ಕೋಟೆಕಾರ್ ಪ.ಪಂ. ಸಾಮಾನ್ಯ ಸಭೆ: ಸಭೆಯ ನಿರ್ಣಯಗಳು ಅನುಷ್ಠಾನಗೊಳ್ಳದಿರುವುದಕ್ಕೆ ಸದಸ್ಯರ ಆಕ್ರೋಶ

ಉಳ್ಳಾಲ: ಸಭೆಯ ನಿರ್ಣಯಗಳು ಅನುಷ್ಠಾನಗೊಳ್ಳದಿರುವ ಬಗ್ಗೆ ಆಕ್ರೋಶ, ಮನೆ ನಿವೇಶನ ಒದಗಿಸುವ ಬಗ್ಗೆ ಪರ-ವಿರೋಧ ಚರ್ಚೆಗಳು ಕೋಟೆಕಾರ್ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷ ದಿವ್ಯಾ ಸತೀಶ್ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಸುಜಿತ್ ಮಾಡೂರು, ಸಾಮಾನ್ಯ ಸಭೆಯಲ್ಲಿ ಕೈಗೊಂಡ ನಿರ್ಣಯಗಳು ಯಾವುದೂ ಅನುಷ್ಠಾನಕ್ಕೆ ಬರುತ್ತಿಲ್ಲ. ಸಭೆಯ ನಿರ್ಣಯಗಳು ಸಾಮಾನ್ಯ ಸಭೆಯ ಕಾರ್ಯಸೂಚಿ ಪಟ್ಟಿಯಲ್ಲಿ ಇರುವುದಿಲ್ಲ. ಹೀಗಿದ್ದರೆ ಸಾಮಾನ್ಯ ಸಭೆ ಯಾಕೆ ಬೇಕು ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು.ಈ ವಿಚಾರವಾಗಿ ನಡೆದ ಚರ್ಚೆ ಕೆಲಕಾಲ ಕೋಲಾಹಲವನ್ನುಂಟು ಮಾಡಿತು.
ಮಡ್ಯಾರ್ ನಲ್ಲಿ ಬಡವರಿಗೆ ಮೀಸಲಿಟ್ಟ ಜಾಗದಲ್ಲಿ ಡಂಪಿಂಗ್ ಯಾರ್ಡ್ ಮಾಡಲು ಹೊರಟ ಕಾರಣ ಆ ವಿಚಾರ ಕೋರ್ಟ್ ನಲ್ಲಿ ಇದೆ. ಬಡವರಿಗೆ ನಿವೇಶನ ಸಿಗದ ಕಾರಣ ಅವರ ಹಣ ಲೂಟಿ ಆಗುತ್ತಿದೆ. ಇದಕ್ಕೆ ಯಾರು ಹೊಣೆ ಎಂದು ಸುಜಿತ್ ಮಾಡೂರು ಅಧಿಕಾರಿಗಳನ್ನು ತರಾಟೆಗೈದರು. ಈ ಬಗ್ಗೆ ಕೆಲಹೊತ್ತು ಚರ್ಚೆ ನಡೆಯಿತು.
ಇದಕ್ಕೆ ಉತ್ತರಿಸಿದ ಅಧ್ಯಕ್ಷೆ ದಿವ್ಯಾ ಸತೀಶ್, ಬಡವರ ಹಣ ಲೂಟಿ ಯಾರು ಮಾಡಿಲ್ಲ. ನಿವೇಶನ ಇಲ್ಲದವರು ಅರ್ಜಿ ಕೊಡಲಿ. ಮೊದಲು ಕೋಟೆಕಾರ್ ವ್ಯಾಪ್ತಿಯ ಎಲ್ಲಾ ಸರ್ಕಾರಿ ಜಾಗವನ್ನು ಪ.ಪಂ. ಹೆಸರಿನಲ್ಲಿ ಮಾಡಿಸಲಾಗುವುದು. ಬಳಿಕ ಅರ್ಹ ಫಲಾನುಭವಿಗಳಿಗೆ ನಿವೇಶನ ಹಂಚಲಾಗುವುದು ಎಂದರು.
ಅಂಗವಿಕಲರ ನಿಧಿಯಿಂದ ಅರ್ಹ ಫಲಾನುಭವಿಗಳಿಗೆ ಚೆಕ್ ವಿತರಣೆ ಈ ತಿಂಗಳ ಸಾಮಾನ್ಯ ಸಭೆ ನಡೆಯುವುದರ ಒಳಗೆ ಮಾಡಬೇಕು ಎಂದು ತಿಳಿಸಿದ್ದೇವೆ. ಆದರೆ ಅರ್ಹ ಫಲಾನುಭವಿಗಳಿಗೆ ಚೆಕ್ ಇನ್ನೂ ತಲುಪಿಲ್ಲ. ಇದಕ್ಕೆ ಕಾರಣ ಏನು ಎಂದು ಧೀರಜ್ ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಸುಜಿತ್ ಮಾಡೂರು ಅವರು ಚೆಕ್ ವಿತರಣೆ ಮಾಡುವಾಗ ಫಲಾನುಭವಿ ಜೀವಂತ ಇದ್ದಾನ, ಇಲ್ಲವೇ ಎಂದು ನೋಡಬೇಕು ಎಂದು ವ್ಯಂಗ್ಯವಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ದ್ವಿತೀಯ ದರ್ಜೆ ಸಹಾಯಕ ಮಂಜುನಾಥ, ಅಂಗವಿಕಲರ ನಿಧಿಗೆ 44 ಅರ್ಜಿಗಳು ಬಂದಿವೆ. ಈ ಪೈಕಿ ಮಂಜೂರಾದ 25 ಫಲಾನುಭವಿಗಳಿಗೆ ಚೆಕ್ ವಿತರಣೆ ಆಗುತ್ತಿದೆ ಎಂದರು.
ಕೆಲವು ಫಲಾನುಭವಿಗಳಿಗೆ ಇನ್ನೂ ಚೆಕ್ ಸಿಕ್ಕಿಲ್ಲ. ಅಧಿಕಾರಿಗಳು ಫಲಾನುಭವಿಗಳಿಗೆ ಶೀಘ್ರ ಚೆಕ್ ವಿತರಣೆ ಮಾಡಬೇಕು ಎಂದು ಸುಜಿತ್ ಮಾಡೂರು ಆಗ್ರಹಿಸಿದರು.
ಕುಡಿಯುವ ನೀರು ಒದಗಿಸುವ ಬಗ್ಗೆ ಗುತ್ತಿಗೆ ವಹಿಸಿಕೊಂಡ ಗುತ್ತಿಗೆದಾರರು ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಪಂಪ್ ಸೆಟ್ ಆಪರೇಟರ್ ಮಾಡುವವರಿಗೆ ವೇತನ ಸಿಗುತ್ತಿಲ್ಲ. ಗುತ್ತಿಗೆ ವಹಿಸಿಕೊಂಡಿರುವ ಆರು ಮಂದಿ ಸಂಬಳ ಪಡೆದು ಮೌನವಾಗಿದ್ದಾರೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಅಹ್ಮದ್ ಬಾವ ಆಗ್ರಹಿಸಿದರು.
ನಡಾರ್ ನಲ್ಲಿ ಏಳು ಮನೆಗಳಿಗೆ ರಸ್ತೆ, ದಾರಿದೀಪ ಇಲ್ಲ, ಬಯಲು ರಂಗ ಮಂದಿರ, ಮೂಲಭೂತ ಸೌಕರ್ಯ ಇಲ್ಲ. ಈ ಸಮಸ್ಯೆ ಇತ್ಯರ್ಥ ಪಡಿಸುವಂತೆ ಪಕ್ಷೇತರ ಸದಸ್ಯ ಹರೀಶ್ ಸಭೆಯಲ್ಲಿ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ದಿವ್ಯಾ ಸತೀಶ್ ಅವರು ಬಯಲು ರಂಗ ಮಂದಿರ ನಿರ್ಮಾಣಕ್ಕೆ ಸರ್ವೇ ನಡೆಯುತ್ತದೆ. ದಾರಿದೀಪ, ರಸ್ತೆ ನಿರ್ಮಾಣಕ್ಕೆ ವ್ಯವಸ್ಥೆ ಆಗುತ್ತಿದೆ ಎಂದರು.
ವಾರ್ಡ್ ನಂ.11 ಮಡ್ಯಾರ್ ನಲ್ಲಿ ಕಡಲ್ಕೊರೆತ ದಿಂದ ಮನೆ ಕಳಕೊಂಡ ಸಂತ್ರಸ್ತರಿಗೆ ಮೀಸಲಿಟ್ಟ 1.47 ಜಾಗ ರದ್ದುಗೊಂಡಿದ್ದು, ಆ ಜಾಗವನ್ನು ಪ.ಪಂ.ವ್ಯಾಪ್ತಿಯ ನಿವೇಶನ ರಹಿತರಿಗೆ ನೀಡಬೇಕು.ಗ್ರಾ.ಪಂ. ಆಡಳಿತ ಇದ್ದ ಸಂದರ್ಭದಲ್ಲಿ ನಿವೇಶನಕ್ಕಾಗಿ ಹಾಕಿದ ಅರ್ಜಿ ರದ್ದು ಮಾಡಿ, ಹೊಸ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಸಭೆಯಲ್ಲಿ ಮುಖ್ಯಾಧಿಕಾರಿ ಮಾಲಿನಿ, ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.