ಸ್ಪಷ್ಟ ಗುರಿಯೊಂದಿಗೆ ಜವಾಬ್ದಾರಿಯುತ ಸ್ಥಾನಕ್ಕೇರಲು ಪ್ರಯತ್ನಿಸಿ: ವಿದ್ಯಾರ್ಥಿಗಳಿಗೆ ಸ್ಪೀಕರ್ ಯು.ಟಿ.ಖಾದರ್ ಕರೆ

Update: 2024-08-17 12:06 GMT

ಮಂಗಳೂರು, ಆ.17: ವಿದೇಶದಲ್ಲಿ ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಲ್ಲಿ ಒಂದಂಶವನ್ನು ದ.ಕ. ಮತ್ತು ಉಡುಪಿ ಜಿಲ್ಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ದುಬೈನ ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್) ನಾನಾ ರೀತಿಯ ನೆರವು ನೀಡುವ ಮೂಲಕ ಶ್ಲಾಘನೀಯ ಸೇವೆ ಮಾಡುತ್ತಿವೆ. ಈ ಸೇವೆಯನ್ನು ಪಡೆಯುವ ಪ್ರತಿಯೊಬ್ಬರೂ ಕೂಡ ತನ್ನ ಬದುಕಿನ ಕೊನೆಯವರೆಗೂ ನೆನಪಿನಲ್ಲಿಟ್ಟುಕೊಳ್ಳಬೇಕು. ಅದರಲ್ಲೂ ಸ್ಪಷ್ಟವಾದ ಗುರಿಯೊಂದಿಗೆ ಜವಾಬ್ದಾರಿಯುತ ಸ್ಥಾನಕ್ಕೇರಲು ವಿದ್ಯಾರ್ಥಿಗಳು ಸದಾ ಪ್ರಯತ್ನಿಸಬೇಕು ಎಂದು ರಾಜ್ಯ ವಿಧಾನಸಭೆಯ ಅಧ್ಯಕ್ಷ ಯು.ಟಿ. ಖಾದರ್ ಕರೆ ನೀಡಿದರು.

ದುಬೈ ಬಿಸಿಎಫ್ ವತಿಯಿಂದ ನಗರದ ಪುರಭವನದಲ್ಲಿ ಶನಿವಾರ ನಡೆದ ವಿದ್ಯಾರ್ಥಿ ವೇತನ, ಹೊಲಿಗೆ ಯಂತ್ರ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ದೇಶ - ವಿದೇಶದಲ್ಲಿದ್ದುಕೊಂಡು ಸಮಾಜಮುಖಿ ಕೆಲಸ ಮಾಡುವ ಸಂಘಟನೆಗಳು ಸಮಾಜ ಮತ್ತು ಸಮುದಾಯಕ್ಕೆ ದೊಡ್ಡ ಶಕ್ತಿಯಾಗಿವೆ. ಅದರಲ್ಲೂ ಬಿಸಿಎಫ್ 24 ವರ್ಷಗಳಿಂದ ವಿದ್ಯಾರ್ಥಿ ವೇತನ ಸಹಿತ ಅರ್ಹ ಕುಟುಂಬಗಳಿಗೆ ಎಲ್ಲಾ ರೀತಿಯ ಸಹಕಾರ ನೀಡುವ ಮೂಲಕ ಸಂಘಟನೆಗಳಿಗೆ ಮಾದರಿಯಾಗಿದೆ. ದೇಶ ಮತ್ತು ಸಮುದಾಯಕ್ಕೆ ಕೊಡುವ ಈ ನೆರವನ್ನು ಯಾವತ್ತೂ ಯಾರೂ ಮರೆಯಬಾರದು. ಇಂದಿಲ್ಲಿ ವಿದ್ಯಾರ್ಥಿವೇತನ ಪಡೆದವರು ಆತ್ಮವಿಶ್ವಾಸ ಬೆಳೆಸಿಕೊಂಡು ಶೈಕ್ಷಣಿಕ ಸಹಿತ ಎಲ್ಲಾ ರಂಗದಲ್ಲೂ ಮುನ್ನುಗ್ಗಬೇಕು. ಅಲ್ಲದೆ ಹೊಲಿಗೆ ಯಂತ್ರಗಳನ್ನು ಸ್ವೀಕರಿಸಿದ ಮಹಿಳೆಯರು ಕೂಡ ಸ್ವಾವಲಂಬನೆಯತ್ತ ಹೆಚ್ಚು ಗಮನಹರಿಸಬೇಕು ಎಂದು ಯು.ಟಿ. ಖಾದರ್ ಹೇಳಿದರು.


ರಾಜ್ಯ ಹಜ್ ಸಚಿವ ರಹೀಂ ಖಾನ್ ಮಾತನಾಡಿ ಮಂಗಳೂರು ಶೈಕ್ಷಣಿಕವಾಗಿ ಕ್ರಾಂತಿಯನ್ನೇ ನಿರ್ಮಿಸಿದೆ. ಅದರಲ್ಲೂ ಇಲ್ಲಿನ ಮುಸ್ಲಿಮರು ಎಲ್ಲಾ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದಾರೆ. ಆದರೆ ಹೈದರಾಬಾದ್ ಕರ್ನಾಟಕ ಭಾಗದ ಮುಸ್ಲಿಮರ ಅಭಿವೃದ್ಧಿ ಇನ್ನೂ ಆಗಿಲ್ಲ. ಇದಕ್ಕೆ ಶೈಕ್ಷಣಿಕವಾಗಿ ಹಿಂದುಳಿದಿರವುದು ಕೂಡಾ ಕಾರಣವಾಗಿದೆ. ಸರಕಾರದ ಜೊತೆಗೆ ಸಂಘ ಸಂಸ್ಥೆಗಳ ಸಹಕಾರದಿಂದ ಹಿಂದುಳಿದ ಪ್ರದೇಶದ ಮತ್ತು ಜನರನ್ನು ಅಭಿವೃದ್ಧಿಗೊಳಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ದುಆಗೈದರು. ಬಿಸಿಎಫ್ ಅಧ್ಯಕ್ಷ ಡಾ.ಬಿ.ಕೆ.ಯೂಸುಫ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಶಾಸಕ ಬಿ.ಎ. ಮೊಯ್ದಿನ್ ಬಾವ ಮತ್ತು ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (ಬಿಸಿಸಿಐ) ಅಧ್ಯಕ್ಷ ಎಸ್. ಎಂ. ರಶೀದ್ ಹಾಜಿ ಶುಭ ಹಾರೈಸಿದರು. ಬಿಸಿಎಫ್ ವಿದ್ಯಾರ್ಥಿ ವೇತನ ಸಮಿತಿಯ ಅಧ್ಯಕ್ಷ ಎಂ.ಇ.ಮೂಳೂರು ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಿದರು.


ವೇದಿಕೆಯಲ್ಲಿ ಬೆಂಗಳೂರಿನ ಲಿಟ್ಲ್ ಫ್ಲವರ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಪ್ರೆಸಿಡೆನ್ಸಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್‌ನ ನಿರ್ದೇಶಕಿ ನಫೀಸಾ ಅಹ್ಮದ್ ಮತ್ತು ನಿರ್ದೇಶಕ ಸುಹೈಲ್, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುನ್ನಾಸಿರ್ ಲಕ್ಕಿಸ್ಟಾರ್, ಉದ್ಯಮಿ ಕೆ. ಮುಹಮ್ಮದ್ ಹಾರಿಸ್, ಬಿಸಿಎಫ್ ಮಹಿಳಾ ಘಟಕದ ಅಧ್ಯಕ್ಷೆ ಮುಮ್ತಾಝ್, ಮೈಮುನಾ ಇಕ್ಬಾಲ್, ಝಾಹಿದಾ ಜಲೀಲ್, ಬಿಸಿಎಫ್ ಮುಖ್ಯ ಸಲಹೆಗಾರ ಅಬೂಸ್ವಾಲಿಹ್ ಹುಸೇನ್, ಕಾರ್ಯಕಾರಿ ಸಮಿತಿ ಸದಸ್ಯ ಅಶ್ರಫ್ ಸತ್ತಿಕಲ್, ಹುಸೈನ್ ಸತ್ತಿಕ್ಕಲ್, ಉಸ್ಮಾನ್ ಮೂಳೂರು, ರಝಾಕ್ ದೇವ ಹಾಗೂ ಅಬ್ದುಲ್ಲಾ ಮಾದುಮೂಲೆ, ಕತರ್ ಅಬ್ದುಲ್ಲಾ ಮೋನು, ಸಿ.ಆರ್. ಅಬೂಬಕರ್, ಶೇಖಬ್ಬ ಕನ್ನಂಗಾರ್, ಮುಹಮ್ಮದ್ ಅಲಿ ಕಮ್ಮರಡಿ, ಬದ್ರುದ್ದೀನ್ ಪಣಂಬೂರು, ಸೈಯದ್ ಅಸ್ಲಂ, ಅಝೀಝ್ ಬೈಕಂಪಾಡಿ, ಇಮ್ತಿಯಾಝ್, ಬಿ.ಎ.ನಝೀರ್, ಶಾಹುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.

ಬಿಸಿಎಫ್ ಮುಖ್ಯ ಪೋಷಕ ಬಿ.ಎಂ. ಮುಮ್ತಾಝ್ ಅಲಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ.ಪ್ರೊ.ಕಾಪು ಮುಹಮ್ಮದ್ ಕಾರ್ಯಕ್ರಮ ನಿರೂಪಿಸಿದರು. ಬಿಸಿಎಫ್ ಉಪಾಧ್ಯಕ್ಷ ಅಬ್ದುಲ್ ಲತೀಫ್ ಮುಲ್ಕಿ ವಂದಿಸಿದರು.








ದಿ ನ್ಯಾಶನಲ್ ಕಮಿಷನ್ ಫಾರ್ ಅಲ್ಲೈಡ್ ಆ್ಯಂಡ್ ಹೆಲ್ತ್‌ಕೇರ್ ಕರ್ನಾಟಕ ಇದರ ನೂತನ ರಾಜ್ಯಾಧ್ಯಕ್ಷ ಪ್ರೊ.ಡಾ.ಯು.ಟಿ. ಇಫ್ತಿಕಾರ್ ಅಲಿ ಅವರಿಗೆ ಸ್ಪೆಷಲ್ ಅವಾರ್ಡ್ಸ್ ಆಫ್ ಅಪ್ರೆಶಿಯನ್ ಮತ್ತು ಪ್ರೆಸಿಡೆನ್ಸಿ ಗ್ರೂಪ್ ಆಫ್ ಇನ್‌ಸ್ಟಿಟ್ಯೂಶನ್ಸ್‌ನ ನಿರ್ದೇಶಕಿ ಕೌಸರ್ ನಿಸಾರ್ ಅವರಿಗೆ ಇಂಟರ್‌ನ್ಯಾಶನಲ್ ಹ್ಯುಮಾನಿಟಿರಿಯನ್ ಸರ್ವಿಸ್ ಅವಾರ್ಡ್, ಯುಎಇ ಗಡಿಯಾರ್ ಗ್ರೂಪ್‌ನ ಅಧ್ಯಕ್ಷ ಇಬ್ರಾಹೀಂ ಗಡಿಯಾರ್ ಅವರಿಗೆ ಇಬ್ನು ಬತೂತಾ ಅವಾರ್ಡ್ ನೀಡಿ ಸನ್ಮಾನಿಸಲಾಯಿತು.

ಕೆರಿಯರ್ ಗೈಡೆನ್ಸ್ ಬಗ್ಗೆ ಯುಇಇ ಲಂಡನ್ ಅಮೆರಿಕನ್ ಸಿಟಿ ಕಾಲೇಜಿನ ನಿರ್ದೇಶಕ ಡಾ.ಪ್ರೊ.ಕಾಪು ಮುಹಮ್ಮದ್ ಮತ್ತು ಮನಾಲ್ ಕಾಪು ಕಾರ್ಯಾಗಾರ ನಡೆಸಿಕೊಟ್ಟರು.


ಎಸೆಸೆಲ್ಸಿಯಲ್ಲಿ ಅಧಿಕ ಅಂಕ ಗಳಿಸಿದ ಮುಹಮ್ಮದ್ ಝಿಯಾದ್, ತಸ್ನೀಂ ಎಸ್.ಎಂ. ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಹಲೀಮತ್ ಶಾಹಿಮಾ, ಮುಸ್ಕಾನ್ ಕೌಸರ್, ಆಯಿಶತುಲ್ ಸಫಾನಾ ಹಾಗೂ ಮದ್ರಸದ ಪಬ್ಲಿಕ್ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 7ನೆ ತರಗತಿಯ ಫಾತಿಮಾ ಸಈದಾ, 10ನೆ ತರಗತಿಯ ಫಾತಿಮಾ ಝಹರಾ, 12ನೆ ತರಗತಿಯ ಅಶಾ ಆಯಿಶಾ ಅವರಿಗೆ ಬಿಸಿಎಫ್ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಹಲವರಿಗೆ ವಿದ್ಯಾರ್ಥಿ ವೇತನ ಮತ್ತು ಹೊಲಿಗೆ ಯಂತ್ರ ವಿತರಿಸಲಾಯಿತು.





















Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News