ರಾಜಸ್ಥಾನದಲ್ಲಿ ಜವಾನ ಹುದ್ದೆಗೆ ಪಿಎಚ್ಡಿ, ಎಂಬಿಎ ಹಾಗೂ ಯುಪಿಎಸ್ಸಿ ಅಭ್ಯರ್ಥಿಗಳಿಂದಲೂ ಅರ್ಜಿ!

ಸಾಂದರ್ಭಿಕ ಚಿತ್ರ | Photo: newsclick.in
ಜೈಪುರ: ರಾಜಸ್ಥಾನದಲ್ಲಿ 53,749 ಜವಾನ ಹುದ್ದೆಗಳ ನೇಮಕಾತಿಗೆ, ಒಟ್ಟು 24.76 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಈ ಪೈಕಿ ಪಿಎಚ್ಡಿ, ಎಂಬಿಎ ಹಾಗೂ ಕಾನೂನು ಪದವೀಧರರಲ್ಲದೆ, ನಾಗರಿಕ ಸೇವಾ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಅಭ್ಯರ್ಥಿಗಳೂ ಸೇರಿದ್ದಾರೆ ಎಂದು indiatoday.in ವರದಿ ಮಾಡಿದೆ.
ಇದರರ್ಥ, ಪ್ರತಿ ಒಂದು ಜವಾನ ಹುದ್ದೆಗೆ 46 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಈ ಅಭ್ಯರ್ಥಿಗಳ ಪೈಕಿ ಹಲವು ಅಭ್ಯರ್ಥಿಗಳು ಭಾರಿ ಪ್ರತಿಭಾವಂತರಾಗಿದ್ದು, ಇದೇ ವೇಳೆ ಅವರು ಆಡಳಿತಾತ್ಮಕ ಸೇವಾ ಪರೀಕ್ಷೆಗಳಿಗೂ ಸಿದ್ಧತೆ ನಡೆಸುತ್ತಿದ್ದಾರೆ.
ನಾವು ಈ ಹುದ್ದೆಗೆ ಯಾಕೆ ಅರ್ಜಿ ಸಲ್ಲಿಸಿದ್ದೇವೆ ಎಂಬ ಕುರಿತು ಜೈಪುರದ ಗೋಪಾಲ್ ಪುರ್ ಪ್ರದೇಶದಲ್ಲಿನ ತರಬೇತಿ ಕೇಂದ್ರಗಳಲ್ಲಿ ವ್ಯಾಸಂಗ ಮಾಡುತ್ತಿರುವ ಹಲವು ಅಭ್ಯರ್ಥಿಗಳು ಕಾರಣವನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಂಎ, ಬಿಎಡ್ ಹಾಗೂ ಐಟಿ ಕೋರ್ಸ್ ಗಳನ್ನು ಪೂರೈಸಿರುವ ಕಮಲ್ ಕಿಶೋರ್ ಎಂಬ ಅಭ್ಯರ್ಥಿಯೊಬ್ಬರು, “ನಾನು 2018ರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುತ್ತಿದ್ದರೂ, ನಾನದರಲ್ಲಿ ಯಶಸ್ವಿಯಾಗಿಲ್ಲ. ಒಂದು ವೇಳೆ ಏನೂ ಸಾಧ್ಯ್ವಾಗದಿದ್ದರೆ, ನಿರುದ್ಯೋಗಿಯಾಗಿರುವುದಕ್ಕಿಂತ, ಜವಾನ ಹುದ್ದೆಯಲ್ಲಿ ಕೆಲಸ ಮಾಡುವುದೇ ಲೇಸಾಗಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.
ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವೀಧರೆಯಾಗಿರುವ ತನುಜಾ ಯಾದವ್ ಹಾಗೂ ಎಂಎ ಹಾಗೂ ಬಿಎಡ್ ಪದವಿಗಳನ್ನು ಪೂರೈಸಿರುವ ಸುಮಿತ್ರಾ ಚೌಧರಿ ಎಂಬುವವರೂ ಕೂಡಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಇಬ್ಬರೂ ರಾಜಸ್ಥಾನ ಆಡಳಿತಾತ್ಮಕ ಸೇವೆಗಳ ಪರೀಕ್ಷೆಗಾಗಿ ಸಿದ್ಧತೆಗಳನ್ನು ನಡೆಸುತ್ತಿದ್ದರೂ, ಸೇವಾ ಭದ್ರತೆ ಹೊಂದಿರುವ ಸರಕಾರಿ ನೌಕರಿಯ ಅವಕಾಶದಿಂದ ವಂಚಿತರಾಗಲು ಬಯಸುತ್ತಿಲ್ಲ. ಅದು ಒಂದು ವೇಳೆ ಸರಕಾರಿ ಕಚೇರಿಯಲ್ಲಿ ನೀರು ಪೂರೈಸುವ ಕೆಲಸವಾಗಿದ್ದರೂ ಅವರಿಗೆ ಉದ್ಯೋಗ ಮುಖ್ಯ.
ಭಾರಿ ಪ್ರಮಾಣದ ಅರ್ಜಿಗಳ ಸಂಖ್ಯೆಯು ಅರ್ಜಿ ಸಲ್ಲಿಕೆ ವ್ಯವಸ್ಥೆಯನ್ನೇ ಅಲುಗಾಡಿಸಿದೆ. ಅಂತರ್ಜಾಲ ತಾಣವು ಪದೇ ಪದೇ ಸ್ಥಗಿತಗೊಂಡಿದ್ದರಿಂದ, ಹಲವು ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ತಾಂತ್ರಿಕ ಸಮಸ್ಯೆಗಳಿಗೆ ಗುರಿಯಾಗಿದ್ದಾರೆ. ಹೀಗಾಗಿ, ಕಳೆದ ಐದು ಗಂಟೆಗಳ ಅವಧಿಯಲ್ಲಿ ಒಟ್ಟು 1.11 ಲಕ್ಷ ಅರ್ಜಿಗಳು ಮಾತ್ರ ಸಲ್ಲಿಕೆಯಾಗಿದ್ದು, ಇದರಿಂದಾಗಿ, ಪ್ರತಿ ಆರು ಸೆಕೆಂಡ್ ಗೆ ಅಂದಾಜು ಒಂದು ಅರ್ಜಿ ಮಾತ್ರ ಸಲ್ಲಿಕೆಯಾದಂತಾಗಿದೆ.
ದಾಖಲೆಗಳನ್ನು ಹೊಂಚಿಕೊಳ್ಳುವಲ್ಲಿ ವಿಳಂಬವಾಗಿದ್ದರಿಂದ, ರಾಜಸ್ಥಾನ ವಿಶ್ವವಿದ್ಯಾಲಯದಲ್ಲಿ ಖಾಸಗಿ ಉದ್ಯೋಗಿಯಾಗಿರುವ ಕಿರಣ್ ರಂತಹ ಅರ್ಜಿದಾರರು ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಅರ್ಜಿಯ ಗವಾಕ್ಷಿಯನ್ನು ಮತ್ತೆ ತೆರೆಯಬೇಕು ಎಂದು ಆಕೆ ಹಾಗೂ ಇನ್ನಿತರ ಉದ್ಯೋಗಾಕಾಂಕ್ಷಿಗಳು ರಾಜಸ್ಥಾನ ಆಡಳಿತಾತ್ಮಕ ಸೇವೆಗಳ ಆಯೋಗಕ್ಕೆ ಮನವಿ ಮಾಡಿದ್ದಾರೆ.
ರಾಜಸ್ಥಾನದಲ್ಲಿ ನಿರುದ್ಯೋಗ ಸಮಸ್ಯೆ ಎಷ್ಟು ಕಳವಳಕಾರಿ ಪ್ರಮಾಣದಲ್ಲಿ ಏರಿಕೆಯಾಗಿದೆಯೆಂದರೆ, ಇದಕ್ಕೂ ಮುನ್ನ, 2,399 ಅರಣ್ಯ ರಕ್ಷಕರ ಹುದ್ದೆಗಳಿಗಾಗಿ ಹೊರಡಿಸಲಾಗಿದ್ದ ನೇಮಕಾತಿ ಅಧಿಸೂಚನೆಗೆ ಪ್ರತಿಯಾಗಿ, ಒಟ್ಟು 20 ಲಕ್ಷ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು.