ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ಕಳವು ಪ್ರಕರಣ: ಮಹಿಳೆ ಸೆರೆ

Update: 2025-04-29 20:21 IST
ಗ್ರಾಹಕರ ಸೋಗಿನಲ್ಲಿ ಬಂದು ಚಿನ್ನಾಭರಣ ಕಳವು ಪ್ರಕರಣ: ಮಹಿಳೆ ಸೆರೆ
  • whatsapp icon

ಉಪ್ಪಿನಂಗಡಿ : ಇಲ್ಲಿನ ಹಳೇ ಬಸ್ ನಿಲ್ದಾಣದ ಬಳಿಯ ಚಿನ್ನಾಭರಣ ಮಳಿಗೆಯೊಂದಕ್ಕೆ ಎ.17 ರಂದು ಗ್ರಾಹಕರ ಸೋಗಿನಲ್ಲಿ ಬಂದ ಮಹಿಳೆಯೊಬ್ಬರು ಒಟ್ಟು 72 ಗ್ರಾಮ್ ತೂಕದ 4.80 ಲಕ್ಷ ರೂ ಮೌಲ್ಯದ ಚಿನ್ನಾಭರಣವನ್ನು ಎಗರಿಸಿದ ಘಟನೆಗೆ ಸಂಬಂಧಿಸಿ ಆಭರಣವನ್ನು ಎಗರಿಸಿದ್ದ ಮಹಿಳೆಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಹಸನ್ ಟವರ್ಸ್ ಎಂಬಲ್ಲಿರುವ ದಿನಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಎಂಬ ಚಿನ್ನಾಭರಣ ಅಂಗಡಿಗೆ ಎ 17 ರ ಮಧ್ಯಾಹ್ನ 2.30 ಗ್ರಾಹಕರ ಸೋಗಿನಲ್ಲಿ ಬಂದ ಬುರ್ಖಾಧಾರಿ ಮಹಿಳೆಯೊಬ್ಬರು ಮದುವೆ ಕಾರ್ಯಕ್ರಮಕ್ಕೆ 30 ಗ್ರಾಮ್ ಚಿನಾಭರಣ ಬೇಕಾಗಿದೆ. ನನ್ನ ಮನೆಯವರು ನಾಳೆ ಬಂದು ಹಣಕೊಟ್ಟು ಚಿನ್ನಾಭರಣವನ್ನು ತೆಗೆದುಕೊಳ್ಳುತ್ತಾರೆ. ನಾನೀಗ ಚಿನ್ನಾಭರಣವನ್ನು ಸೆಲೆಕ್ಟ್ ಮಾಡಿ ಹೋಗುತ್ತೇನೆ ಎಂದು ತಿಳಿಸಿದ್ದು, ಅಲ್ಲಿನ ಸಿಬ್ಬಂದಿ ಬೇರೆ ಬೇರೆ ನಮೂನೆಯ ಚಿನ್ನಾಭರಣವನ್ನು ಟ್ರೇಯಲ್ಲಿಟ್ಟು ತೋರಿಸಿದ್ದಾರೆ. ಅದರಲ್ಲಿನ ಕೆಲವೊಂದು ಆಭರಣವನ್ನು ಗುರುತಿಸಿ , ನಾಳೆ ದಿನ ನನ್ನ ಮನೆಯವರು ಬಂದು ಹಣಕೊಟ್ಟು ಈ ಎಲ್ಲಾ ಆಭರಣವನ್ನು ಖರೀದಿಸುತ್ತಾರೆ ಎಂದು ತಿಳಿಸಿ ಹೋಗಿದ್ದರು.

ರಾತ್ರಿ ವೇಳೆ ಎಂದಿನಂತೆ ಚಿನ್ನಾಭರಣದ ಸ್ಟಾಕ್ ಚೆಕ್ ಮಾಡುವ ವೇಳೆ ಆಭರಣದ ಕೊರತೆ ಕಂಡು ಬಂದಿದ್ದು, ಪರಿಶೀಲನೆಯ ವೇಳೆ 24 ಗ್ರಾಮ್ ತೂಕದ ಚಿನ್ನದ ಕಾಲ್ ಚೈನ್ 2 ಜೊತೆ, 8 ಗ್ರಾಮ್ ತೂಕದ ಚಿನ್ನದ ಬ್ರಾಸ್ ಲೈಟ್ ಒಂದು, 16 ಗ್ರಾಮ್ ತೂಕದ ಚಿನ್ನದ ಸರ ಒಂದು ಹೀಗೆ ಒಟ್ಟು 72 ಗ್ರಾಮ್ ತೂಕದ ಚಿನ್ನಾಭರಣವನ್ನು ಗ್ರಾಹಕರ ಸೋಗಿನಲ್ಲಿ ಬಂದ ಬುರ್ಕಾಧಾರಿ ಮಹಿಳೆ ಎಗರಿಸಿರುವುದು ಕಂಡು ಬಂದಿತ್ತು. ಎಗರಿಸಲ್ಪಟ್ಟ ಚಿನಾಭರಣದ ಮೌಲ್ಯ 4.80 ಲಕ್ಷ ಎಂದು ದೂರಲಾಗಿತ್ತು.

ಉಪ್ಪಿನಂಗಡಿಯಲ್ಲಿ ಕದ್ದು ಉಪ್ಪಿನಂಗಡಿಯಲ್ಲೇ ಮಾರಾಟಕ್ಕೆ ಯತ್ನ

ಹಳೇ ಬಸ್ ನಿಲ್ದಾಣದ ಬಳಿಯ ದಿನಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಎಂಬ ಚಿನ್ನಾಭರಣ ಮಳಿಗೆಯಿಂದ ಎಗರಿಸಿದ ಚಿನ್ನಾಭರಣವನ್ನು ಉಪ್ಪಿನಂಗಡಿಯ ಸರಕಾರಿ ಮಾದರಿ ಶಾಲಾ ಬಳಿಯ ಚಿನ್ನಾಭರಣ ಅಂಗಡಿಗೆ ತಂದು ಮಾರಾಟಕ್ಕೆ ಯತ್ನಿಸಿದಾಗ ಆರೋಪಿ ಮಹಿಳೆ ಸುಲಲಿತವಾಗಿ ಸಿಕ್ಕಿ ಬಿದ್ದಿದ್ದು, ಯಾವೆಲ್ಲಾ ಚಿನ್ನಾಭರಣ ಕಳವಾಗಿತ್ತೆಂದು ದೂರಲಾಗಿತ್ತೋ ಅದೆಲ್ಲಾ ಚಿನ್ನಾಭರಣವನ್ನು ಮಾರಾಟದ ಉದ್ದೇಶದಿಂದ ತಂದಾಗ ಸಂಶಯಗೊಂಡ ಆಭರಣ ಅಂಗಡಿ ಮಾಲಕ ಪೊಲೀಸರಿಗೆ ಮಾಹಿತಿ ನೀಡಿ ವಿಚಾರಿಸಿದಾಗ ಕಳವು ಕೃತ್ಯವನ್ನು ಒಪ್ಪಿಕೊಂಡಿರುತ್ತಾಳೆ. ಆರೋಪಿಯನ್ನು ಆಯಿಷತ್ ಶಮೀಲಾಬಿ ಎಂದು ಗುರುತಿಸಲಾಗಿದೆ. ಆರೋಪಿತೆಯ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News