5 ವರ್ಷದಲ್ಲಿ ಮಣಿಪುರಕ್ಕೆ 10675 ಅಕ್ರಮ ವಲಸಿಗರು: ಸಿಎಂ ಬಿರೇನ್ ಸಿಂಗ್

Update: 2024-08-03 04:18 GMT

 ಮಣಿಪುರ ಸಿಎಂ ಎನ್.ಬಿರೇನ್ ಸಿಂಗ್ (PTI)

ಗುವಾಹತಿ: ಮಣಿಪುರದಲ್ಲಿ ಕಳೆದ ಐದು ವರ್ಷಗಳಲ್ಲಿ 10,675 ಮಂದಿ ಅಕ್ರಮ ವಲಸಿಗರನ್ನು ಪತ್ತೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಶುಕ್ರವಾರ ರಾಜ್ಯ ವಿಧಾನಸಭೆಗೆ ತಿಳಿಸಿದ್ದಾರೆ. ಈ ಪೈಕಿ ಬಹುತೇಕ ಮಂದಿ ಮ್ಯಾನ್ಮಾರ್, ಚೀನಾ, ಬಾಂಗ್ಲಾದೇಶ, ನಾರ್ವೆ ಮತ್ತು ನೇಪಾಳದಿಂದ ಆಗಮಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಕಾಂಗ್ರೆಸ್ ಶಾಸಕ ಸುರ್ಜಾಕುಮಾರ್ ಓಕ್ರಂ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ, ಈ ಅವಧಿಯಲ್ಲಿ 85 ಮಂದಿ ಅಕ್ರಮ ವಲಸಿಗರನ್ನು ಗಡೀಪಾರು ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಈಗ ಇರುವವರ ಪೈಕಿ 143 ಮಂದಿಯನ್ನು ಬಂಧನಾ ಕೇಂದ್ರಗಳಲ್ಲಿ ಇಡಲಾಗಿದೆ ಹಾಗೂ ಉಳಿದವರು ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿದ್ದಾರೆ. ಇಂಥ ವಲಸೆಗಾರರಿಗಾಗಿ ರಾಜ್ಯ ಸರ್ಕಾರ ಇದುವರೆಗೆ 85 ಲಕ್ಷ ರೂಪಾಯಿಗಳನ್ನು ವೆಚ್ಚ ಮಾಡಿದೆ ಎಂದು ಅಂಕಿ ಅಂಶ ನೀಡಿದರು.

ಕಳೆದ ವರ್ಷದ ಮೇ ತಿಂಗಳಲ್ಲಿ ರಾಜ್ಯದಲ್ಲಿ ಜನಾಂಗೀಯ ಸಂಘರ್ಷ ಭುಗಿಲೆದ್ದ ಹಿನೆಲೆಯಲ್ಲಿ ಅಕ್ರಮ ವಲಸೆಯ ಪ್ರಶ್ನೆ ಹೆಚ್ಚಿನ ಮಹತ್ವ ಪಡೆದಿತ್ತು. ಚುರಾಚಂದಪುರ, ಚಾಂಡೇಲ್, ತೆಂಗೋಪಾಲ್, ಕಮ್ಜಾಂಗ್ ಮತ್ತು ಫ್ರೆಝ್ವಲ್ ಜಿಲ್ಲೆಗಳಲ್ಲಿ ಮ್ಯಾನ್ಮಾರ್ನಿಂದ ಆಗಮಿಸಿದ ಅಕ್ರಮ ವಲಸಿಗರನ್ನು ದೃಢೀಕರಿಸಲು ಸಮಿತಿಯನ್ನು ರಚಿಸಲಾಗಿದೆ ಎಂದು ಬಿರೇನ್ ಸಿಂಗ್ ವಿವರಿಸಿದರು. ಕಳೆದ ವರ್ಷ ಮೇ 3ರಂದು ಹಿಂಸಾಚಾರ ಭುಗಿಲೇಳುವ ಮುನ್ನ, ಸಮಿತಿ 2480 ಅಕ್ರಮ ಮ್ಯಾನ್ಮಾರ್ ವಲಸಿಗರನ್ನು ಪತ್ತೆ ಮಾಡಿತ್ತು ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News