ಉಡುಪಿ ಹತ್ಯಾಕಾಂಡ; ವಿಶೇಷ ತ್ವರಿತ ನ್ಯಾಯಾಲಯದ ಮೂಲಕ ವಿಚಾರಣೆಗೆ ಮುಸ್ಲಿಮ್ ಸೆಂಟ್ರಲ್ ಕಮಿಟಿ ಆಗ್ರಹ
Update: 2023-11-20 22:55 IST
ಮಂಗಳೂರು, ನ.20: ಇತ್ತೀಚೆಗೆ ಉಡುಪಿ ಜಿಲ್ಲೆಯ ನೇಜಾರಿನಲ್ಲಿ ನಡೆದ ನಾಲ್ಕು ಮಂದಿಯ ಕೊಲೆ ಪ್ರಕರಣದ ಬಗ್ಗೆ ತ್ವರಿತ ಗತಿಯಲ್ಲಿ ನ್ಯಾಯ ಒದಗಿಸಲು ವಿಶೇಷ ತ್ವರಿತ ನ್ಯಾಯಾಲಯದ ಮೂಲಕ ಪ್ರಕರಣದ ವಿಚಾರಣೆಯನ್ನು ನಡೆಸುವಂತೆ ದ.ಕ. ಮತ್ತು ಉಡುಪಿ ಜಿಲ್ಲಾ ದಿ ಮುಸ್ಲಿಮ್ ಸೆಂಟ್ರಲ್ ಕಮಿಟಿ ಸರಕಾರವನ್ನು ಆಗ್ರಹಿಸಿದೆ.
ಕಮಿಟಿಯ ಅಧ್ಯಕ್ಷ ಅಲ್ ಹಾಜ್ ಕೆ ಎಸ್ ಮೊಹಮ್ಮದ್ ಮಸೂದ್ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಂಡು ಸರಕಾರಕ್ಕೆ ಮನವಿ ಸಲ್ಲಿಸಿದೆ.
ಪ್ರಕರಣದ ವಿಚಾರಣೆಗೆ ಹಿರಿಯ ನ್ಯಾಯವಾದಿ ಶಿವಪ್ರಕಾಶ್ ಆಳ್ವ ಸರಕಾರಿ ಅಭಿಯೋಜಕರಾಗಿ ನೇಮಿಸಬೇಕೆಂದು ಹಾಗೂ ಘಟನೆ ನಡೆದ ಮನೆಗೆ ಮುಖ್ಯಮಂತ್ರಿ ಮತ್ತು ಗೃಹಮಂತ್ರಿ ಭೇಟಿ ನೀಡಬೇಕೆಂದು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರಿಗೆ ಮನವಿ ಸಲ್ಲಿಸಿದೆ.