ರೈಲಿನ ತುರ್ತು ಬ್ರೇಕ್ ಬಳಕೆ: ಮುಗ್ಗರಿಸಿಬಿದ್ದು ಇಬ್ಬರು ಪ್ರಯಾಣಿಕರು ಮೃತ್ಯು

Update: 2023-11-12 05:50 GMT

ಸಾಂದರ್ಭಿಕ ಚಿತ್ರ (PTI)

ಧನಬಾದ್: ದೆಹಲಿಗೆ ಹೊರಟಿದ್ದ ರೈಲಿನ ಚಾಲಕ ದಿಢೀರನೇ ತುರ್ತು ಬ್ರೇಕ್ ಬಳಸಿದ ಪರಿಣಾಮ ರೈಲು ದಿಢೀರನೇ ನಿಂತು, ಪ್ರಯಾಣಿಕರು ಆಯತಪ್ಪಿ ಬಿದ್ದು, ಇಬ್ಬರು ಮೃತಪಟ್ಟ ಘಟನೆ ಶನಿವಾರ ನಡೆದಿದೆ.

ಜಾರ್ಖಂಡ್‍ನ ಕೊಡೆರ್ಮಾ ಜಿಲ್ಲೆಯ ವ್ಯಾಪ್ತಿಯಲ್ಲಿ ವಿದ್ಯುತ್ ತಂತಿ ಕಿತ್ತು ಬಿದ್ದ ಪರಿಣಾಮ ಚಾಲಕ ದಿಢೀರನೇ ರೈಲಿನ ತುರ್ತು ಸಂದರ್ಭದ ಬ್ರೇಕ್ ಬಳಕೆ ಮಾಡಬೇಕಾಯಿತು. ಪುರಿ- ಹೊಸದಿಲ್ಲಿ ಪುರುಷೋತ್ತಮ ಎಕ್ಸ್ ಪ್ರೆಸ್ ರೈಲು ಗೋಮೊಹ್ ಮತ್ತು ಕೊಡೆಮ್ರಾ ರೈಲು ನಿಲ್ದಾಣದ ನಡುವಿನ ಪರ್ಸಾಬಾದ್ ಎಂಬಲ್ಲಿ ಚಲಿಸುತ್ತಿದ್ದ ಸಂದರ್ಭ ಈ ದುರಂತ ಸಂಭವಿಸಿದೆ. ಚಲಿಸುತ್ತಿದ್ದ ರೈಲಿಗೆ ವಿದ್ಯುತ್ ತಂತಿ ತುಂಡಾಗಿ ಬಿದ್ದ ಹಿನ್ನೆಲೆಯಲ್ಲಿ ಚಾಲಕ ದಿಢೀರನೇ ರೈಲು ನಿಲ್ಲಿಸಿದ್ದು ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.

"ವಿದ್ಯುತ್ ಸರಬರಾಜು ದಿಢೀರನೇ ಸ್ಥಗಿತಗೊಂಡ ಪರಿಣಾಮ ಚಾಲಕ ರೈಲನ್ನು ನಿಲ್ಲಿಸಲು ಎಮರ್ಜೆನ್ಸಿ ಬ್ರೇಕ್ ಬಳಕೆ ಮಾಡಬೇಕಾಯಿತು. ಆಗ ಉಂಟಾದ ಜರ್ಕ್‍ನಿಂದ ಇಬ್ಬರು ಮೃತಪಟ್ಟರು" ಎಂದು ಧನಬಾದ್ ರೈಲ್ವೆ ವಿಭಾದ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಅಮರೇಶ್ ಕುಮಾರ್ ವಿವರಿಸಿದ್ದಾರೆ.

ಈ ದುರಂತ ಸಂಭವಿಸಿದಾಗ ರೈಲು 130 ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿತ್ತು. ಧನಬಾದ್ ರೈಲ್ವೆ ವಿಭಾಘದ ಗ್ರ್ಯಾಂಡ್ ಕೋರ್ಡ್ ಮಾರ್ಗದಲ್ಲಿ ಈ ದುರಂತ ಸಂಭವಿಸಿದ ಬಳಿಕ ನಾಲ್ಕು ಗಂಟೆ ರೈಲು ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಪುನರಾರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ದುರಂತದ ಹಿನ್ನೆಲೆಯಲ್ಲಿ ಪುರುಷೋತ್ತಮ ಎಕ್ಸ್ ಪ್ರೆಸ್ ರೈಲನ್ನು ಗೋಮೊಹ್ ನಿಲ್ದಾಣಕ್ಕೆ ಡೀಸೆಲ್ ಎಂಜಿನ್ ಸಹಾಯದಿಂದ ಆ ಬಳಿಕ ತರಲಾಯಿತು. ನಂತರ ದಿಲ್ಲಿಗೆ ಎಲೆಕ್ಟ್ರಿಕ್ ಎಂಜಿನ್ ಮೂಲಕ ಚಾಲನೆ ಮಾಡಲಾಯಿತು ಎಂದು ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಧನಬಾದ್ ರೈಲ್ವೆ ವಿಭಾಗೀಯ ವ್ಯವಸ್ಥಾಪಕ ಕೆ.ಕೆ.ಸಿನ್ಹಾ ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News