ದ.ಕ. ಜಿಲ್ಲೆಯಲ್ಲಿ ಪೋಡಿ ವಿಶೇಷ ಆಂದೋಲನ: ಹೊರ ಜಿಲ್ಲೆಗಳ ಸರ್ವೇಯರ್‌ಗಳ ಬಳಕೆ: ದ.ಕ. ಜಿಲ್ಲಾಧಿಕಾರಿ

ಮಂಗಳೂರು, ಎ. 29: ದ.ಕ. ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಶುಲ್ಕ ರಹಿತವಾಗಿ ದರ್ಖಾಸ್ತು ಪ್ರಕರಣ ಗಳ ಪೋಡಿ ಆಂದೋಲನ ನಡೆಯುತ್ತಿದ್ದು, ಪ್ರಕ್ರಿಯೆಗೆ ವೇಗ ನೀಡುವ ನಿಟ್ಟಿನಲ್ಲಿ ಹೊರ ಜಿಲ್ಲೆಗಳ ಪರವಾನಿಗೆ ಹೊಂದಿದ ಸರ್ವೇಯರ್‌ಗಳನ್ನು ಬಳಸಿಕೊಂಡು ತ್ವರಿತ ಕಾರ್ಯಾಚರಣೆಗೆ ಕ್ರಮ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.
ಜಿಲ್ಲಾಧಿಕಾರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಅವರು, ವಿವಿಧ ಸರ್ವೆ ನಂಬರ್‌ಗಳಲ್ಲಿ ಸರಕಾರದಿಂದ ವಿವಿಧ ರೀತಿಯಲ್ಲಿ ಮಂಜೂರಾದ ಜಮೀನಿನ ಅಳತೆ ಮಾಡಿ ಪೋಡಿ ಮಾಡುವ ನಿಟ್ಟಿನಲ್ಲಿ ನಮೂನೆ 1ರಿಂದ 5ರಲ್ಲಿ ನಿಗದಿಪಡಿಸುವ ಕಾರ್ಯ ಇದಾಗಿದೆ ಎಂದವರು ಹೇಳಿದರು.
ದ.ಕ. ಜಿಲ್ಲೆಯಲ್ಲಿ 1ರಿಂದ 5 ಪ್ರಕರಣಗಳಿಗೆ ಸಂಬಂಧಿಸಿ ಸುಮಾರು 30,685 ಅರ್ಜಿಗಳನ್ನು ನಮೂದು ಮಾಡಲಾಗಿದೆ. ಈ ಪೈಕಿ 11,096 ಅರ್ಜಿಗಳನ್ನು ಸರಕಾರ ನಿಗದಿಪಡಿಸಿರುವ ತಂತ್ರಾಂಶಗಳ ಮೂಲಕ ಗ್ರಾಮ ಆಡಳಿತಾಧಿಕಾರಿಗಳ ಹಂತದಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಅಪ್‌ಲೋಡ್ ಮಾಡಲಾಗಿದೆ. ಇವುಗಳಲ್ಲಿ 8,389 ಅರ್ಜಿಗಳನ್ನು ತಹಶೀಲ್ದಾರರ ಹಂತದಲ್ಲಿ ಇತ್ಯರ್ಥಪಡಿಸುವ ಮೂಲಕ 24,639 ಫಲಾನುಭವಿಗಳನ್ನು ಗುರುತಿಸಿ ಸರ್ವೆ ಲಾಖೆಗೆ ಪೋಡಿ ಕಾರ್ಯಕ್ಕೆ ಕಳುಹಿಸಲಾಗಿದೆ. ಕಳೆದ ನವೆಂಬರ್ ನಿಂದ ಆರಂಭಗೊಂಡಿರುವ ಈ ಅಭಿಯಾನದಲ್ಲಿ ರಾಜ್ಯದಲ್ಲಿ 1ರಿಂದ 5 ನಮೂನೆ ಪ್ರಕರಣಗಳ ಪ್ರಗತಿ ಯಲ್ಲಿ ದ.ಕ. ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಇದೀಗ ಜಿಲ್ಲೆಯಲ್ಲಿ ಹೊರ ಜಿಲ್ಲೆಗಳ ಸರ್ವೇಯರ್‌ಗಳನ್ನು ಬಳಸಿಕೊಂಡು ಈ ಪ್ರಕ್ರಿಯೆಯನ್ನು ವಿಶೇಷ ಆಂದೋಲನದಂತೆ ನಡೆಸಿ ಮೇ 9ರೊಳಗೆ ಗರಿಷ್ಟ ಪ್ರಗತಿ ಸಾಧಿಸಲು ಉಪ ವಿಭಾಗ ಹಂತದಲ್ಲಿ ಉಪ ವಿಭಾಗಾಧಿಕಾರಿಗಳು ಹಾಗೂ ತಾಲೂಕು ಮಟ್ಟದಲ್ಲಿ ಎಲ್ಲಾ ತಹಶೀಲ್ದಾರರಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲೆಯ ಸರಕಾರಿ ಸರ್ವೇಯರ್‌ಗಳ ಜತೆಯಲ್ಲಿ ಇದೀಗ ಹೊರ ಜಿಲ್ಲೆಗಳಾದ ಮೈಸೂರು, ಮಂಡ್ಯ ಸೇರಿದಂತೆ ಇತರ ಜಿಲ್ಲೆಗಳ ಲೈಸೆನ್ಸ್ ಹೊಂದಿದ ಸರ್ವೇಯರ್ ಗಳು ಸೇರಿ 129 ಸರ್ವೇಯರ್‌ಗಳು ಜಿಲ್ಲೆಯಲ್ಲಿ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸರ್ವೇಯರ್‌ಗಳಿಗೆ ಸಾರ್ವಜನಿಕರು ಪೋಡಿ ಕಾರ್ಯದಲ್ಲಿ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.
ಸರ್ವೆಯರ್‌ಗಳು (ಭೂ ಮಾಪಕರು) ಸ್ಥಳಕ್ಕೆ ಬಂದಾಗ ಸಂಬಂಧಪಟ್ಟ ಭೂ ಮಂಜೂರುದಾರರು ಹಾಜರಿದ್ದು, ಮಂಜೂರಾದ ಸ್ಥಳದ ಗಡಿಗಳನ್ನು ತೋರಿಸಿ ಅಳತೆಯಾದಂತೆ ಗಡಿಗಳಿಗೆ ಗಡಿ ಕಲ್ಲುಗಳನ್ನು ಹಾಕಿಸಲು ಸಹಕರಿಸಬೇಕು. ಸಂಬಂಧಪಟ್ಟವರು ಸ್ಥಳದಲ್ಲಿ ಹಾಜರಿಲ್ಲದಿದ್ದರಿ ಸ್ಥಳದ ಮಾಹಿತಿಯಂತೆ ಅಳತೆ ಕಾರ್ಯ ನಡೆಯಲಿದೆ ಅಥವಾ ದರಖಾಸ್ತು ಮಂಜೂರಾತಿಯನ್ನು ರದ್ದುಪಡಿಸಲು ಕ್ರಮ ವಹಿಸಲಾಗುತ್ತದೆ.
ಜಿಲ್ಲೆಯಲ್ಲಿ ಮಂಜೂರಾದ ಭೂಮಿಯ ಪ್ರಮಾಣ ಪತ್ರ ಇಲ್ಲದಿರುವ ಪ್ರಕರಣಗಳು ಕಡಿಮೆ. ಈ ವಿಶೇಷ ಆಂದೋಲನದ ಮೂಲಕ ನಡೆಸಲಾಗುವ ಪೋಡಿ ಕಾರ್ಯದಿಂದ ಯಾರಿಗೂ ತೊಂದರೆಯಾಗದು. ಯಾವ ರೀತಿಯ ಅನುಮಾನವೂ ಬೇಡ. ಈ ಕಾರ್ಯವನ್ನು ನಡೆಸಲು ಸರ್ವೇಯರ್‌ಗಳಿಗೂ ಯಾವುದೇ ಕಾನೂನಾತ್ಮಕ ತಡೆ ಇಲ್ಲ. ಸಂಬಂಧಪಟ್ಟ ಮಂಜೂರುದಾರರ ಸಹಕಾರದಿಂದ ಕಾರ್ಯ ಸುಗಮವಾ ಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಗೋಷ್ಟಿಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್, ಭೂ ದಾಖಲೆಗಳ ಉಪ ನಿರ್ದೇಶಕಿ ಪ್ರಸಾದಿನಿ ಉಪಸ್ಥಿತರಿದ್ದರು.