ಹಡಗುಗಳಿಗೆ ಐಎನ್‌ಎಸ್ ಮುಲ್ಕಿ, ಐಎನ್‌ಎಸ್ ಮಲ್ಪೆ ಹೆಸರು
ಮಂಗಳೂರು: ಭಾರತೀಯ ನೌಕಾಪಡೆಯು ಎರಡು ಹಡಗುಗಳಿಗೆ ಕರಾವಳಿಯ ಎರಡು ಪ್ರಮುಖ ಪಟ್ಟಣದ ಹೆಸರನ್ನು ಇಟ್ಟಿವೆ. ಅಂದರೆ ಒಂದು ಹಡಗಿಗೆ ಐಎನ್‌ಎಸ್ ಮುಲ್ಕಿ ಮತ್ತು ಇನ್ನೊಂದು ಹೆಸರಿಗೆ ಐಎನ್‌ಎಸ್ ಮಲ್ಪೆ ಹೆಸರು ನಮೂದಿಸಿವೆ.
ಎದುರಾಳಿ ಪಡೆಯ ಸಬ್‌ಮೇರೀನ್‌ಗಳನ್ನು ಪತ್ತೆ ಮಾಡುವ ಕ್ಷಮತೆ ಇರುವ ಐಎನ್‌ಎಸ್ ಮುಲ್ಕಿ ಹಾಗೂ ಐಎನ್‌ಎಸ್ ಮಲ್ಪೆ ಎಂಬ ಎರಡೂ ಹಡಗುಗಳನ್ನೂ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನಿರ್ಮಾಣ ಮಾಡಲಾಗುತ್ತದೆ.
ಅಂದಹಾಗೆ, ಈ ಹೆಸರು ಹಿಂದೆಯೂ ಇತ್ತು. ಅಂದರೆ ರಶ್ಯಾದಿಂದ ಆಮದು ಮಾಡಿಕೊಳ್ಳಲಾಗಿದ್ದ 6 ಮೈನ್‌ಸ್ವೀಪಿಂಗ್ ನೌಕೆಗಳಲ್ಲಿ ಇವು ಸೇರಿತ್ತು. 1984ರಿಂದ 2003(ಮುಲ್ಕಿ) ಹಾಗೂ 2006(ಮಲ್ಪೆ)ರವರೆಗೆ ಕಾರ್ಯಾಚರಿಸಿದ್ದ ಈ ನೌಕೆ ಗಳನ್ನು ಮುಖ್ಯವಾಗಿ ಸಮುದ್ರ ತಟದಲ್ಲಿ ಕಡಲಿನ ಮೈನ್ ಸ್ಪೋಟಕ ಪತ್ತೆ ಮಾಡುವುದಕ್ಕೆ ಬಳಸಲಾಗುತ್ತಿತ್ತು. ಇವೆರಡನ್ನೂ ಬಳಿಕ ಸೇವೆಯಿಂದ ನಿವೃತ್ತಿಗೊಳಿಸಲಾಗಿತ್ತು.
ನೌಕಾಪಡೆ ಹಡಗುಗಳಿಗೆ ಸಾಮಾನ್ಯವಾಗಿ ನದಿಗಳ ಹೆಸರು (ಐಎನ್‌ಎಸ್ ಗಂಗಾ, ಐಎನ್‌ಎಸ್ ಬ್ರಹ್ಮಪುತ್ರ), ನಗರಗಳ ಹೆಸರು (ಐಎನ್‌ಎಸ್ ಮೈಸೂರ್, ಐಎನ್‌ಎಸ್ ಮುಂಬೈ), ಕೋಟೆ ಹೆಸರು (ಐಎನ್‌ಎಸ್ ಸಿಂಧುದುರ್ಗ) ಇತ್ಯಾದಿ ಇರಿಸಲಾಗುತ್ತದೆ. ಇದಕ್ಕೆಂದೇ ಒಂದು ಆಂತರಿಕ ಹಡಗು ನಾಮಕರಣ ಸಮಿತಿಯೇ ಇದೆ.
ಹೊಸದಾಗಿ ಎರಡು ಹಡಗಿಗೆ ಈ ಹೆಸರು ನಮೂದಿಸಲು ಕಾರಣವೂ ಇದೆ. ಅಂದರೆ ನೌಕಾಪಡೆಯಲ್ಲಿ 150ಕ್ಕೂ ಅಧಿಕ ಹಡಗುಗಳಿದ್ದು, ಹೆಸರುಗಳನ್ನು ಸಾಮಾನ್ಯವಾಗಿ ಪುನರಾವರ್ತಿಸುತ್ತಾರೆ ಎಂದು ಮುಲ್ಕಿಯವರೇ ಆದ ನಿವೃತ್ತ ನೇವಲ್ ಅಧಿಕಾರಿ ವೈಸ್ ಅಡ್ಮಿರಲ್ ಬಿ. ಆರ್.ರಾವ್ ಅಭಿಪ್ರಾಯಪಟ್ಟಿದ್ದಾರೆ.
ಹಿಂದೆ ಮುಲ್ಕಿ ರಾಜ್ಯದ ಪ್ರಮುಖ ಬಂದರುಗಳಲ್ಲಿ ಒಂದಾಗಿತ್ತು, ಆವಾಗ ದೇಶ ವಿದೇಶಗಳಿಂದ ಸಣ್ಣ ಹಡಗುಗಳು ಮುಲ್ಕಿ ಸಮುದ್ರದವರೆಗೆ ಬಂದು ಅಲ್ಲಿಂದ ಶಾಂಭವಿ ನದಿಯ ಒಳಗೆ ಬರುತ್ತಿತ್ತು. ಪ್ರಮುಖ ವಾಣಿಜ್ಯ ಚಟುವಟಿಕೆಗೆ ಆಗ ಮುಲ್ಕಿಯು ಕೇಂದ್ರವಾಗಿತ್ತು. 1930ರಿಂದ 1960ರವರೆಗೆ ಪ್ರಯಾಣಿಕರ ಸ್ಟೀಮರ್ ನೌಕೆಗಳೂ ಇಲ್ಲಿಗೆ ಬಂದು ಹೋಗುತ್ತಿದ್ದವು. ಉಡುಪಿಯಿಂದ ಮಂಗಳೂರಿಗೆ ಹೋಗಲು ಫೆರ್ರಿ ಮೂಲಕ ಜನರು ಇಲ್ಲಿ ನದಿ ದಾಟುತ್ತಿದ್ದರು. ಹಾಗಾಗಿಯೇ ಬ್ರಿಟಿಷರ ಕಾಲದಲ್ಲೇ ಕಡಲ ನಕ್ಷೆಯಲ್ಲಿ ಮೂಲ್ಕಿ ಹಾಗೂ ಮಲ್ಪೆ ಹೆಸರುಗಳಿದ್ದವು.
ಆದರೆ ಶಾಂಭವಿ ನದಿಗೆ 1960ರಲ್ಲಿ ಸೇತುವೆ ನಿರ್ಮಾಣಗೊಂಡ ಬಳಿಕ ಮುಲ್ಕಿ ಎನ್ನುವ ಬಂದರು ತನ್ನ ಮಹತ್ವ ಕಳೆದು ಕೊಂಡಿತು. ಈಗ ಇಲ್ಲಿ ಎರಡು ಸೇತುವೆಗಳಿರುವುದರಿಂದ ಮೂಲ್ಕಿ ಶಾಶ್ವತವಾಗಿ ಬಂದರು ಸ್ಥಾನವನ್ನು ಕಳೆದುಕೊಂಡಿತ್ತು. ಇದೀಗ ನೌಕಾಪಡೆಯ ಹಡಗಿನಿಂದಾಗಿ ಮತ್ತೆ ಹಳೆಯ ನೆನಪೂ ಮರುಕಳಿಸಲಿದೆ ಎಂದು ಹೇಳಲಾಗುತ್ತಿದೆ.