ಸೆ.27ರಿಂದ ರಾಜ್ಯ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟ

Update: 2023-09-25 15:08 GMT

ಮಂಗಳೂರು, ಸೆ.25: ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬೈ ಇದರ ದ.ಕ.-ಉಡುಪಿ ಜಿಲ್ಲಾ ಶಾಖೆ, ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘ ಮಂಗಳೂರು ಹಾಗೂ ಕರ್ನಾಟಕ ರಾಜ್ಯ ಮತ್ತು ದ.ಕ.ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಶನ್ ಇದರ ಸಹಯೋಗದಲ್ಲಿ ನಗರದ ಮಂಗಳಾ ಕ್ರೀಡಾಂಗಣದಲ್ಲಿ ಸೆ.27ರಿಂದ 30ರವರೆಗೆ ರಾಜ್ಯ ಜೂನಿಯರ್ ಅಥ್ಲೆಟಿಕ್ ಕ್ರೀಡಾಕೂಟ ನಡೆಯಲಿದೆ ಎಂದು ಆಯೋಜಿಸಲಾಗಿದೆ ಎಂದು ಮೊಗವೀರ ವ್ಯವಸ್ಥಾಪಕ ಮಂಡಳಿಯ ಅಧ್ಯಕ್ಷ ಭರತ್ ಕುಮಾರ್ ಉಳ್ಳಾಲ್ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂತಾರಾಷ್ಟ್ರೀಯ ಕ್ರೀಡಾಪಟು ದಿ. ಲೋಕನಾಥ ಬೋಳಾರ್ ಅವರ ಸ್ಮರಣಾರ್ಥ ಈ ಕ್ರೀಡಾಕೂಟ ಆಯೋಜಿಸಲಾಗಿದೆ. ರಾಜ್ಯದ 30 ಜಿಲ್ಲೆಗಳಿಂದ ಸುಮಾರು 1,500 ಕ್ರೀಡಾಪಟುಗಳು, 200 ಮಂದಿ ಅಧಿಕಾರಿಗಳು ಭಾಗವಹಿಸುವರು ಎಂದರು.

ಸೆ.27ರಂದು ಅಪರಾಹ್ನ 2:30ಕ್ಕೆ ಉರ್ವ ಮಾರಿಯಮ್ಮ ದೇವಸ್ಥಾನದ ಬಳಿಯಿಂದ ಕ್ರೀಡಾ ಮೆರವಣಿಗೆ ಹೊರಡಲಿದೆ. ಗೃಹಸಚಿವ ಹಾಗೂ ರಾಜ್ಯ ಅಥ್ಲೆಟಿಕ್ ಅಸೋಸಿಯೇಶನ್ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಚಾಲನೆ ನೀಡುವರು. 3:30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾಗೇಂದ್ರ, ಬಂದರು ಮತ್ತು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಮತ್ತಿತರರು ಭಾಗವಹಿಸುವರು ಎಂದು ಭರತ್ ಕುಮಾರ್ ಉಳ್ಳಾಲ್ ಹೇಳಿದರು.

ದಿ.ಲೋಕನಾಥ್ ಬೋಳಾರ್ ಅವರು ಡಿಸ್ಕಸ್ ಮತ್ತು ಶಾಟ್‌ಪುಟ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗಳಿಸಿರುವ ದ.ಕ.ಜಿಲ್ಲೆಯ ಮೊದಲಿಗರು. ಡಿಸ್ಕಸ್, ಶಾಟ್‌ಪುಟ್ ಮತ್ತು ಪವರ್ ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ಅಂತಾರಾಷ್ಟ್ರೀಯವಾಗಿ ಅವರು ಅನೇಕ ಪದಕಗಳನ್ನು ಪಡೆದು ದೇಶಕ್ಕೆ ಕೀರ್ತಿ ತಂದಿದ್ದಾರೆ. ಅವರ ಹೆಸರಿನಲ್ಲಿ ಕ್ರೀಡಾಕೂಟ ನಡೆಸಲು ಹೆಮ್ಮೆಯಾಗುತ್ತಿದೆ. 39 ವರ್ಷಗಳ ಬಳಿಕ ಈ ಕ್ರೀಡಾ ಕೂಟ ಮಂಗಳೂರಿನಲ್ಲಿ ನಡೆಯಲಿದೆ. ಸೆ.30ರಂದು ಸಂಜೆ 4ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ. ಸ್ಪರ್ಧೆಯಲ್ಲಿ ವಿಶೇಷ ಸಾಧನೆ ತೋರುವ ಸ್ಪರ್ಧೆಗೆ ಬೆಸ್ಟ್ ಅತ್ಲೀಟ್ ಪ್ರಶಸ್ತಿಯೊಂದಿಗೆ ವಿವಿಧ ವಿಭಾಗಗಳಲ್ಲಿ ಪದಕಗಳನ್ನು ನೀಡಿ ಗೌರವಿಸಲಾಗುವುದು ಎಂದು ಮಂಗಳೂರು ಯಾಂತ್ರಿಕ ಮೀನುಗಾರರ ಪ್ರಾಥಮಿಕ ಸಂಘದ ಅಧ್ಯಕ್ಷ ಉಮೇಶ್ ಟಿ. ಕರ್ಕೇರ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಬಾಬು ಸಾಲಿಯಾನ್, ವಿನಯ ಸುವರ್ಣ, ಭರತ್ ಕುಮಾರ್, ಶೋಭೇಂದ್ರ ಸಸಿಹಿತ್ಲು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News