ಪ್ರಧಾನಿ ಮೋದಿ ಹೇಳಿಕೆ ಸಂವಿಧಾನ ವಿರೋಧಿ: ದಲಿತ ಸಂಘಟನೆಗಳಿಂದ ವಿರೋಧ
ಮಂಗಳೂರು, ಎ. 25: ದೇಶದಲ್ಲಿ ಶೇ. 26ರಷ್ಟಿರುವ ದಲಿತ ಸಮುದಾಯಗಳು ಹಾಗೂ ಶೇ. 18ರಷ್ಟಿರುವ ಮುಸ್ಲಿಂ ಸಮುದಾಯದ ನಡುವೆ ಕಂದಕ ಸೃಷ್ಟಿಸಿ ದ್ವೇಷ ಉಂಟು ಮಾಡುವ ಹೇಳಿಕೆಯನ್ನು ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸಂವಿಧಾನ ವಿರೋಧಿ ನಡೆಯನ್ನು ಅನುಸರಿಸಿದ್ದಾರೆ. ಇದು ಖಂಡನೀಯ ಎಂದು ದಲಿತ ಸಂಘಟನೆಗಳ ಮಹಾ ಒಕ್ಕೂಟ ಹೇಳಿದೆ.
ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಗುರುವಾರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಸಂಘ ಸಂಸ್ಥೆಗಳ ಮಹಾ ಒಕ್ಕೂಟದ ಅಧ್ಯಕ್ಷ ಲೋಲಾಕ್ಷ, ಇಂತಹ ಹೇಳಿಕೆ ರೈಲ್ವೇ ನಿಲ್ದಾಣದಲ್ಲಿ ಚಹಾ ಮಾರುವವರು ಮಾತನಾಡಿದ್ದರೆ ಅದು ಬೇರೆ. ಆದರೆ ಪ್ರಧಾನಿ ಹುದ್ದೆಯಲ್ಲಿರುವ ನರೇಂದ್ರ ಮೋದಿ ತಮ್ಮ ಹುದ್ದೆಯ ಘನತೆಗೆ ವಿರುದ್ಧವಾಗಿ ಮತಾನಾಡಿದ್ದಾರೆ ಎಂದರು.
ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತರು, ಹಿಂದುಳಿದವರು ಮತ್ತು ಬುಡಕಟ್ಟುಗಳ ಜನರ ಮೀಸಲಾತಿ ಕಡಿಮೆ ಮಾಡಿ ಅದನ್ನು ಮುಸ್ಲಿಮರಿಗೆ ನೀಡಲಾಗುತ್ತದೆ ಮತ್ತು ಈ ಸಮುದಾಯಗಳ ಸಂಪತ್ತನ್ನೂ ದೋಚಿ ಅವರಿಗೆ ನೀಡಲಾಗುತ್ತದೆ ಎಂಬ ಹೇಳಿಕೆ ಖಂಡನೀಯ. ಇದು ಸಂವಿಧಾನದ ಮೂಲ ಆಶಯವಾದ ಭ್ರಾತೃತ್ವಕ್ಕೆ ಚ್ಯುತಿ ತಂದಿದೆ ಎಂದು ಆರೋಪಿಸಿದರು.
ಭಾರತದ ಸಂವಿಧಾನ ಪ್ರತಿಪಾದಿಸುವ ಸಾಮಾಜಿಕ ನ್ಯಾಯದ ರಕ್ಷಣೆಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಕಳೆದ 10 ವರ್ಷಗಳ ಪ್ರಧಾನಿ ಮೋದಿ ಆಡಳಿತದಲ್ಲಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಕೈಗೊಳ್ಳಲಾದ ಕ್ರಮಗಳ ಬಗ್ಗೆ ತನಿಖೆ ನಡೆಸಿ ಸರಿಪಡಿಸಲಾಗುವುದು ಎಂಬ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಘೋಷಣೆಗೆ ಬೆದರಿ ಪ್ರಧಾನಿ ಮೋದಿ ಮತ್ತು ಅವರ ತಂಡ ಸುಳ್ಳು ಹಬ್ಬಿಸುವ ಕೆಲಸ ಮಾಡಿದೆ. ಇದು ಬಹುಸಂಖ್ಯಾತರಾದ ಶೋಷಿತ ಜನವರ್ಗಗಳನ್ನು ಧರ್ಮದ ಆಧಾರದಲ್ಲಿ ಒಡೆದು, ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಹತಾಶ ಪ್ರಯತ್ನವಾಗಿದೆ. ಪ್ರಧಾನಿಯವರು ಈ ಸಂವಿಧಾನ ವಿರೋಧಿ ಹೇಳಿಕೆಯನ್ನು ಹಿಂಪಡೆದು ಸೋಷಿತ ಜನ ಸಮುದಾಯಗಳ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಪ್ರಧಾನಿ ಅವರ ಈ ಹೇಳಿಕೆ ಭಾರತೀಯ ದಂಡ ಸಂಹಿತೆ 153ಎ ಅ್ವಯ ಶಿಕ್ಷಾರ್ಹ ಅಪರಾಧ. ಭಾರತದ ಸರ್ವೋಚ್ಛ ನ್ಯಾಯಾಲಯ, ಭಾರತೀಯ ಚುನಾವಣಾ ಆಯೋಗ ಹಾಗೂ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಈ ಈ ಬಗ್ಗೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಕಳೆದ 10 ವರ್ಷಗಳಲ್ಲಿ ಸಂವಿಧಾನಕ್ಕೆ ವಿರುದ್ದವಾಗಿ ದೇಶದ ಸಂಪತ್ತನ್ನು ಯಾವ ರೀತಿಯಾಗಿ ತಮ್ಮ ಕಾರ್ಪೊರೇಟ್ ಮಿತ್ರರಿಗೆ ಮಾರಾಟ ಮಾಡಲಾಗಿದೆಯೋ, ಇದೀಗ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಭರವಸೆಗಳಿಂದ ಆ ಕಾರ್ಪೊರೇಟ್ ಮಿತ್ರರಿಗೆ ತೊಂದರೆ ಆಗುವ ಆತಂಕದಿಂದ ಆ ಕುಳಗಳ ಹಿತರಕ್ಷಣೆಗಾಗಿ ಇಂತಹ ದ್ವೇಷ ಹಂಚುವ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ದಲಿತ ಸಂಘಟನೆಗಳ ಸಮನ್ವಯ ಸಮಿತಿಯ ಸಂಚಾಲಕ ದೇವದಾಸ್ ಅವರು ಮಾತನಾಡಿ, ಮೇಲ್ವರ್ಗದ ಜಾತಿವಾದಿಗಳಿಂದ ದಲಿತರ ಮೇಲೆ ದೌರ್ಜನ್ಯ ನಡೆಯುತ್ತ ಬಂದಿದೆಯೇ ಹೊರತು, ಮುಸ್ಲಿಂ ಸಮುದಾಯದಿಂದ ದಲಿತರ ಮೇಲಿನ ದೌರ್ಜನ್ಯ ನಿರ್ದಶನ ಅಪರೂಪ. ಅದರಲ್ಲೂ ದಲಿತರಲ್ಲಿ ಯಾವ ಸಂಪತ್ತು ಏನಿದೆ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಟಿಯಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರಾದ ಶೇಖರ ಚಿಲಿಂಬಿ, ಅನಿಲ್, ಮೋಹನಾಂಗಯ್ಯ, ಶ್ರೀನಿವಾಸ, ಸರೋಜಿನಿ ಬಂಟ್ವಾಳ, ಲಕ್ಷ್ಮಣ್ ಕಾಂಚನ್ ಮೊದಲಾದವರು ಉಪಸ್ಥಿತರಿದ್ದರು.