ಕೋವಿಡ್ ನಿಂದ 2020ರಲ್ಲಿ ಭಾರತದಲ್ಲಿ 11.9 ಲಕ್ಷ ಜನರು ಮೃತ್ಯು!

Update: 2024-07-20 14:56 GMT

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ 2020ರಲ್ಲಿ ಭಾರತದಲ್ಲಿ 11.9 ಲಕ್ಷ ಹೆಚ್ಚುವರಿ ಸಾವುಗಳು ಸಂಭವಿಸಿದ್ದು, 2019ಕ್ಕೆ ಹೋಲಿಸಿದರೆ ಇದು ಶೇ.17ರಷ್ಟು ಅಧಿಕವಾಗಿದೆ ಎಂದು ಅಂತರರಾಷ್ಟ್ರೀಯ ಅಧ್ಯಯನವೊಂದು ಬಹಿರಂಗಗೊಳಿಸಿದೆ.

ಇದು ಭಾರತದಲ್ಲಿ ಕೋವಿಡ್ ಸಾವುಗಳ ಕುರಿತು ಅಧಿಕೃತ ಅಂಕಿಅಂಶಗಳ ಸುಮಾರು ಎಂಟು ಪಟ್ಟು ಹೆಚ್ಚಿದೆ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಅಂದಾಜಿಗಿಂತ ಒಂದೂವರೆ ಪಟ್ಟು ಅಧಿಕವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಇವರಲ್ಲಿ ಬ್ರಿಟನ್ನಿನ ಆಕ್ಸ್‌ ಫರ್ಡ್ ವಿವಿಯ ಸಂಶೋಧಕರೂ ಸೇರಿದ್ದಾರೆ.

7.65 ಲಕ್ಷ ಕ್ಕೂ ಅಧಿಕ ವ್ಯಕ್ತಿಗಳ ದತ್ತಾಂಶಗಳನ್ನು ಬಳಸಿಕೊಂಡಿರುವ ಅಧ್ಯಯನವು, 2019 ಮತ್ತು 2020ರ ನಡುವೆ ಭಾರತದಲ್ಲಿ ಲಿಂಗ ಮತ್ತು ಸಾಮಾಜಿಕ ಗುಂಪುಗಳ ಮೂಲಕ ಜನನ ಸಮಯದಲ್ಲಿ ನಿರೀಕ್ಷಿತ ಜೀವಿತಾವಧಿಯಲ್ಲಿ ಬದಲಾವಣೆಗಳನ್ನು ಅಂದಾಜಿಸಿದೆ. ವರದಿಯ ಲೇಖಕರ ಪ್ರಕಾರ ಸಾಂಕ್ರಾಮಿಕದಿಂದಾಗಿ ಜಾಗತಿಕವಾಗಿ ಹೆಚ್ಚುವರಿ ಸಾವುಗಳ ಪೈಕಿ ಮೂರನೇ ಒಂದರಷ್ಟು ಭಾರತದಲ್ಲಿಯೇ ಸಂಭವಿಸಿವೆ ಎಂದು ಭಾವಿಸಲಾಗಿದೆ.

ಸಂಶೋಧಕರ ತಂಡವು ತನ್ನ ಅಧ್ಯಯನಕ್ಕಾಗಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (ಎನ್‌ಎಫ್‌ಎಚ್‌ಎಸ್-5)ರ ದತ್ತಾಂಶಗಳನ್ನು ಬಳಸಿಕೊಂಡಿತ್ತು.

ನಿರೀಕ್ಷಿತ ಜೀವಿತಾವಧಿ ಮಹಿಳೆಯರಲ್ಲಿ 3.1 ವರ್ಷಗಳಷ್ಟು ಮತ್ತು ಪುರುಷರಲ್ಲಿ 2.1 ವರ್ಷಗಳಷ್ಟು ಕಡಿಮೆಯಾಗಿದೆ ಎಂದಿರುವ ವರದಿಯು, ಕುಟುಂಬಗಳಲ್ಲಿ ಆರೋಗ್ಯ ರಕ್ಷಣೆ ಮತ್ತು ಸಂಪನ್ಮೂಲ ವಿತರಣೆಯಲ್ಲಿ ಲಿಂಗ ಅಸಮಾನತೆಗಳು ಇದಕ್ಕೆ ಸಂಭಾವ್ಯ ಕಾರಣಗಳಾಗಿರಬಹುದು ಎಂದು ಹೇಳಿದೆ.

ಇದು ಹೆಚ್ಚಿನ ಆದಾಯದ ದೇಶಗಳಲ್ಲಿ ಕಂಡು ಬಂದಿರುವ ಪ್ರವೃತ್ತಿಗಳಿಗೆ ವ್ಯತಿರಿಕ್ತವಾಗಿದೆ. ಆ ದೇಶಗಳಲ್ಲಿ ಸಾಂಕ್ರಾಮಿಕದ ಸಮಯದಲ್ಲಿ ಹೆಚ್ಚುವರಿ ಸಾವುಗಳು ಮಹಿಳೆಯರಿಂತ ಪುರುಷರಲ್ಲಿ ಅಧಿಕವಾಗಿದ್ದವು ಎಂದು ಸೈನ್ಸ್ ಅಡ್ವಾನ್ಸಸ್ ಜರ್ನಲ್‌ನಲ್ಲಿ ಪ್ರಕಟಗೊಂಡಿರುವ ಅಧ್ಯಯನ ವರದಿಯಲ್ಲಿ ಲೇಖಕರು ತಿಳಿಸಿದ್ದಾರೆ.

ಸಾಮಾಜಿಕ ಗುಂಪುಗಳನ್ನು ಅವಲೋಕಿಸಿದಾಗ ಉನ್ನತ ಜಾತಿಯ ಹಿಂದು ಗುಂಪುಗಳಲ್ಲಿ ನಿರೀಕ್ಷಿತ ಜೀವಿತಾವಧಿ 1.3 ವರ್ಷಗಳಷ್ಟು ಕಡಿಮೆಯಾಗಿದ್ದರೆ, ಮುಸ್ಲಿಮ್ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಲ್ಲಿ ಇದು ಅನುಕ್ರಮವಾಗಿ 5.4 ಮತ್ತು 4.1 ವರ್ಷಗಳಷ್ಟು ಕುಸಿದಿದೆ. ಸಾಂಕ್ರಾಮಿಕವು ಈ ದುರ್ಬಲ ಜಾತಿ ಮತ್ತು ಧಾರ್ಮಿಕ ಗುಂಪುಗಳು ಈಗಾಗಲೇ ಎದುರಿಸುತ್ತಿದ್ದ ಅಸಮಾನತೆಯನ್ನು ಉಲ್ಬಣಗೊಳಿಸಿದೆ ಎಂದು ಲೇಖಕರು ಹೇಳಿದ್ದಾರೆ.

ದುರ್ಬಲ ಗುಂಪುಗಳು ಈಗಾಗಲೇ ಕಡಿಮೆ ಜೀವಿತಾವಧಿಯನ್ನು ಹೊಂದಿದ್ದವು ಮತ್ತು ಸಾಂಕ್ರಾಮಿಕವು ಹೆಚ್ಚು ಸವಲತ್ತುಗಳನ್ನು ಹೊಂದಿರುವ ಭಾರತೀಯ ಸಾಮಾಜಿಕ ಗುಂಪುಗಳು ಮತ್ತು ಅತ್ಯಂತ ದುರ್ಬಲ ಗುಂಪುಗಳ ನಡುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಆಕ್ಸ್‌ ಫರ್ಡ್ ವಿವಿಯಲ್ಲಿ ರೀಸರ್ಚ್ ಫೆಲೋ ಆಗಿರುವ ಲೇಖಕ ಆಶಿಷ್ ಗುಪ್ತಾ ವರದಿಯಲ್ಲಿ ಹೇಳಿದ್ದಾರೆ.

ಭಾರತದಲ್ಲಿ ಕೋವಿಡ್ ಸಾವುಗಳು ಎಲ್ಲ ವಯೋಗುಂಪುಗಳಲ್ಲಿ ವರದಿಯಾಗಿದ್ದರೂ ಹೆಚ್ಚಿನ ಸಾವುಗಳು ಕಿರಿಯರಲ್ಲಿ ಮತ್ತು ಅತ್ಯಂತ ಹಿರಿಯ ವ್ಯಕ್ತಿಗಳ ಗುಂಪುಗಳಲ್ಲಿ ಸಂಭವಿಸಿವೆ. ಇದೇ ವೇಳೆ ಹೆಚ್ಚು ಆದಾಯದ ದೇಶಗಳಲ್ಲಿ ಸಾವನ್ನಪ್ಪಿದವರಲ್ಲಿ 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಸಿಂಹಪಾಲು ಹೊಂದಿದ್ದಾರೆ ಎಂದಿರುವ ವರದಿಯು, ಕೆಲವು ಪ್ರದೇಶಗಳಲ್ಲಿ ಮಕ್ಕಳೇ ಹೆಚ್ಚಾಗಿ ಕೋವಿಡ್ ಸೋಂಕಿಗೆ ತುತ್ತಾಗಿದ್ದು ಕಿರಿಯರಲ್ಲಿ ಹೆಚ್ಚಿನ ಸಾವುಗಳಿಗೆ ಕಾರಣವನ್ನಾಗಿ ವಿವರಿಸಬಹುದು ಎಂದು ಹೇಳಿದೆ.

*ಕೇಂದ್ರದ ಪ್ರತಿಕ್ರಿಯೆ

ಅಧ್ಯಯನ ವರದಿಗೆ ಪ್ರತಿಕ್ರಿಯಿಸಿರುವ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು, ವರದಿಯಲ್ಲಿನ ಅಂದಾಜುಗಳು ದಾರಿ ತಪ್ಪಿಸುವಂಥದ್ದಾಗಿವೆ ಎಂದು ಹೇಳಿದೆ.

ಅಧ್ಯಯನವು ಕಂಡುಕೊಂಡಿರುವ ‘ಅಸಮರ್ಥನೀಯ ಮತ್ತು ಸ್ವೀಕಾರಾರ್ಹವಲ್ಲದ ’ ಅಂಶಗಳು ಗಂಭೀರ ನ್ಯೂನತೆಗಳನ್ನು ಹೊಂದಿರುವ ವಿಧಾನವನ್ನು ಆಧರಿಸಿವೆ. ಎನ್‌ಎಫ್‌ಎಚ್‌ಎಸ್ ಸಮೀಕ್ಷೆ ಮಾಡಿದ್ದ ಒಂದು ಉಪವಿಭಾಗದ ಕುಟುಂಬಗಳಲ್ಲಿಯ ಮರಣ ಪ್ರಮಾಣವನ್ನು ಗಣನೆಗೆ ತೆಗೆದುಕೊಂಡಿದ್ದು ಮತ್ತು ಈ ಫಲಿತಾಂಶಗಳನ್ನು ಇಡೀ ದೇಶಕ್ಕೆ ಅನ್ವಯಿಸಿದ್ದು ಮುಖ್ಯ ಲೋಪವಾಗಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.

ಎನ್‌ಎಫ್‌ಎಚ್‌ಎಸ್ ಸ್ಯಾಂಪಲ್‌ನ್ನು ಸಮಗ್ರವಾಗಿ ಪರಿಗಣಿಸಿದಾಗ ಮಾತ್ರ ಅದು ದೇಶವನ್ನು ಪ್ರತಿನಿಧಿಸುತ್ತದೆ. ವಿಶ್ಲೇಷಣೆಗೊಳಪಡಿಸಲಾದ 14 ರಾಜ್ಯಗಳ ಭಾಗದ ಶೇ.23ರಷ್ಟು ಕುಟುಂಬಗಳು ಇಡೀ ದೇಶವನ್ನು ಪ್ರತಿನಿಧಿಸುತ್ತಿವೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿಕೆಯು ತಿಳಿಸಿದೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News