ಮಂಗಳೂರಿನಲ್ಲಿ ಗುಂಪು ಹತ್ಯೆ: ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ನೀಡುವಂತೆ ಸಿಪಿಐಎಂ ಆಗ್ರಹ

Update: 2025-04-29 21:12 IST
ಮಂಗಳೂರಿನಲ್ಲಿ ಗುಂಪು ಹತ್ಯೆ: ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ ನೀಡುವಂತೆ ಸಿಪಿಐಎಂ ಆಗ್ರಹ
  • whatsapp icon

ಮಂಗಳೂರು: ಕುಡುಪು ಬಳಿ ಮಾಬ್ ಲಿಂಚಿಂಗ್ , ಹತ್ಯೆ ಪ್ರಕರಣದ ತನಿಖೆಯನ್ನು ಮಂಗಳೂರಿನ ಹೊರ ಭಾಗದ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಬೇಕು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ರಾಜ್ಯ ಸರಕಾರವನ್ನು ಆಗ್ರಹಿಸಿದೆ.

ಪ್ರಕರಣದ ಆರಂಭದಿಂದಲೆ ತನಿಖಾ ಲೋಪ ಎಸಗಿರುವ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಹಾಗೂ ಸಂಬಂಧ ಪಟ್ಟ ಪೊಲೀಸರನ್ನು ಇಲಾಖಾ ತನಿಖೆಗೆ ಒಳಪಡಿಸಬೇಕು ಎಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.

ಕುಡುಪು ಮಾಬ್ ಲಿಂಚಿಂಗ್ ಪ್ರಕರಣದ ಕುರಿತು ಕಮೀಷನರ್ ಅಗ್ರವಾಲ್ ಮಾಧ್ಯಮಗಳಿಗೆ ನೀಡಿರುವ ಒಟ್ಟು ಹೇಳಿಕೆ ಪೊಲೀಸ್ ಇಲಾಖೆ ಈ ಪ್ರಕರಣದಲ್ಲಿ ನ್ಯಾಯಯುತವಾಗಿ ನಡೆದುಕೊಂಡಿಲ್ಲ, ಬದಲಿಗೆ ಹತ್ಯೆಕೋರರನ್ನು ರಕ್ಷಿಸುವ ಅನುಮಾನಾಸ್ಪದ ನಡೆಗಳಾಗಿ ಕಾಣುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕುಡುಪು ಬಳಿ ಹೊರ ರಾಜ್ಯದ ಅಪರಿಚಿತ ವ್ಯಕ್ತಿಯನ್ನು ಧರ್ಮದ ಗುರುತಿನ ಕಾರಣಕ್ಕಾಗಿ ಸಂಘಪರಿವಾರ ಬೆಂಬಲಿಗರ ಗುಂಪೊಂದು ಹೊಡೆದು ಸಾಯಿಸಿದ ಪ್ರಕರಣವನ್ನು ಮಾಬ್ ಲಿಂಚಿಂಗ್, ಕೊಲೆ ಪ್ರಕರಣ ಎಂದು ಮಂಗಳೂರು ಪೊಲೀಸ್ ಆಯುಕ್ತರು ಎರಡು ದಿನಗಳ ತರುವಾಯ ಸುದ್ದಿಗೋಷ್ಠಿಯಲ್ಲಿ ಒಪ್ಪಿಕೊಂಡಿದ್ದಾರೆ.

ಲುಕ್ ಔಟ್ ಪ್ರಕಟನೆಯಲ್ಲಿ ನಶೆಯಿಂದ ಬಿದ್ದು ಗಾಯಗಳು ಆಗಿ ಸತ್ತಿರಬಹುದು, ಅಥವಾ ಯಾರೊಂದಿಗೊ ಜಗಳವಾಡಿ ಬಿದ್ದು ಹೊರಳಾಟದಿಂದ ಗಾಯಗಳು ಆಗಿರುಬಹುದು ಎಂದು ಉಲ್ಲೇಖಿಸಲಾಗಿದೆ. ಸೋಮವಾರ ಮುಸ್ಸಂಜೆಯ ನಂತರ ಪೋಸ್ಟ್ ಮಾರ್ಟಂ ನಡೆದು ಅದರ ವರದಿಯ ಪ್ರಕಾರ ಹತ್ಯೆ ಎಂದು ಖಾತರಿ ಪಡಿಸಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಸುಮಾರು 30 ರಷ್ಟು ಜನರು ಕ್ರಿಕೆಟ್ ಆಟದ ಮೈದಾಮದಲ್ಲಿ ವಲಸೆ ಕಾರ್ಮಿಕ ಹಾಗೂ ಸಚಿನ್ ಎಂಬ ಆರೋಪಿಯ ನಡುವೆ ಮಾತು ಕತೆ ನಡೆದ ಬಳಿ ಗುಂಪು ದೊಣ್ಣೆ, ಕಲ್ಲುಗಳಿಂದ ಹೊಡೆದು, ಕಾಲಿನಿಂದ ತುಳಿದು ಹತ್ಯೆ ನಡೆಸಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.ಕಮೀಷನರ್ ಅಗ್ರವಾಲ್ ಹೇಳಿಕೆಗಳು ಸಮಾಧಾನ ತರುವಂತಿಲ್ಲ, ಬದಲಿಗೆ ಅಪನಂಬಿಕೆ ಮೂಡಿಸುವಂತಿದೆ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಪ್ರಕರಣ ನಡೆದ ಮೈದಾನದಲ್ಲಿ ಅಂದು ಕ್ರಿಕೆಟ್ ಪಂದ್ಯಾಟದಲ್ಲಿ ಭಾಗಿಯಾಗಲು ನೂರಕ್ಕೂ ಹೆಚ್ಚು ಜನ ಸೇರಿದ್ದರು. ಎಲ್ಲರ ಎದುರು ನಡೆದ ಈ ಮಾಬ್ ಲಿಂಚಿಂಗ್, ಹೊರ ರಾಜ್ಯದ ಅಪರಿಚಿತನ ಹತ್ಯೆಯ ಸುದ್ದಿ ತಕ್ಷಣವೇ ಊರಿನ ಒಳಗಡೆ ಹಬ್ಬಿದೆ. ಅದು ಪೊಲೀಸರಿಗೆ ತಲುಪಲು ಹೆಚ್ಚು ಸಮಯ ಹಿಡಿಯಲಿಲ್ಲ. ಆ ಪ್ರಕಾರವೆ ಐದು ಗಂಟೆಯ ಸುಮಾರಿಗೆ ಪೊಲೀಸರು ಮೃತದೇಹ ಇದ್ದ ಸ್ಥಳಕ್ಕೆ ತಲುಪಿದ್ದಾರೆ. ಅಷ್ಟು ಹೊತ್ತಿಗೆ ಘಟನೆ ಹೇಗಾಗಿದೆ ಎಂಬುದು ಖಂಡಿತಾ ಪೊಲೀಸರಿಗೆ ತಿಳಿದಿರುತ್ತದೆ. ಅಂದೇ ರಾತ್ರಿಯ ಹೊತ್ತು ಹಲವು ಸಾಮಾಜಿಕ ಕಾರ್ಯಕರ್ತರಿಗೆ ಸ್ಥಳೀಯರು ವಿಷಯ ತಲುಪಿಸಿದ್ದಾರೆ. ಪೊಲೀಸರ ನಿರ್ಲಕ್ಷ್ಯದ ಕುರಿತು ದೂರಿಕೊಂಡಿದ್ದಾರೆ. ಇಷ್ಟೆಲ್ಲಾ ಮಾಹಿತಿ ಇದ್ದರೂ, ನೂರಾರು ಜನರ ನಡುವೆ ನಡೆದ ಮಾಬ್ ಲಿಂಚಿಂಗ್, ಹತ್ಯೆ ಪ್ರಕರಣವನ್ನು ಪೊಲೀಸರು ಯಾವುದೋ ನಶೆಯಲ್ಲಿ ಉರುಳಿ ಬಿದ್ದು ಸಾವನ್ನಪ್ಪಿರ ಬಹುದು ಎಂಬ ವಾಕ್ಯ ಸೇರಿಸಿ ಲುಕ್ ಔಟ್ ಪ್ರಕಟನೆ ಕೊಡುವ ಉದ್ದೇಶ ಏನಿತ್ತು ಎಂದು ಮುನೀರ್ ಕಾಟಿಪಳ್ಳ ಪ್ರಶ್ನಿಸಿದ್ದಾರೆ.

ಘಟನೆ ನಡೆದು 24 ಗಂಟೆಗಳ ಕಾಲ ಪೊಲೀಸರು ಕೊಲೆ ನಡೆದಿರುವ ಆಧಾರದಲ್ಲಿ ತನಿಖೆ ನಡೆಸದಿರು ವುದು, ಮಾಧ್ಯಮಗಳಿಗು ಮಾಹಿತಿ ನೀಡದಿರುವುದು, ದಟ್ಟ ಅನುಮಾನಗಳಿಗೆ ಕಾರಣವಾಗಿದೆ. ಪೊಲೀಸರು ಪ್ರಜ್ಞಾಪೂರ್ವಕವಾಗಿ ಮಾಬ್ ಲಿಂಚಿಂಗ್ ಪ್ರಕರಣವನ್ನು ಮುಚ್ಚಿಹಾಕುವ, ಬಿಜೆಪಿಯೊಂದಿಗೆ, ಶಾಸಕರುಗಳೊಂದಿಗೆ ಸಂಪರ್ಕ ಹೊಂದಿರುವ ಬಲಪಂಥೀಯ ಕ್ರಿಮಿನಲ್ ಗುಂಪನ್ನು ರಕ್ಷಿಸಲು ಮಾಡಿದ ಯತ್ನದಂತೆ ಕಾಣಿಸುತ್ತದೆ ಎಂದು ಅವರು ಹೇಳಿದ್ದಾರೆ.

ರಾಜ್ಯ ಸರಕಾರ ಹತ್ಯಾ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು, ಮಂಗಳೂರು ಪೊಲೀಸ್ ಕಮೀಷನರ್, ಅಡಿಷನಲ್ ಪೊಲೀಸ್ ಕಮೀಷನರ್‌ರನ್ನು ಬದಲಾಯಿಸುವ ಜೊತೆಗೆ ಇಡೀ ಕಮೀಷನ ರೇಟ್ ನಲ್ಲಿ ಅಮೂಲಾಗ್ರ ಬದಲಾವಣೆ ತರಬೇಕು, ಜೊತೆಗೆ ಹತ್ಯೆಗೀಡಾದ ಅಮಾಯಕನ ಕುಟುಂಬಕ್ಕೆ ಪರಿಹಾರ ಧನ ಒದಗಿಸಬೇಕು ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ರಾಜ್ಯ ಸರಕಾರವನ್ನು ಆಗ್ರಹಿಸುತ್ತದೆ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News