟನೆ

ಪುತ್ತೂರು: ಇಲ್ಲಿನ ಮಹಿಳಾ ಪೊಲೀಸ್ ಠಾಣೆಯ ಬಳಿ ನಡೆದ ಪ್ರತಿಭಟನೆಯಲ್ಲಿ ಯಾವುದೆ ಸರ್ಕಾರಿ ವೈದ್ಯರು ಪಾಲ್ಗೊಂಡಿಲ್ಲ ಎಂದು ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘದ ದ.ಕ ಜಿಲ್ಲಾ ಶಾಖೆಯ ಅಧ್ಯಕ್ಷ ಡಾ. ದೀಪಕ್ ರೈ ಸ್ಪಷ್ಟನೆ ನೀಡಿದ್ದಾರೆ.
ಅವರು ಸೋಮವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಿ ಠಾಣೆಗೆ ತರುವ ತನಕ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ಮಾಡುವ ಮೂಲಕ ನಮ್ಮ ನೋವನ್ನು ತೋರಿಸುತ್ತೇವೆ. ಈ ಬಗ್ಗೆ ಭಾರತೀಯ ವೈದ್ಯಕೀಯ ಸಂಘ, ಡಾಕ್ಟರ್ಸ್ ಪೋರಂ ಪುತ್ತೂರು, ಇಂಡಿಯನ್ ಡೆಂಟಲ್ ಅಸೋಸಿಯೇಶನ್ ಪುತ್ತೂರು, ಆಯುಷ್ ಫೆಡರೇಶನ್ ಆಫ್ ಇಂಡಿಯಾ ಪುತ್ತೂರು, ಆಸ್ಪಿಟಲ್ಸ್ ಅಸೋಸಿಯೇಶನ್ ಪುತ್ತೂರು, ಪೊಲೀಸ್ ಇಲಾಖೆ ಪುತ್ತೂರು, ಕರ್ನಾಟಕ ಸರಕಾರಿ ನೌಕರರ ಸಂಘ ಪುತ್ತೂರು ಮತ್ತು ಜಿಲ್ಲಾ ಶಾಖೆ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಮಂಗಳೂರು ಮತ್ತು ಸುಳ್ಯದ ಪದಾಧಿಕಾರಿಗಳು ಮತ್ತು ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. ಇದರಲ್ಲಿ ಕೆಲವು ರಾಜಕೀಯ ವ್ಯಕ್ತಿಗಳು ಸೇರಿಕೊಂಡಿರುವುದು ಗೊತ್ತಾಗಿದೆ. ಆದರೆ ನಮ್ಮ ಸಂಘಟನೆ ಯಾವುದೇ ಪಕ್ಷ, ಪಾರ್ಟಿಗೆ ಸೇರಿಲ್ಲ ಎಂದು ಸ್ಪಷ್ಟಪಡಿಸುತ್ತಿದ್ದೇನೆ ಎಂದರು.
ಘಟನೆ ನಡೆದ ತಕ್ಷಣ ಡಾ. ಆಶಾ ಪುತ್ತೂರಾಯ ಅವರು ನನಗೆ ಕರೆ ಮಾಡಿ ತಿಳಿಸಿದರು. ಆ ಸಂದರ್ಭ ನಾನು ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಜೊತೆಯಲ್ಲಿ ಮೀಟಿಂಗ್‌ನಲ್ಲಿದ್ದೆವು. ತಕ್ಷಣ ನಾವು ಅಲ್ಲಿಗೆ ಬಂದು ಮಾಹಿತಿ ಪಡೆದು ಆರಂಭದಲ್ಲಿ ಆರೋಗ್ಯ ರಕ್ಷಾ ಸಮಿತಿ ಸದಸ್ಯರಿಗೆ ಕರೆ ಮಾಡಿ ತಿಳಿಸಿದ್ದೆವು. ಅವರು ಊರಿನಲ್ಲಿ ಇಲ್ಲ. ಇನ್ನೋರ್ವ ಸದಸ್ಯನಿಗೆ ತಿಳಿಸುತ್ತೇನೆ ಎಂದು ಹೇಳಿದ್ದರು. ಜೊತೆಗೆ ಶಾಸಕರಿಗೂ ಕರೆ ಮಾಡಿದ್ದೆವು ಆದರೆ ಅವರ ಕರೆ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಬಳಿಕ ಅವರ ಸಹಾಯಕರಿಗೂ ಕರೆ ಮಾಡಿ ಹೇಳಿದ್ದೇವೆ. ಶಾಸಕರ ಜೊತೆ ಇರುವ ಇನ್ನೋರ್ವರಿಗೂ ಕರೆ ಮಾಡಿ ತಿಳಿಸಿದ್ದೇವೆ. ಇದೆಲ್ಲದ್ದಕ್ಕೂ ನಮ್ಮಲ್ಲಿ ಕಾಲ್ ರೆಕಾರ್ಡ್ ಇದೆ. ಬಳಿಕ ನಾವು ಪೊಲೀಸರಿಗೆ ದೂರು ನೀಡಿದ್ದೇವೆ. ಪ್ರಸವದ ನಂತರದ ನವಜಾತ ಶಿಶುಗಳ ವಿಭಾಗದಲ್ಲಿ ಗಂಡಸರಿಗೆ ಪ್ರವೇಶವಿಲ್ಲ. ಆದರೆ ಡಾ. ಅಶಾ ಪುತ್ತೂರಾಯ ಅವರು ರೌಂಡ್ಸ್ ಮಾಡುವಾಗ ಹೊರಗಿನಿಂದ ಬಂದ ನಾಲ್ವರು ಬೆಡ್‌ನಲ್ಲಿ ಕೂತಿರುವುದನ್ನು ನೋಡಿ ಅವರನ್ನು ಹೊರಗೆ ಹೋಗಲು ತಿಳಿಸಿದ್ದರು. ಈ ವೇಳೆ ಅವರು ವೈದ್ಯರನ್ನು ನಿಂದಿಸಿದ್ದಾರೆ. ಈ ಸಂದರ್ಭ ಪೊಲೀಸರಿಗೆ ಮಾಹಿತಿ ನೀಡಿದಾಗ ಪೊಲೀಸರು ಅವರನ್ನು ಕರೆದೊಯ್ದಿದ್ದಾರೆ. ಸಂಜೆ ಆರೋಪಿಯ ವಿರುದ್ಧ ಎಫ್.ಐ.ಆರ್ ಆಗಿದೆ ಎಂದು ಹೇಳಿದರು.
ಆಸ್ಪತ್ರೆಯಲ್ಲಿ ಇಂತಹ ಘಟನೆ ನಡೆಯುವುದು ಇದು ಮೊದಲಲ್ಲ. 6 ವರ್ಷಗಳ ಹಿಂದೆ ಆಸ್ಪತ್ರೆಯಲ್ಲಿದ್ದ ಮಕ್ಕಳ ತಜ್ಞೆ ಡಾ. ಅರ್ಚನಾ ಕರಿಕ್ಕಳ ಅವರಿಗೆ ಅಗಿನ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಅವರು ನಿಂಧಿಸಿದ್ದರು. ಆಗ ಅವರ ವಿರುದ್ದವೂ ನಾವು ದೂರು ನೀಡಿ ಎಫ್‌ಐಆರ್ ಮಾಡಿಸಿದ್ದೇವೆ. ಆ ಬಳಿಕ ಅವರು ಕ್ಷಮೆ ಕೇಳಿದ್ದು ಅದನ್ನು ಬಿಟ್ಟು ಬಿಡಲಾಗಿತ್ತು. ಈ ಘಟನೆಯೂ ಕೂಡಾ ಡಾ. ಅಶಾ ಪುತ್ತೂರಾಯ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದವರು ಕ್ಷಮೆ ಕೇಳಿದರೆ ಮುಗಿದು ಹೋಗುತ್ತಿತ್ತು. ಘಟನೆಯ ಕುರಿತು ಪೊಲೀಸರಿಗೆ ದೂರು ನೀಡಿದ ಬಳಿಕ ನಾವು ನಮ್ಮ ಸಂಘಟನೆಯಾದ ಕರ್ನಾಟಕ ಸರಕಾರಿ ಮೆಡಿಕಲ್ ಆಫಿಸರ್ ಸಂಘಕ್ಕೆ ಮಾತ್ರ ಹೇಳಿರುತ್ತೇವೆ. ಆ ನಂತರ ನಾವು ನಮ್ಮ ಕರ್ತವ್ಯವನ್ನು ಮುಂದುವರಿಸಿದ್ದೇವೆ. ಎಲ್ಲೂ ಕರ್ತವ್ಯ ಸ್ಥಗಿತಗೊಳಿಸಿಲ್ಲ. ಆದರೆ ರಾತ್ರಿ ಪೊಲೀಸ್ ಠಾಣೆ ಮುಂದೆ ಜನರು ಜಮಾಯಿಸಿದ್ದಾರೆ ಎಂದು ನನಗೆ ಕಾಲ್ ಬಂತು. ಆದರೆ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಜನರು ಜಮಾಯಿಸಿದ್ದಾರೆಂದು ನನಗೆ ಮಾಧ್ಯಮದ ಮೂಲಕವೇ ಗೊತ್ತಾಗಿದ್ದು. ಇದರಲ್ಲಿ ಕೆಲವು ರಾಜಕೀಯ ವ್ಯಕ್ತಿಗಳು ಸೇರಿಕೊಂಡಿ ರುವುದು ಗೊತ್ತಾಗಿದೆ. ಆದರೆ ನಮ್ಮ ಸಂಘಟನೆ ಯಾವುದೇ ಪಕ್ಷ, ಪಾರ್ಟಿಗೆ ಸೇರಿಲ್ಲ ಎಂದು ನಾನು ಸ್ಪಷ್ಟವಾಗಿ ಹೇಳುತ್ತೇನೆ ಎಂದು ಡಾ. ದೀಪಕ್ ರೈ ಹೇಳಿದರು.
ಆಸ್ಪತ್ರೆಯ ಹೆರಿಗೆ ಮತ್ತು ಪ್ರಸೂತಿ ತಜ್ಞೆ ಡಾ. ಅರ್ಚನಾ ಕಾವೇರಿ ಅವರು ಮಾತನಾಡಿ ನಾವು ರಾತ್ರಿ ಪಾಳಿಯಲ್ಲೂ ಕೆಲಸ ಮಾಡುವ ನಿಟ್ಟಿನಲ್ಲಿ ಹಗಲು ರಾತ್ರಿ ಕೆಲಸ ಮಾಡಬೇಕಾಗಿದೆ. ಆಸ್ಪತ್ರೆಯಲ್ಲಿ ಸಂದರ್ಶಕರಿಗೆ ಇಂತಿಷ್ಟೆ ಸಮಯದಲ್ಲಿ ಬರಲು ಫಲಕ ಹಾಕಲಾಗಿದೆ. ಆದರೆ ಇದನ್ನು ಜನರು ಪಾಲಿಸು ತ್ತಿಲ್ಲ. ಅದನ್ನು ತಿಳಿಸುವ ವ್ಯವಸ್ಥೆಗೆ ಸರಿಯಾದ ಭದ್ರತಾ ಸಿಬ್ಬಂದಿಗಳ ಕೊರತೆ ಇದೆ. ಕೆಲವರು ಒಳಗೆ ಬಂದಾಗ ನಾವು ಅವರಿಗೆ ತಿಳಿಸಿ ಹೊರಗೆ ಕಳುಹಿಸುತ್ತೇವೆ. ಹೊರಗಿನಿಂದ ಜನರು ಪ್ರಸವ ನಂತರದ ಕೊಠಡಿಗೆ ಬಂದರೆ ಅಲ್ಲಿ ಮಕ್ಕಳಿಗೆ ಅಥವಾ ತಾಯಂದಿರಿಗೆ ಸೋಂಕು ಹರಡುವ ಸಂಭವ ಇದೆ. ಅವರ ಆರೋಗ್ಯ ಕಾಪಾಡಲು ಮುನ್ನೆಚ್ಚರಿಕೆ ಕೈಗೊಂಡಿದ್ದೇವೆ. ವೈದ್ಯರು ಯಾವತ್ತಿದ್ದರೂ ನಮ್ಮ ರೋಗಿಗಳಿಗೆ ಏನು ಆಗಬಾರದು ಎಂಬ ನೆಲೆಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳ ಬೇಕು. ಆದರೆ ಆಸ್ಪತ್ರೆಗೆ ಹಲವು ಕಡೆಯಿಂದ ಒಳಗೆ ಬರಲು ಬಾಗಿಲುಗಲಿವೆ ಇದರಿಂದಾಗಿ ತುಂಬಾ ಸಮಸ್ಯೆಯಾಗಿದೆ. ಈ ಬಗ್ಗೆ ಸೂಕ್ತ ವ್ಯವಸ್ಥೆಗಳು ಆಗಬೇಕು ಎಂದು ಆಗ್ರಹಿಸಿದರು.
ಸುದ್ಧಿಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ವೈದ್ಯಾಧಿಕಾರಿಗಳ ಸಂಘದ ಕಾರ್ಯದರ್ಶಿ ಡಾ. ನಿಖಿಲ್, ಆಸ್ಪತ್ರೆಯ ವೈದ್ಯರಾದ ಡಾ. ಯದುರಾಜ್, ಡಾ ಅಜೇಯ್ ಉಪಸ್ಥಿತರಿದ್ದರು.