ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ 20 ಸಾವಿರ ಜನರಿಂದ ಚುನಾವಣಾ ಆಯೋಗಕ್ಕೆ ಪತ್ರ
ಹೊಸದಿಲ್ಲಿ : ರಾಜಸ್ಥಾನದ ಬನ್ಸ್‌ವಾರದಲ್ಲಿ ರವಿವಾರ ಚುನವಣಾ ಸಭೆಯೊಂದರಲ್ಲಿ ಧರ್ಮಗಳ ವಿಭಜನೆ ಆಧಾರದಲ್ಲಿ ಮತಗಳನ್ನು ಕೇಳಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿ ಸುಮಾರು 20,000 ಮಂದಿ ಎರಡು ಪ್ರತ್ಯೇಕ ಪತ್ರಗಳನ್ನು ಚುನಾವಣಾ ಆಯೋಗಕ್ಕೆ ಬರೆದಿದ್ದಾರೆ.
‘‘ಪ್ರಧಾನಿಯ ಹೇಳಿಕೆಗಳು ಸಂವಿಧಾನವನ್ನು ರಕ್ಷಿಸುವ ಕೋಟ್ಯಾಂತರ ಭಾರತೀಯ ನಾಗರಿಕರ ಭಾವನೆಗಳನ್ನು ಕದಡಿವೆ. ಅವರ ಭಾಷಣವು ಅಪಾಯಕಾರಿ ಮತ್ತು ಭಾರತೀಯ ಮುಸ್ಲಿಮರ ಮೇಲಿನ ನೇರ ದಾಳಿಯಾಗಿದೆ’’ ಎಂದು ಚುನಾವಣಾ ಆಯೋಗಕ್ಕೆ ನೀಡಿದ ದೂರಿನಲ್ಲಿ ಜನರು ಹೇಳಿದ್ದಾರೆ.
ಹಿಂದೂ ಮಹಿಳೆಯರು ಹೊಂದಿರುವ ಚಿನ್ನದ ಕುರಿತ ಮಾಹಿತಿಯನ್ನು ಸಂಗ್ರಹಿಸಿ ಅದನ್ನು ಮುಸ್ಲಿಮರಿಗೆ ವಿತರಿಸಲಾಗುವುದು ಎಂಬುದಾಗಿ ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆ ಹೇಳುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಪ್ರಧಾನಿ ಹೇಳಿಕೆಯ ಬಗ್ಗೆ ಸಾರ್ವಜನಿಕ ಆಕ್ರೋಶ ಹೆಚ್ಚುತ್ತಿರುವ ಹೊರತಾಗಿಯೂ, ಈ ವಿಷಯದಲ್ಲಿ ಹೇಳಿಕೆ ನೀಡಲು ಚುನಾವಣಾ ಆಯೋಗ ನಿರಾಕರಿಸಿದೆ ಎಂದು ಅವರು ಹೇಳಿದ್ದಾರೆ.
ಈ ನಡುವೆ, ಮೂವರು ಸದಸ್ಯರ ಕಾಂಗ್ರೆಸ್ ನಿಯೋಗವೊಂದು ಸೋಮವಾರ ಚುನಾವಣಾ ಅಧಿಕಾರಿಗಳನ್ನು ಭೇಟಿಯಾಗಿ, ಕಾಂಗ್ರೆಸ್‌ಗೆ ಮತ ನೀಡದಂತೆ ಜನರನ್ನು ಒತ್ತಾಯಿಸಲು ಧರ್ಮವನ್ನು ಬಳಸಿರುವುದಕ್ಕಾಗಿ ಮತ್ತು ತಪ್ಪು ಮಾಹಿತಿಗಳನ್ನು ನೀಡಿರುವುದಕ್ಕಾಗಿ ಪ್ರಧಾನಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದೆ.
ಪ್ರಧಾನಿ ಮುಸ್ಲಿಮ್ ಸಮುದಾಯವನ್ನು ‘‘ನುಸುಳುಕೋರರು’’ ಎಂಬುದಾಗಿ ಬಣ್ಣಿಸಿದ್ದಾರೆ ಮತ್ತು ‘ಮಂಗಳಸೂತ್ರ’ದ ಹೇಳಿಕೆಯ ಮೂಲಕ ಹಿಂದೂ ಧರ್ಮವನ್ನು ಉಲ್ಲೇಖಿಸಿದ್ದಾರೆ ಎಂದು ನಿಯೋಗದ ನೇತೃತ್ವವನ್ನು ವಹಿಸಿದ್ದ ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಘ್ವಿ ಹೇಳಿದರು. ‘‘ಪ್ರಧಾನಿ ಮೋದಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಮತ್ತು ಸಂವಿಧಾನದ ಮೇಲೆ ದಾಳಿ ನಡೆಸಿದ್ದಾರೆ. ಈಗ ಚುನಾವಣಾ ಆಯೋಗದ ಸತ್ವ ಪರೀಕ್ಷೆ ನಡೆಯುತ್ತಿದೆ’’ ಎಂದು ಅವರು ನುಡಿದರು.