ಚಂಡೀಪುರ ವೈರಸ್ ಸೋಂಕಿಗೆ ಗುಜರಾತ್‌ನಲ್ಲಿ ಮತ್ತಿಬ್ಬರು ಮಕ್ಕಳು ಬಲಿ; ಮೃತರ ಸಂಖ್ಯೆ 8ಕ್ಕೆ ಏರಿಕೆ
ಅಹಮದಾಬಾದ್: ಚಂಡೀಪುರ ಸೋಂಕಿಗೆ ಮಂಗಳವಾರ ಗುಜರಾತ್‌ನಲ್ಲಿ ಮತ್ತಿಬ್ಬರು ಮಕ್ಕಳು ಮೃತಪಟ್ಟಿದ್ದು, ಈ ಸೋಂಕಿಗೆ ಈವರೆಗೆ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಸಚಿವ ರಿಷಿಕೇಶ್ ಪಟೇಲ್ ತಿಳಿಸಿದ್ದಾರೆ.
ರಾಜ್ಯ ರಾಜಧಾನಿ ಗಾಂಧಿನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಾವಿನಿಂದ ರಾಜ್ಯದಲ್ಲಿ ಸೋಂಕಿತರ ಪ್ರಮಾಣ 14ಕ್ಕೆ ಏರಿಕೆಯಾಗಿದ್ದು, ಈ ಪೈಕಿ 8 ಮಂದಿ ಮೃತಪಟ್ಟಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಸಬರ್‌ಕಾಂತ, ಅರಾವಳಿ, ಮಹಿಸಾಗರ್, ಖೇಡಾ, ಮೆಹ್ಸಾನಾ ಹಾಗೂ ರಾಜ್‌ಕೋಟ್ ಜಿಲ್ಲೆಗಳಿಂದ ಸೋಂಕಿನ ಪ್ರಕರಣಗಳು ವರದಿಯಾಗಿವೆ ಎಂದು ಅವರು ಹೇಳಿದ್ದಾರೆ.
ನೆರೆಯ ರಾಜ್ಯಗಳಾದ ರಾಜಸ್ಥಾನದಲ್ಲಿ ಎರಡು, ಮಧ್ಯಪ್ರದೇಶದಲ್ಲಿ ಒಂದು ಪ್ರಕರಣ ವರದಿಯಾಗಿದ್ದು, ಆ ರೋಗಿಗಳಿಗೆ ಗುಜರಾತ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜಸ್ಥಾನದ ಇಬ್ಬರು ರೋಗಿಗಳ ಪೈಕಿ ಓರ್ವರು ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಚಂಡೀಪುರ ವೈರಸ್ ಜ್ವರ ತರಿಸಲಿದ್ದು, ಫ್ಲೂನಂತಹುದೇ ಹೋಲಿಕೆಯನ್ನು ಹೊಂದಿದೆ. ಇದರೊಂದಿಗೆ ಎನ್‌ಸೆಫಲೈಟಿಸ್ (ಮಿದುಳಿನ ಉರಿಯೂತ) ಲಕ್ಷಣಗಳೂ ಕಾಣಿಸಿಕೊಳ್ಳುತ್ತವೆ.