ಜಮೀಯತುಲ್ ಫಲಾಹ್ ನಿಂದ ವಿದ್ಯಾರ್ಥಿ ವೇತನ ವಿತರಣೆ, ಸ್ವಚ್ಚತಾ ಆಂದೋಲನಕ್ಕೆ ಚಾಲನೆ

Update: 2023-11-01 15:34 GMT

ಮಂಗಳೂರು, ನ.1: ಮೂವತ್ತೈದು ವರ್ಷಗಳ ಹಿಂದೆ ಹಿರಿಯರು ಮುಸ್ಲಿಮರ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸ್ಥಾಪಿಸಿದ ಜಮೀಯತುಲ್ ಫಲಾಹ್ ಸಂಸ್ಥೆ ಕಾರಣ ಪ್ರಸ್ತುತ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮುಸ್ಲಿಂ ಸಮುದಾಯದಲ್ಲಿ ಉನ್ನತ ಶಿಕ್ಷಣ ಪಡೆಯುವವರು ಹೆಚ್ಚಾಗಿದ್ದಾರೆ. ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಜೊತೆಗೆ ತಮ್ಮ ಗುಣ, ನಡತೆ, ಸಾಧನೆ ಸಹಿತ ಎಲ್ಲಾ ವಿಚಾರದಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ಸಮುದಾಯದ ಅಂಬಾಸಿಡರ್ ಆಗಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ನಿವೃತ್ತ ಉಪನ್ಯಾಸಕ ಪ್ರೊ.ಇಸ್ಮಾಯಿಲ್ ಅಭಿಪ್ರಾಯಟ್ಟಿದ್ದಾರೆ.

ಜಮೀಯತುಲ್ ಫಲಾಹ್ ಉಳ್ಳಾಲ ತಾಲೂಕು ಘಟಕದಿಂದ ವಿದ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಸನ್ಮಾನ, ಸ್ವಚ್ಛತಾ ಆಂದೋಲನಕ್ಕೆ ಚಾಲನೆ ಮತ್ತು ಮಾದಕ ದ್ರವ್ಯ ವಿರುದ್ದ ಜಾಗೃತಿ ಅಭಿಯಾನಕ್ಕೆ ಬುಧವಾರ ಕಂಕನಾಡಿ ಜಮೀಯತುಲ್ ಫಲಾಹ್ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿ ವೇತನ ವಿತರಿಸಿದ ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಆರ್.ಈಶ್ವರ್ ಮಾತನಾಡಿ, ಎರಡು ಕೈಗಳಿಂದ ಪ್ರೋತ್ಸಾಹಧನ ನೀಡಿರುವ ಸಂಘಟಕರ ಪ್ರಯತ್ನಕ್ಕೆ ಬೆಲೆ ಕಟ್ಟಲಾಗದು. ಹತ್ತು ಬೆರಳುಗಳನ್ನು ಬಳಸಿ ಪಡೆದ ವಿದ್ಯಾರ್ಥಿ ವೇತನದ ಮೂಲಕ ಉನ್ನತ ಹುದ್ದೆಯ ಕನಸು ಕಂಡು ಇತರರಿಗೆ ಸಹಾಯ ಮಾಡುವ ಗುಣ ಹೊಂದಬೇಕು ಎಂದರು.

ಜಮೀಯತ್ತುಲ್ ಫಲಾಹ್ ಉಳ್ಳಾಲ ತಾಲೂಕು ಘಟಕಾಧ್ಯಕ್ಷ ಅಬ್ದುಲ್ ನಾಸೀರ್ ಕೆ.ಕೆ. ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳಲ್ಲಿ ಘನತೆ, ಗೌರವ ಒದಗಿಸುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಮಸೀದಿ, ಮದ್ರಸಾಗಳಲ್ಲಿ ಸ್ವಚ್ಛತೆ ಮತ್ತು ಮಾದಕ ದ್ರವ್ಯ ವಿರುದ್ಧ ನಿರಂತರ ಆಂದೋಲನ ನಡೆಯಲಿದೆ ಎಂದು ಹೇಳಿದರು.

ಈ ಸಂದರ್ಭ ಜಮೀಯತುಲ್ ಫಲಾಹ್ ದಮಾಮ್ ಘಟಕದ ಮಾಜಿ ಅಧ್ಯಕ್ಷ ಸಯ್ಯದ್ ಶಾಹುಲ್ ಹಮೀದ್ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ಎಂ.ಎಚ್.ಮಲಾರ್ ಅವರನ್ನು ಸನ್ಮಾನಿಸಲಾಯಿತು. ಸ್ವಚ್ಚತಾ ಜಾಗೃತಿಗಾಗಿ ಕರಪತ್ರ ಬಿಡುಗಡೆಯಾಯಿತು.

ಜಮೀಯ್ಯತುಲ್ ಫಲಾಹ್ ಉಡುಪಿ ಮತ್ತು ದ.ಕ.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಖಾಸಿಂ ಬಾರ್ಕೂರು, ಕೋಶಾಧಿಕಾರಿ ಮಹಮ್ಮದ್ ಸಿದ್ದೀಕ್, ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನ ಶೆಟ್ಟಿ, ಮುಡಿಪು ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ರಶೀದ್ ವಿಟ್ಲ, ತಾಲೂಕು ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಕೋಡಿಜಾಲ್, ಪತ್ರಿಕಾ ಕಾರ್ಯದರ್ಶಿಗಳಾದ ಅಹ್ಮದ್ ಕುಂಞಿ ಮಾಸ್ಟರ್, ಸಂಘಟನಾ ಕಾರ್ಯದರ್ಶಿ ಅಬ್ಬಾಸ್ ಉಚ್ಚಿಲ್, ಸದಸ್ಯರಾದ ಹಸನ್ ಕುಂಞಿ ಕೋಡಿಜಾಲ್, ಇಬ್ರಾಹೀಂ ತಪ್ಷಿಯಾ ನಡುಪದವು, ನಾಸೀರ್ ನಡುಪದವು, ಇಕ್ಬಾಲ್ ಸಾಮಾನಿಗೆ, ಸಿ.ಎಂ. ಶರೀಫ್ ಪಟ್ಟೋರಿ, ರಫೀಕ್ ಕೋಡಿಜಾಲ್, ಆಸಿಫ್ ಮೊದಲಾದವರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಕೋಡಿಜಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಎಂ.ಎಚ್. ಮಲಾರ್ ಸನ್ಮಾನ ಪತ್ರ ವಾಚಿಸಿದರು. ಜತೆಕಾರ್ಯದರ್ಶಿ ಎ.ಕೆ. ಅಬ್ದುಲ್ ರಹ್ಮಾನ್ ಕೋಡಿಜಾಲ್ ವಂದಿಸಿದರು. ಉಪಾಧ್ಯಕ್ಷ ಕೆಎಂಕೆ ಮಂಜನಾಡಿ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News