ಮಂಗಳೂರಿನಲ್ಲಿ ಮೊಳಗಿದ ‘ಸೌಜನ್ಯಾ’ ಪರ ಹೋರಾಟದ ಧ್ವನಿ

Update: 2023-08-20 16:29 GMT

ಮಂಗಳೂರು, ಆ.20: ಧರ್ಮಸ್ಥಳದಲ್ಲಿ ಹನ್ನೊಂದು ವರ್ಷದ ಹಿಂದೆ ನಡೆದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಕೃತ್ಯಕ್ಕೆ ಸಂಬಂಧಿಸಿ ನ್ಯಾಯ ದೊರಕಿಸಿಕೊಡಬೇಕೆಂದು ರಾಜ್ಯದ ಹಲೆವೆಡೆ ನಡೆಯುತ್ತಿರುವ ಪ್ರತಿಭಟನೆಯ ಕಿಚ್ಚು ಮಂಗಳೂರಿನಲ್ಲೂ ಕಾಣಿಸಿಕೊಂಡಿವೆ. ಸೌಜನ್ಯಾ ಹೋರಾಟ ಸಮಿತಿ ಮಂಗಳೂರು ಇದರ ವತಿಯಿಂದ ರವಿವಾರ ನಗರದ ಕದ್ರಿ ಬಯಲಯ ರಂಗ ಮಂದಿರದ ಮೈದಾನದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಾವಿರಾರು ಮಂದಿ ಸೌಜನ್ಯಾ ಪರ ಹೋರಾಟದ ಧ್ವನಿ ಮೊಳಗಿಸಿದ್ದಾರೆ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ರವಿವಾರ ಸಂಜೆ ಶ್ರೀ ಕ್ಷೇತ್ರ ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನದಿಂದ ಕದ್ರಿ ಬಯಲು ರಂಗ ಮಂದಿರದ ಮೈದಾನಕ್ಕೆ ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು ಆ ಬಳಿಕ ಬಹಿರಂಗ ಸಭೆಯಲ್ಲಿ ಪಾಲ್ಗೊಂಡರು. ಆಡಳಿತ ಮತ್ತು ವಿಪಕ್ಷದ ರಾಜಕಾರಣಿಗಳು, ಜನಪ್ರತಿನಿಧಿಗಳು ಆರೋಪ-ಪ್ರತ್ಯಾರೋಪ ಮಾಡದೆ ಸೌಜನ್ಯಾ ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡದಿದ್ದರೆ ಚುನಾವಣೆ ಬಹಿಷ್ಕರಿಸುವೆವು ಎಂಬ ಸಂದೇಶ ಸಾರಿದರು.

ಹೋರಾಟದ ಮುಂಚೂಣಿಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಮಾತನಾಡಿ ಎಲ್ಲಾ ಪಕ್ಷದ ರಾಜಕಾರಣಿಗಳು, ಜನಪ್ರತಿನಿಧಿಗಳು ಸೌಜನ್ಯಾ ಪ್ರಕರಣದ ಮರು ತನಿಖೆಗೆ ಸರಕಾರದ ಮೇಲೆ ಒತ್ತಡ ಹೇರಬೇಕು. ಸಮರ್ಥ ತಂಡದಿಂದ ತನಿಖೆ ಮಾಡಿಸಬೇಕು. ತಮ್ಮ ಮನೆ ಬಾಗಿಲಿಗೆ ಪ್ರತಿಭಟನಾಕಾರರು ಮುತ್ತಿಗೆ ಹಾಕುವಂತಹ ವಾತಾವರಣವನ್ನು ಯಾವ ಕಾರಣಕ್ಕೂ ರಾಜಕಾರಣಿಗಳು ಸೃಷ್ಟಿಸಬಾರದು ಎಂದರು.

ನ್ಯಾಯ ಕೇಳುವವರ ಬಾಯಿ ಮುಚ್ಚಿಸಲು ಇನ್ನೆಂದೂ ಸಾಧ್ಯವಿಲ್ಲ. 11 ವರ್ಷಗಳ ಕಾಲ ಶಾಂತಿಯುತವಾಗಿ ಹೋರಾಟ ನಡೆಸಿಕೊಂಡು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಕ್ರಾಂತಿಯಾಗಲಿದೆ. ಸೆ.3ರಂದು ಬೆಳ್ತಂಗಡಿಯಲ್ಲಿ ಜರುಗಿಸುವ ಬೃಹತ್ ಪ್ರತಿಭಟನೆಯ ಮೂಲಕ ಸರಕಾರ, ರಾಜಕಾರಣಿಗಳು, ಪೊಲೀಸ್ ಇಲಾಖೆಯನ್ನು ಕಣ್ತೆರೆಸುವ ಪ್ರಯತ್ನ ನಡೆಯಲಿದೆ ಎಂದು ಮಹೇಶ್ ಶೆಟ್ಟಿ ತಿಮರೋಡಿ ಎಚ್ಚರಿಸಿದರು.

ದೇಶದಲ್ಲಿ ಮಾನವೀಯತೆ, ಕಾನೂನು ಸತ್ತು ಹೋಗಿದೆ. ಪ್ರಜೆಗಳಿಗೆ ಹಕ್ಕು ಇಲ್ಲ ಎಂಬಂತಾಗಿದೆ. ಸೌಜನ್ಯಾಳನ್ನು ಗ್ಯಾಂಗ್‌ ರೇಪ್ ಮಾಡಿ ಹತ್ಯೆ ಮಾಡಿದವರು ಜೈಲಿಗೆ ಹೋಗಿಲ್ಲ. ಕಾನೂನು ರೀತಿಯ ಹೋರಾಟಕ್ಕೆ ನ್ಯಾಯ ಸಿಗದಿದ್ದರೆ ಅದನ್ನು ಕಸಿದುಕೊಳ್ಳಲು ಪ್ರಜಾಪ್ರಭುತ್ವಕ್ಕೆ ಗೊತ್ತಿದೆ. ಆದರೆ ಅದಕ್ಕೆ ಆಡಳಿತ ವ್ಯವಸ್ಥೆ ಅವಕಾಶ ನೀಡಬಾರದು. ಗೃಹ ಸಚಿವ ಪರಮೇಶ್ವರ್ ಸೌಜನ್ಯಾ ಪ್ರಕರಣ ಮುಗಿದ ಅಧ್ಯಾಯ ಎಂದಿದ್ದಾರೆ. ಆದರೆ ಅವರ ಮನೆ ಬಾಗಿಲಿಗೆ ಮುತ್ತಿಗೆ ಹಾಕುವಾಗ ನಮ್ಮ ಹೋರಾಟ ಏನೆಂಬುದು ಅವರಿಗೆ ಗೊತ್ತಾಗಲಿದೆ ಎಂದು ಮಹೇಶ್ ಶೆಟ್ಟಿ ಹೇಳಿದರು.

*ಸಮಿತಿಯ ಸಂಚಾಲಕಿ ಪ್ರಸನ್ನ ರವಿ ಮಾತನಾಡಿ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ಒಂದಾಗಿ ಮುಖ್ಯಮಂತ್ರಿ, ಪ್ರಧಾನಮಂತ್ರಿ, ಗೃಹಸಚಿವರು, ರಾಷ್ಟ್ರಪತಿಯ ಮೇಲೆ ಒತ್ತಡ ಹಾಕಬೇಕು. ನ್ಯಾಯ ಸಿಗದಿದ್ದರೆ ಚುನಾವಣೆ ಬಹಿಷ್ಕಾರ ಮಾಡಬೇಕು ಎಂದು ಕರೆ ನೀಡಿದರು.

*ಸೌಜನ್ಯಾಳ ತಾಯಿ ಕುಸುಮಾವತಿ ಮಾತನಾಡಿ ಕಳೆದ 11 ವರ್ಷದಿಂದ ನ್ಯಾಯಾಕ್ಕಾಗಿ ಊರಿಡೀ ಸುತ್ತುತ್ತಿದ್ದೇವೆ. ಈಗ ನಮ್ಮ ಹೋರಾಟಕ್ಕೆ ಜನರ ಬೆಂಬಲ ಕಂಡಾಗ ನ್ಯಾಯ ಸಿಗುವ ಭರವಸೆ ಮೂಡಿದೆ ಎಂದರು.

ಕದ್ರಿ ಜೋಗಿ ಮಠದ ನಿರ್ಮಲನಾಥ ಜಿ ಕಾರ್ಯಕ್ರಮ ಉದ್ಘಾಟಿಸಿದರು. ಶಶಿಕಲಾ ಶೆಟ್ಟಿ ಸ್ವಾಗತಿಸಿ ರೋಹಿತ್ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.






 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News