ಶಂಕಿತ ನಕ್ಸಲರ ಭೇಟಿ ವದಂತಿ; ಕಡಬ ವ್ಯಾಪ್ತಿಯಲ್ಲಿ ಕೂಂಬಿಂಗ್ ಕಾರ್ಯಾಚರಣೆ
ಕಡಬ, ಎ.06. ಠಾಣಾ ವ್ಯಾಪ್ತಿಯ ಬಿಳಿನೆಲೆ ಗ್ರಾಮದ ಚೇರು ಎಂಬಲ್ಲಿನ ಮನೆಯೊಂದಕ್ಕೆ ಶಂಕಿತ ನಕ್ಸಲರ ತಂಡವೊಂದು ಗುರುವಾರ ರಾತ್ರಿ ಆಗಮಿಸಿ ಊಟ, ಮಾಡಿ ದಿನಸಿ ಸಾಮಗ್ರಿಗಳನ್ನು ಪಡೆದು ತೆರಳಿರುವ ಸುದ್ದಿ ಶನಿವಾರ ಬೆಳಗ್ಗಿನಿಂದ ಹರಿದಾಡುತ್ತಿದೆ.
ಗುರುವಾರ ಸಂಜೆ ಏಳು ಗಂಟೆಯ ವೇಳೆಗೆ ತಂಡವೊಂದು ಸ್ಥಳೀಯ ನಿವಾಸಿಯೊಬ್ಬರ ಮನೆಗೆ ಆಗಮಿಸಿ ಊಟ ಮಾಡಿ ಸುಮಾರು ಒಂಭತ್ತು ಗಂಟೆಯ ವೇಳೆಗೆ ದಿನಸಿ ಸಾಮಾಗ್ರಿಗಳನ್ನು ಪಡೆದು ತೆರಳಿದ್ದಾರೆ. ತಂಡದಲ್ಲಿ ನಾಲ್ಕರಿಂದ ಆರು ಮಂದಿ ಇದ್ದು, ಶಸಾಸ್ತ್ರ ಹಿಡಿದುಕೊಂಡಿದ್ದರು ಎನ್ನಲಾಗಿದೆ.
ಶಂಕಿತರು ಮನೆಗೆ ಆಗಮಿಸಿರುವ ಮಾಹಿತಿ ಇಲಾಖೆಗೆ ಲಭ್ಯವಾಗುತ್ತಲೇ ನಕ್ಸಲ್ ನಿಗ್ರಹ ಪಡೆ ಹಾಗೂ ಪೊಲೀಸರು ಆಗಮಿಸಿದ್ದಾರೆ. ಎಎನ್‌ಎಫ್ ತಂಡ ಮನೆಗೆ ಭೇಟಿ ನೀಡಲಾದ ಆಸು-ಪಾಸು ಪರಿಸರದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಶಂಕಿತರು ಅದೇ ಪರಿಸರಕ್ಕೆ ಹೊಂದಿಕೊಂಡಿರುವ ಅರಣ್ಯ ಪ್ರದೇಶದತ್ತ ತೆರಳಿರುವ ಶಂಕೆ ವ್ಯಕ್ತವಾಗಿದ್ದು, ಕೂಂಬಿಂಗ್ ಆರಂಭಿಸಲಾಗಿದೆ. ಸುಮಾರು 10 ವರ್ಷಗಳ ಹಿಂದೆ ಚೇರು, ಮಣಿಬಾಂಢ ಪ್ರದೇಶಗಳಲ್ಲಿ ನಕ್ಸಲರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಎನ್ಎಫ್ ತಂಡದಿಂದ ಕೂಂಬಿಂಗ್ ನಡೆಸಿ ಓರ್ವ ಶಂಕಿತ ನಕ್ಸಲ್ ಮೃತಪಟ್ಟಿದ್ದ.