ನಿಂಬೆಹಣ್ಣು ಸಾಗಾಟ ಟ್ರಕ್‌ನಲ್ಲಿ ಗೋಸಾಗಾಟದ ಶಂಕೆಯಿಂದ ʼಗೋರಕ್ಷಕರಿಂದʼ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ

Update: 2024-07-03 06:10 GMT

Screengrab:X/@zoo_bear

ಜೈಪುರ:‌ ನಿಂಬೆ ಹಣ್ಣನ್ನು ಸಾಗಾಟ ಮಾಡುತ್ತಿದ್ದ ಟ್ರಕ್‌ನಲ್ಲಿ ದನ ಸಾಗಾಟ ನಡೆಸಲಾಗುತ್ತಿದೆ ಎಂಬ ಸಂಶಯದಿಂದ ಹರಿಯಾಣಾದ ಇಬ್ಬರು ವ್ಯಕ್ತಿಗಳಿಗೆ ಥಳಿಸಿದ ಆರೋಪದ ಮೇಲೆ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ. ಘಟನೆ ಕಳೆದ ಶನಿವಾರ ಸಂಜೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದ್ದು ಸುಮಾರು 20 ಮಂದಿಯಿದ್ದ ಸ್ವಘೋಷಿತ ಗೋರಕ್ಷಕರ ತಂಡ ಈ ಹಲ್ಲೆ ನಡೆಸಿದ್ದಾರೆ.

ವರ್ತಕರಾದ ಸೋನು ಬನ್ಸೀರಾಂ (29) ಮತ್ತು ಸುಂದರ್‌ ಸಿಂಗ್‌ (35) ಒಂದು ಟ್ರಕ್‌ ತುಂಬಾ ನಿಂಬೆಹಣ್ಣನ್ನು ಚುರು ಎಂಬಲ್ಲಿಂದ ಪಂಜಾಬ್‌ನ ಭಟಿಂಡಾಗೆ ಸಾಗಿಸುತ್ತಿದ್ದಾಗ ಈ ಘಟನೆ ನಡೆದಿದೆ.

ವಿಪರೀತ ಮಳೆಯ ಕಾರಣ ಟ್ರಕ್‌ನಲ್ಲಿದ್ದ ಇಬ್ಬರು ಹೆದ್ದಾರಿ ಬಳಿ ವಾಹನ ನಿಲಲಿಸಿದ್ದರು. ಈ ಟ್ರಕ್‌ನಲ್ಲಿ ದನ ಸಾಗಾಟ ನಡೆಸಲಾಗುತ್ತಿದೆ ಎಂಬ ಗುಮಾನಿ ಹರಡಿ ಸುಮಾರು 20 ಮಂದಿಯ ತಂಡ ಈ ಟ್ರಕ್‌ ಅನ್ನು ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಬೆಂಬತ್ತಿತ್ತು. ನಿಂಬೆಹಣ್ಣು ವರ್ತಕರು ತಮ್ಮನ್ನು ಲೂಟಿಗೈಯ್ಯುವ ಉದ್ದೇಶದಿಂದ ಬೆಂಬತ್ತಲಾಗುತ್ತಿದೆ ಎಂಬ ಗುಮಾನಿಯಿಂದ ವಾಹನ ನಿಲ್ಲಿಸದೆ ಮುಂದಕ್ಕೆ ಸಾಗಿದರೂ ಲಸೇದಿ ಗ್ರಾಮದ ಟೋಲ್‌ ಪ್ಲಾಝಾ ಸಮೀಪ ದುಷ್ಕರ್ಮಿಗಳು ಟ್ರಕ್‌ ಅನ್ನು ಅಡ್ಡಗಟ್ಟುವಲ್ಲಿ ಸಫಲರಾದರು.

ನಂತರ ಟ್ರಕ್‌ ಅನ್ನು ನಿಲ್ಲಿಸಿ ಅದರಲ್ಲಿದ್ದ ಇಬ್ಬರಿಗೂ ಥಳಿಸಲಾಗಿತ್ತು. ನಂತರ ವಾಹನ ಪರಿಶೀಲಿಸಿದಾಗ ಅದರಲ್ಲಿ ಕೇವಲ ನಿಂಬೆ ಹಣ್ಣುಗಳಿರುವುದನ್ನು ಕಂಡು ತಮ್ಮ ತಪ್ಪಿನ ಅರಿವಾಗಿ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದರು. ಸಂತ್ರಸ್ತರು ಹರಿಯಾಣಾದ ಫತೇಹಬಾದ್‌ ನಿವಾಸಿಗಳಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ನಂತರ ಆರೋಪಿಗಳ ಬಂಧನವಾಗಿತ್ತು.

ಸಂತ್ರಸ್ತರಲ್ಲಿ ಒಬ್ಬನಾದ ಸೋನುವಿನ ಎರಡೂ ಕಾಲುಗಳ ಮೂಳೆ ಮುರಿತಕ್ಕೊಳಗಾಗಿದ್ದರೆ ಸುಂದರ್‌ ತಲೆ ಮತ್ತು ಕೈಗಳಿಗೆ ಗಾಯವಾಗಿದೆ. ಅವರ ಹೇಳಿಕೆಗಳನ್ನಾಧರಿಸಿ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News