ಗುಲ್ಫಿಷಾ ಫಾತಿಮಾ ತಿಹಾರ್ ಜೈಲು ಸೇರಿ ಐದು ವರ್ಷ!

Update: 2025-04-10 20:46 IST
Gulfisha Fatima

ಗುಲ್ಫಿಷಾ ಫಾತಿಮಾ | Gulfisha Fatima , Photo: File Pic

  • whatsapp icon

ಆಕೆ ಉನ್ನತ ವಿದ್ಯಾಭ್ಯಾಸ ಪಡೆದು ಆರಾಮವಾಗಿ ಭಾರತದಲ್ಲೋ ವಿದೇಶದಲ್ಲೋ ನೆಲೆಸಬಹುದಿತ್ತು. ಆದರೆ ಆಕೆ ದೇಶದ ಸಂವಿಧಾನ ಹೇಳಿದ ಮೌಲ್ಯಗಳಿಗಾಗಿ ಬೀದಿಗಿಳಿದಳು. ಈ ದೇಶದ ದುರ್ಬಲರ ಪರವಾಗಿ ಹೋರಾಡುವುದು ನನ್ನ ಕರ್ತವ್ಯ ಎಂದು ಹೋರಾಟಕ್ಕೆ ಇಳಿದಳು. ಆದರೆ ಈ ದೇಶದ ಸರಕಾರ ಆಕೆಗೆ ಕೊಟ್ಟಿದ್ದು ಐದು ವರ್ಷ ಜೈಲಿನಲ್ಲಿ ಕೊಳೆಯುವ ಅವಕಾಶ.

ಗುಲ್ಫಿಷಾ ಫಾತಿಮಾ ತಿಹಾರ್ ಜೈಲು ಸೇರಿ ಐದು ವರ್ಷಗಳು ಪೂರ್ಣವಾಗಿವೆ. 2025ರ ಏಪ್ರಿಲ್ 9ರಂದು, ಅವರು ಬಂಧನದಲ್ಲಿ ಅರ್ಧ ದಶಕ ಪೂರೈಸಿದರು. ಅವರನ್ನು ಬಂಧಿಸಿದಾಗ ಅವರ ವಯಸ್ಸು ಕೇವಲ 26. ಉನ್ನತ ಶಿಕ್ಷಣ ಪಡೆದು ತಮ್ಮ ಕನಸುಗಳನ್ನು ನನಸಾಗಿಸುವ ವಯಸ್ಸು ಅದು. ಪ್ರಜಾಸತ್ತಾತ್ಮಕ ತತ್ವಗಳ ಮೇಲೆ ನಂಬಿಕೆ ಇಟ್ಟಿದ್ದ ಯುವತಿ ಗುಲ್ಫಿಷ. ಸಂವಿಧಾನ ಖಾತರಿಪಡಿಸುವ ಹಕ್ಕುಗಳ ಮೇಲೆ ಅವರಿಗೆ ದೃಢವಾದ ನಂಬಿಕೆ ಇತ್ತು. ಇಂದು ಗುಲ್ಫಿಷಾ ಅವರ ವಯಸ್ಸು 31 ವರ್ಷ.

ತಮ್ಮ ಯೌವನದ ಅಮೂಲ್ಯ ಐದು ವರ್ಷಗಳ ಸಮಯವನ್ನು ನ್ಯಾಯವಿಲ್ಲದೆ, ವಿಚಾರಣೆಯಿಲ್ಲದೆ, ಸರಕಾರದ ದಮನಕಾರಿ ಕ್ರಮಗಳಿಂದ ಗುಲ್ಫಿಷಾ ಕಳೆದುಕೊಂಡಿದ್ದಾರೆ. ಜೈಲಿನಲ್ಲಿ ಕಳೆದ ವರ್ಷಗಳನ್ನು ಗುಲ್ಫಿಷಾ ತಮ್ಮ ಉನ್ನತ ಶಿಕ್ಷಣಕ್ಕೆ, ಜೀವನ ಕಟ್ಟಿಕೊಳ್ಳಲು, ಕುಟುಂಬದೊಂದಿಗಿನ ಹೊಣೆಗಾರಿಕೆಗಳನ್ನು ನಿಭಾಯಿಸಲು ಅಥವಾ ಸ್ವತಂತ್ರವಾಗಿ ಬದುಕಲು ಬಳಸಬಹುದಾಗಿತ್ತು. ಆದರೆ ಈ ವರ್ಷಗಳನ್ನು ಸರಕಾರ ಅವರಿಂದ ಕಸಿದುಕೊಂಡಿತು.

ಆಕೆಯ ವಿರುದ್ಧ ನಂಬಬಲ್ಲಂತಹ ಒಂದೇ ಒಂದು ಪುರಾವೆಯಿಲ್ಲದೇ ಐದು ವರ್ಷಗಳು ಕಳೆದಿವೆ. ಆದರೆ ಆಕೆ ಇನ್ನೂ ಜೈಲಿನಲ್ಲೇ ಇದ್ದಾರೆ. ನಿಜವಾದ ಅರ್ಥದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಯೇ ನಡೆದಿಲ್ಲ. ಆಕೆಯ ವಿರುದ್ಧ ಇರೋದು ಕೇವಲ ಗುಪ್ತ ಸಾಕ್ಷಿಗಳ ಹೇಳಿಕೆಗಳು, ಸ್ಪಷ್ಟವಿಲ್ಲದ ಆರೋಪಗಳು, ಹಾಗೂ ಅನಿರ್ದಿಷ್ಟ ಕಾಲದವರೆಗೆ ಬಂಧಿಸಬಹುದಾದ ಕ್ರೂರ ಕಾನೂನು ಮಾತ್ರ.

ಗುಲ್ಫಿಷಾ ಫಾತಿಮಾ ಕೇವಲ ಬಂಧಿತ ವ್ಯಕ್ತಿಯಲ್ಲ. ಅವರು ಪ್ರಜಾಪ್ರಭುತ್ವದಲ್ಲಿ ಸತ್ಯ ಹೇಳುವುದಕ್ಕೆ ಪಾವತಿಸಬೇಕಾದ ಬೆಲೆಯ ಸಂಕೇತ. ಅವರ ಮೇಲೆ ಆಗಿರುವ ತೀವ್ರ ಶೋಷಣೆಯ ಕುರಿತು ಇರುವ ಗಾಢ ಮೌನವು ನಮ್ಮ ಎಲ್ಲರ ಪಾಲಿಗೆ ನಾಚಿಕೆಗೇಡಿನದಾಗಿದೆ.

ಗುಲ್ಫಿಷಾ ಬಂಧನ ಒಬ್ಬ ವ್ಯಕ್ತಿಯ ಬಂಧನದ ಕತೆ ಮಾತ್ರವಲ್ಲ. ಇದು ನಾವು ಎಂತಹ ಪ್ರಜಾಪ್ರಭುತ್ವವಾಗಿದ್ದೇವೆ ಎಂಬುದರ ಸಂಕೇತ. ಇಲ್ಲಿ ಭಿನ್ನಮತವನ್ನು ದೇಶದ್ರೋಹದಂತೆ ನೋಡಲಾಗುತ್ತದೆ. ಪ್ರತಿಭಟನೆಯನ್ನು ಅಪರಾಧದಂತೆ ನೋಡಲಾಗುತ್ತದೆ. ನಾವು ಮುಸ್ಲಿಂ ಮಹಿಳೆಯರ ಪರ ಎನ್ನುವ ಸರಕಾರ ನ್ಯಾಯದ ಪರವಾಗಿ ನಿಂತಿದ್ದಕ್ಕಾಗಿ, ಧೈರ್ಯದಿಂದ ಮಾತನಾಡಿದ್ದಕಾಗಿ ಮುಸ್ಲಿಮ್ ಯುವತಿಯೊಬ್ಬಳನ್ನು ಐದು ವರ್ಷಗಳಿಂದ ಬಂಧಿಸಿಟ್ಟಿದೆ. ತಮ್ಮನ್ನು ಮಹಿಳಾ ಹಕ್ಕು ಹೋರಾಟಗಾರರೆಂದು ಕರೆಸಿಕೊಳ್ಳುವವರು ಈಗ ಎಲ್ಲಿ ಕಾಣೆಯಾಗಿದ್ದಾರೆ ಎಂಬುದು ಅತೀ ದೊಡ್ಡ ಪ್ರಶ್ನೆ ಎಂದು ಕೇಳಿದ್ದಾರೆ ವಿಡಂಬನಕಾರ್ತಿ ಡಾ ಮಾದ್ರಿ ಮೆಡುಸಾ.

ಗುಲ್ಫಿಷಾ ಫಾತಿಮಾ ಸಿಎಎ ವಿರೋಧಿ ಹೋರಾಟದ ಅನೇಕ ಮುಖಗಳಲ್ಲಿ ಒಬ್ಬರು. ವಿದ್ಯಾರ್ಥಿಗಳು, ಮಹಿಳೆಯರು ಮತ್ತು ಸಾಮಾನ್ಯ ನಾಗರಿಕರು ಪೌರತ್ವ ತಿದ್ದುಪಡಿ ಕಾಯ್ದೆ (CAA) ವಿರೋಧಿಸಿದಾಗ ಅವರೂ ವಿರೋಧಿಸಿದರು. ಧರ್ಮಾಧಾರಿತವಾಗಿ ಪೌರತ್ವ ನೀಡಬಾರದು ಎಂಬ ಬೇಡಿಕೆ ಅವರದ್ದಾಗಿತ್ತು.

ಅವರು CAA ವಿರೋಧಿ ಹೋರಾಟದ ವೇಳೆ ಬೀದಿಗಳಲ್ಲಿ ನಿಂತಾಗ, ಅವರು ಕೇವಲ ತಮ್ಮ ಧರ್ಮಕ್ಕಾಗಿಯಲ್ಲ, ಎಲ್ಲರ ಪರವಾಗಿ ನಿಂತಿದ್ದರು. ಈ ದೇಶದ ಸಂವಿಧಾನದ ಪರವಾಗಿ ನಿಂತಿದ್ದರು. ಹಿಂದೂ, ಮುಸ್ಲಿಂ, ದಲಿತ, ಆದಿವಾಸಿ, ಪುರುಷ, ಮಹಿಳೆ ಎಲ್ಲರ ಪರವಾಗಿ ನಿಂತಿದ್ದರು. ವಿಭಜನೆಯ ಕಾನೂನುಗಳ ಅಪಾಯ ಎಲ್ಲರಿಗೂ ಇದೆ ಎಂಬ ವಾದ ಅವರದ್ದಾಗಿತ್ತು. ಅದಕ್ಕಾಗಿ ಎಲ್ಲರ ಪರವಾಗಿ ಅವರು ನಿಂತಿದ್ದರು.

ಅವರು ಶಾಂತಿಯುತ ಪ್ರತಿಭಟನೆಗಳಲ್ಲಿ ಪಾಲ್ಗೊಂಡು ಜನರನ್ನು ಜಾಗೃತಗೊಳಿಸಿದ್ದರು, ಭಾಷಣ ಮಾಡುತ್ತಿದ್ದರು, ಧೈರ್ಯದಿಂದ ಸತ್ಯ ಹೇಳುತ್ತಿದ್ದರು. ಕೇವಲ ಇಷ್ಟಕ್ಕೆ ಅವರನ್ನು ಶಿಕ್ಷಿಸಲಾಗಿದೆ. ಜಾಮೀನಿಲ್ಲದೆ, ನ್ಯಾಯವಿಲ್ಲದೆ ವರ್ಷಗಳ ಕಾಲ ಬಂಧನದಲ್ಲಿಡಬಹುದಾದ ಯುಎಪಿಎ ಕಾಯ್ದೆ ಅಡಿಯಲ್ಲಿ ಗುಲ್ಫಿಷಾ ಅವರನ್ನು ಬಂಧಿಸಿಡಲಾಗಿದೆ. ಈ ಕಾನೂನಿನಡಿಯಲ್ಲಿ ವಿಚಾರಣೆಯೇ ದೊಡ್ಡ ಶಿಕ್ಷೆಯಾಗಿ ಮಾರ್ಪಟ್ಟಿದೆ.

2020ರ ಈಶಾನ್ಯ ದಿಲ್ಲಿ ಗಲಭೆಯ ಹೆಸರಲ್ಲಿ ಗುಲ್ಫಿಷಾ ಜೈಲಿನಲ್ಲಿದ್ದಾರೆ. ಕ್ಯಾಮರಾ ಮುಂದೆ, ಪೋಲೀಸರ ಪಕ್ಕದಲ್ಲಿ ನಿಂತು ದ್ವೇಷ ಭಾಷಣ ಮಾಡಿದವರು, ನೇರವಾಗಿ ಹಿಂಸೆಗೆ ಕರೆಕೊಟ್ಟವರು ಇಂದು ದಿಲ್ಲಿಯ ಕಾನೂನು ಮಂತ್ರಿ.

ಹತ್ಯಾಕಾಂಡದಲ್ಲಿ ಭಾಗವಹಿಸಿದವರು ರಾಜಾರೋಷವಾಗಿ ಓಡಾಡಿಕೊಂಡಿರುವ ದಿಲ್ಲಿಯಲ್ಲಿ ಗುಲ್ಫಿಷ ಫಾತಿಮಾ, ಉಮರ್ ಖಾಲಿದ್ ರಂತಹ ಪ್ರಜಾಪ್ರಭುತ್ವವಾದಿ, ಜಾತ್ಯತೀತ ಆಶಯಗಳ ಯುವ ನಾಯಕರು ಜೈಲಿನಲ್ಲಿದ್ದಾರೆ.

ಗುಲ್ಫಿಷಾ ಅವರ ತಪ್ಪಾದರೂ ಏನು? ಒಂದು ಪ್ರತಿಭಟನೆ ಆಯೋಜಿಸಿದ್ದೇ? ಸಾರ್ವಜನಿಕ ವೇದಿಕೆಯಲ್ಲಿ ಮಾತನಾಡಿದ್ದೇ? ಸಂವಿಧಾನಾತ್ಮಕ ಹಕ್ಕುಗಳನ್ನು ಕೇಳಿದ್ದೇ? ನ್ಯಾಯ ವಿಳಂಬವಾದರೆ ಅದು ನ್ಯಾಯವಲ್ಲ ಎಂದು ಹೇಳಲಾಗುತ್ತದೆ. ಇಲ್ಲಂತೂ ನ್ಯಾಯ ಕಾಣೆಯಾಗಿಬಿಟ್ಟಿದೆ. ನ್ಯಾಯಾಲಯಗಳು ನ್ಯಾಯಯುತ, ತ್ವರಿತ ವಿಚಾರಣೆಯನ್ನು ಒದಗಿಸದೆ, ಯುಎಪಿಎ ಕಾಯ್ದೆಯ ದುರಪಯೋಗವನ್ನು ಪ್ರಶ್ನಿಸದೆ ತಮ್ಮನ್ನು ಹೇಗೆ ನ್ಯಾಯದ ಮನೆ ಎಂದು ಕರೆಯಬಹುದು? ಜಾಮೀನಿಲ್ಲದೆ, ವಿಚಾರಣೆಯಿಲ್ಲದೆ, ನ್ಯಾಯವಿಲ್ಲದೆ ಐದು ವರ್ಷ ಕಳೆದು ಹೋಗಿವೆ.

ಒಬ್ಬ ವಿದ್ಯಾರ್ಥಿನಿ, ಒಬ್ಬ ಯುವತಿ, ಒಬ್ಬ ಸಾಮಾಜಿಕ ಹೋರಾಟಗಾರ್ತಿ ಈ ದೇಶದ ಪಾಲಿಗೆ ಅಪಾಯಕಾರಿ ಆಗೋದು ಹೇಗೆ? ಯುಎಪಿಎ ಅಂತಹ ಘೋರ ಕಾಯ್ದೆಯಡಿ ಐದು ವರ್ಷ ಜೈಲಿನಲ್ಲಿ ಕಳೆಯುವ ಯಾವ ಅಪರಾಧವನ್ನು ಆಕೆ ಮಾಡಿದ್ದಾಳೆ? "bail is the rule, jail is the exception" ಎಂದು ಹೇಳುವ ನಮ್ಮ ನ್ಯಾಯ ವ್ಯವಸ್ಥೆ ಒಬ್ಬ ಯುವತಿಯನ್ನು, ಒಬ್ಬ ಯುವ ಆಕ್ಟಿವಿಸ್ಟ್ ಅನ್ನು ಹೀಗೆ ನಡೆಸಿಕೊಳ್ಳೋದಾ?

ಅರ್ನಬ್ ಗೋಸ್ವಾಮಿ ಒಂದು ವಾರ ಜೈಲಿನಲ್ಲಿ ಕಳೆದಿದ್ದಕ್ಕೆ ರಜಾದಿನವಾದ ಶನಿವಾರ ವಿಚಾರಣೆ ನಡೆಸಿ ವ್ಯಕ್ತಿ ಸ್ವಾತಂತ್ರ್ಯ ಎಷ್ಟು ಮುಖ್ಯ ಎಂದು ಹೇಳಿ ಜಾಮೀನು ಕೊಡುವ ಸುಪ್ರೀಂ ಕೋರ್ಟ್ ಗುಲ್ಫಿಷಾ ಫಾತಿಮಾಳನ್ನು ಏನೆಂದು ನೋಡುತ್ತದೆ? ಆಕೆ ಅಪಾಯಕಾರಿ ಕ್ರಿಮಿನಲ್ ಯುವತಿಯೇ? ಇನ್ನಾದರೂ ನಮ್ಮ ನ್ಯಾಯ ವ್ಯವಸ್ಥೆ ಎಚ್ಛೆತ್ತುಕೊಳ್ಳುವುದೇ?

ಗುಲ್ಫಿಷಾ ಫಾತಿಮಾರನ್ನು ನಾವು ಮರೆಯಬಬಾರದು. ಈ ದೇಶಕ್ಕಾಗಿ, ಇಲ್ಲಿನ ಪ್ರತಿಯೊಬ್ಬ ದುರ್ಬಲ ಸ್ತ್ರೀ ಪುರುಷನಿಗಾಗಿ, ಪ್ರತಿಯೊಬ್ಬ ದಲಿತ ದಮನಿತನಿಗಾಗಿ ಆಕೆ ತನ್ನ ಜೀವನವನ್ನೇ ಪಣಕ್ಕಿಟ್ಟು ಬೀದಿಗಿಳಿದಳು. ಅದರ ಪರಿಣಾಮವಾಗಿ ಆಕೆ ಇವತ್ತು ಜೈಲಿನಲ್ಲಿ ಕೊಳೆಯುತ್ತಿದ್ದಾಳೆ. ಇದು ಕೊಳೆತುಹೋಗಿರುವ ನಮ್ಮ ವ್ಯವಸ್ಥೆಯ ಪ್ರತೀಕವಾಗಿದೆ.

ವಕ್ಫ್ ಬಿಲ್ ಪಾಸಾಗಿದ್ದಕ್ಕೆ ಮುಸ್ಲಿಂ ಮಹಿಳೆಯರು ಸಂಭ್ರಮ ಪಡುತ್ತಿದ್ದಾರೆ ಎಂದು ಒಂದಿಬ್ಬರನ್ನು ತಂದು ನಿಲ್ಲಿಸುವ ಬಿಜೆಪಿ ಇವತ್ತು ಗುಲ್ಫಿಷ ಎಂಬ ಯುವತಿ ಯಾಕೆ ಹೀಗೆ ಅನ್ಯಾಯವಾಗಿ ಜೈಲಿನಲ್ಲಿ ಐದು ವರ್ಷ ಕಳೆಯಬೇಕಾಗಿದೆ ಎಂದು ಈ ದೇಶಕ್ಕೆ ಹೇಳಬೇಕು.

ನಮ್ಮ ದೇಶದಲ್ಲಿ, ನಮ್ಮ ಸರಕಾರದಲ್ಲಿ ಧರ್ಮದ ಆಧಾರದಲ್ಲಿ ತಾರತಮ್ಯ ಅನ್ನೋದೇ ಇಲ್ಲ ಎಂದು ಅಮೆರಿಕದಲ್ಲಿ ಭಾಷಣ ಮಾಡುವ ಮೋದೀಜಿ ಗುಲ್ಫಿಶಾ ಫಾತಿಮಾ ಮಾಡಿರುವ ತಪ್ಪೇನು? ಆಕೆಗೆ ಯಾಕೆ ಐದು ವರ್ಷಗಳಿಂದ ಜಾಮೀನು ಸಿಕ್ಕಿಲ್ಲ ಎಂದು ಹೇಳಬೇಕಾಗಿದೆ.

ಗುಲ್ಫಿಷಾ ಜೈಲಿನಲ್ಲಿ ಕಳೆಯುತ್ತಿರುವ ಪ್ರತಿಯೊಂದು ನಿಮಿಷವೂ ನಮ್ಮ ಪ್ರಜಾಪ್ರಭುತ್ವಕ್ಕಾಗುತ್ತಿರುವ ನಷ್ಟವಾಗಿದೆ. ನಮ್ಮ ಸಂವಿಧಾನದ ಪ್ರತಿಯೊಂದು ಶ್ರೇಷ್ಠ ಮೌಲ್ಯಕ್ಕಾಗುತ್ತಿರುವ ದೊಡ್ಡ ನಷ್ಟವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News