ಚಾರ್ಮಾಡಿ ಘಾಟಿಯಲ್ಲಿ ಪ್ರವಾಹದಂತೆ ಹರಿದ ನೀರು: ವಾಹನ ಸಂಚಾರಕ್ಕೆ ಅಡಚಣೆ
ಬೆಳ್ತಂಗಡಿ: ತಾಲೂಕಿನಲ್ಲಿ ಮಂಗಳವಾರ ಮಳೆ ಇಲ್ಲದಿದ್ದರೂ ಸಂಜೆಯ ವೇಳೆ ಮೃತ್ಯುಂಜಯ ನದಿ ತುಂಬಿ ಹರಿದಿದ್ದು, ನದಿ ಬದಿಯ ತೋಟಗಳಿಗೆ ನೀರು ನುಗ್ಗಿದೆ. ಚಾರ್ಮಾಡಿ ಘಾಟಿಯಲ್ಲಿ ರಸ್ತೆಯಲ್ಲಿಯೇ ನೀರು ಪ್ರವಾಹದಂತೆ ಹರಿದು ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿತ್ತು.
ಮೃತ್ಯುಂಜಯ ನದಿಯಲ್ಲಿ ಐದು ಗಂಟೆಯ ಸುಮಾರಿಗೆ ನೀರಿನ ಮಟ್ಟ ಏಕಾಏಕಿ ಏರಲಾರಂಭಿಸಿದೆ. ಚಾರ್ಮಾಡಿ ಪರಿಸರದಲ್ಲಿ ಮಳೆ ಸುರಿದಿದ್ದರೂ ನೀರಿನ ಮಟ್ಟ ಏರುವಷ್ಟು ಇರಲಿಲ್ಲ. ಸೋಮವಾರವೂ ಮಳೆ ಇಲ್ಲದಿದ್ದರೂ ನದಿಯಲ್ಲಿ ನೀರು ಏರಿತ್ತು, ಮಂಗಳವಾರವೂ ಇದು ಮುಂದುವರಿದಿದೆ. ಚಾರ್ಮಾಡಿಯ ಕಿಂಡಿ ಅಣೆಕಟ್ಟಿನಲ್ಲಿ ಭಾರೀ ಪ್ರಮಾಣದಲ್ಲಿ ಮರಮಟ್ಟುಗಳು ಬಂದು ಸಿಲುಕಿಕೊಂಡಿದ್ದು ನೀರು ನೇರವಾಗಿ ತೋಟಗಳಿಗೆ ನುಗ್ಗಿದ್ದು ಮನೆಗಳ ಅಂಗಳದ ವರೆಗೂ ನೀರು ಬಂದಿದ್ದು, ಜನರಲ್ಲಿ ಆತಂಕಮೂಡಿಸಿತ್ತು.
ಸತತ ಎರಡು ದಿನಗಳ ಕಾಲ ಭಾರೀ ಮಳೆ ಇಲ್ಲದಿದ್ದರೂ ನದಿಗಳು ತುಂಬಿ ಹರಿದು ಪ್ರವಾಹದ ಸ್ಥಿತಿ ನಿರ್ಮಾಣ ಮಾಡಿರುವುದು ಜನರಲ್ಲಿ ಆತಂಕ ಮೂಡಿಸಲು ಕಾರಣವಾಗಿದೆ.
ಘಟ್ಟದ ಮೇಲ್ಭಾಗದಲ್ಲಿ ಒಂದೇ ಪ್ರದೇಶದಲ್ಲಿ ಭಾರೀ ಮಳೆ ಸುರಿದು ಜಲಸ್ಪೋಟ ಅಥವಾ ಭೂಕುಸಿತ ಸಂಭವಿಸಿ ಈ ರೀತಿಯ ಪ್ರವಾಹ ಬಂದಿರಬಹುದು ಎಂಬ ಅನುಮಾನ ಸ್ಥಳೀಯರಿಂದ ವ್ಯಕ್ತವಾಗುತ್ತಿದೆ. ಕೆಸರು ಮಿಶ್ರಿತ ನೀರಿನೊಂದಿಗೆ ಕಲ್ಲುಗಳು, ಮರದ ತುಂಡುಗಳು ಹರಿದು ಬರುತ್ತಿದ್ದವು ಎಂದು ಸ್ಥಳೀಯರು ಮಾಹಿತಿ ನೀಡುತ್ತಿದ್ದಾರೆ. ವಯನಾಡಿನ ದುರಂತದ ಬಳಿಕ ಜನ ನದಿಯಲ್ಲಿ ನೀರು ಏರುತ್ತಿರುವುದನ್ನು ಆತಂಕದಿಂದ ನೋಡುತ್ತಿದ್ದಾರೆ. ಯಾವ ಕಾರಣದಿಂದಾಗಿ ಈ ರೀತಿ ಆಗುತ್ತಿದೆ ಎಂಬ ಬಗ್ಗೆ ಸಮರ್ಪಕವಾದ ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.