ಪಹಲ್ಗಾಮ್ ದಾಳಿ: ಉಗ್ರರ ಸುಳಿವು ನೀಡಿದವರಿಗೆ 20 ಲಕ್ಷ ರೂ. ಬಹುಮಾನ ಘೋಷಿಸಿದ ಪೊಲೀಸರು

PC: NDTV
ಶ್ರೀನಗರ: ಮಂಗಳವಾರ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಭೀಕರ ದಾಳಿ ನಡೆಸಿ ಪರಾರಿಯಾಗಿರುವ ಉಗ್ರರ ಸುಳಿವು ನೀಡಿದವರಿಗೆ 20 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು ಎಂದು ಅನಂತನಾಗ್ ಜಿಲ್ಲಾ ಪೊಲೀಸರು ಘೋಷಿಸಿದ್ದಾರೆ.
ಈ ಕುರಿತು ಸಾರ್ವಜನಿಕ ಪ್ರಕಟಣೆ ಬಿಡುಗಡೆ ಮಾಡಿರುವ ಕಾಶ್ಮೀರ ವಲಯದ ಅನಂತನಾಗ್ ಜಿಲ್ಲಾ ಪೊಲೀಸರು, “ದಾಳಿಯ ಬಗ್ಗೆ ಯಾವುದೇ ಒಂದು ಸಣ್ಣ ನಿಖರ ಸುಳಿವು ನೀಡಿದವರಿಗೂ 20 ಲಕ್ಷ ರೂ. ಬಹುಮಾನ ನೀಡಲಾಗುವುದು. ಈ ಕುರಿತು ಸುಳಿವು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು” ಎಂದು ಭರವಸೆ ನೀಡಿದ್ದಾರೆ ಎಂದು ANI ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಂಗಳವಾರ ಪಹಲ್ಗಾಮ್ ಪಟ್ಟಣದ ಬಳಿಯಿರುವ ಬೈಸರಣ್ ಹುಲ್ಲುಗಾವಲು ವೀಕ್ಷಿಸಲು ಬಂದಿದ್ದ ಪ್ರವಾಸಿಗರ ಮೇಲೆ ಭಯೋತ್ಪಾದಕರು ನಡೆಸಿದ್ದ ಗುಂಡಿನ ದಾಳಿಯಲ್ಲಿ 28 ಮಂದಿ ಮೃತಪಟ್ಟು, ಕನಿಷ್ಠ 20 ಜನರು ಗಾಯಗೊಂಡಿದ್ದರು.
ದಾಳಿಯಲ್ಲಿನ ಪಾತ್ರವನ್ನು ನಿರಾಕರಿಸಿದ ಪಾಕ್:
ಕಾಶ್ಮೀರದ ಪಹಲ್ಗಾಮ್ ನಲ್ಲಿ ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ತನ್ನ ಪಾತ್ರವಿದೆ ಎಂಬ ಆರೋಪಗಳನ್ನು ಬುಧವಾರ ಅಲ್ಲಗಳೆದಿರುವ ಪಾಕಿಸ್ತಾನ, “ಹಿಂದುತ್ವವಾದಿ ಶಕ್ತಿಗಳಿಂದ ಭಾರತದಲ್ಲಿನ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಗೆ ಪ್ರತಿಯಾಗಿ ಅಲ್ಲಿ ನಡೆಯುತ್ತಿರುವ ದಂಗೆಗಳ ಪೈಕಿ ಈ ದಾಳಿಯೂ ಒಂದಾಗಿದೆ” ಎಂದು ತಿರುಗೇಟು ನೀಡಿದೆ.
ಇದರೊಂದಿಗೆ, ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಭಾರತವು ಅಫ್ಘಾನಿಸ್ತಾನದ ನೆಲವನ್ನು ಬಳಸಿಕೊಳ್ಳುತ್ತಿದೆ ಎಂಬ ತನ್ನ ಆರೋಪವನ್ನು ಪಾಕಿಸ್ತಾನ ಪುನರುಚ್ಚರಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್, “ಭಾರತದ ಅನೇಕ ರಾಜ್ಯಗಳಲ್ಲಿ ಹತ್ತು ಹಲವು ದಂಗೆಗಳು ನಡೆಯುತ್ತಿವೆ. ನಾಗಾಲ್ಯಾಂಡ್ ನಿಂದ ಹಿಡಿದು ಕಾಶ್ಮೀರದವರೆಗೆ, ಛತ್ತೀಸ್ ಗಢ, ಮಣಿಪುರ ಹಾಗೂ ದಕ್ಷಿಣ ಭಾರತದ ರಾಜ್ಯಗಳಲ್ಲಿನ ಜನರು ಕೇಂದ್ರ ಸರಕಾರದ ವಿರುದ್ಧ ದಂಗೆ ಏಳುತ್ತಿದ್ದಾರೆ” ಎಂದು ಪ್ರತ್ಯಾರೋಪ ಮಾಡಿದ್ದಾರೆ.