ಚೀನಾದಲ್ಲಿ ಗಣಿ ದುರಂತ 10 ಮಂದಿ ಸಾವು; 6 ಮಂದಿ ನಾಪತ್ತೆ
ಬೀಜಿಂಗ್: ಮಧ್ಯಚೀನಾದ ಹೆನಾನ್ ಪ್ರಾಂತದಲ್ಲಿ ಕಲ್ಲಿದ್ದಲ ಗಣಿ ದುರಂತದಲ್ಲಿ ಕನಿಷ್ಟ 10 ಮಂದಿ ಸಾವನ್ನಪ್ಪಿದ್ದು 6 ಮಂದಿ ನಾಪತ್ತೆಯಾಗಿದ್ದಾರೆ ಎಂದು ಸರಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ಧಿಸಂಸ್ಥೆ ವರದಿ ಮಾಡಿದೆ.
ಪಿಂಗ್ಡಿಂಗ್ಷಾನ್ ನಗರದ ಕಲ್ಲಿದ್ದಲ ಗಣಿಯಲ್ಲಿ ಕಲ್ಲಿದ್ದಲು ಮತ್ತು ಅನಿಲ ಸ್ಫೋಟದಿಂದ ಅಪಘಾತ ಸಂಭವಿಸಿದ್ದು ಆಗ ಗಣಿಯಾಳದಲ್ಲಿ 425 ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಸ್ಫೋಟದ ಬಳಿಕ ನಡೆದ ರಕ್ಷಣಾ ಕಾರ್ಯಾಚರಣೆಯ ಸಂದರ್ಭ 10 ಕಾರ್ಮಿಕರ ಮೃತದೇಹ ಪತ್ತೆಯಾಗಿದ್ದು 6 ಮಂದಿ ನಾಪತ್ತೆಯಾಗಿದ್ದಾರೆ. ಉಳಿದವರನ್ನು ರಕ್ಷಿಸಲಾಗಿದೆ ಎಂದು ತುರ್ತು ಸೇವಾ ಇಲಾಖೆ ಮಾಹಿತಿ ನೀಡಿದೆ. ಗಣಿಯ ನಿರ್ವಹಣೆ ವಹಿಸಿಕೊಂಡಿದ್ದವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚೀನಾದಲ್ಲಿ ಕಲ್ಲಿದ್ದಲ ಗಣಿಗಳಲ್ಲಿ ಸುರಕ್ಷಾ ಗುಣಮಟ್ಟವನ್ನು ಸೂಕ್ತವಾಗಿ ನಿರ್ವಹಿಸದ ಕಾರಣ ಗಣಿ ದುರಂತ ಸಾಮಾನ್ಯವಾಗಿದ್ದು 2022ರಲ್ಲಿ 168 ಗಣಿ ದುರಂತದಲ್ಲಿ 245 ಮಂದಿ ಮೃತಪಟ್ಟಿದ್ದಾರೆ ಎಂದು ಸರಕಾರದ ಅಂಕಿಅಂಶ ತಿಳಿಸಿದೆ.