251 ನೂತನ ಸಂಸದರ ವಿರುದ್ಧ ಕ್ರಿಮಿನಲ್ ಮೊಕದ್ದಮೆ

Update: 2024-06-06 15:58 GMT

PC : PTI 

ಹೊಸದಿಲ್ಲಿ: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವ 543 ಸಂಸದರ ಪೈಕಿ 251 (46 ಶೇಕಡ) ಸಂಸದರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ ಮತ್ತು ಆ ಪೈಕಿ 27 ಮಂದಿಯ ಅಪರಾಧಗಳು ಸಾಬೀತಾಗಿವೆ ಎಂದು ಚುನಾವಣಾ ಹಕ್ಕುಗಳ ಸಂಸ್ಥೆ ಅಸೋಸಿಯೇಶನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್)ನ ವಿಶ್ಲೇಷಣೆಯೊಂದು ತಿಳಿಸಿದೆ.

ಇದು ಸಂಸದರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿರುವ ಗರಿಷ್ಠ ಸಂಖ್ಯೆಯಾಗಿದೆ.

2019ರಲ್ಲಿ, ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ ಎಂದು 233 (43 ಶೇಕಡ) ಸಂಸದರು ಘೋಷಿಸಿದ್ದರು. ಈ ಸಂಖ್ಯೆಗಳು, 2014ರಲ್ಲಿ 185 (34 ಶೇಕಡ), 2009ರಲ್ಲಿ 162 (30 ಶೇಕಡ) ಮತ್ತು 2004ರಲ್ಲಿ 125 (23 ಶೇಕಡ) ಆಗಿದ್ದವು.

2009ರ ಬಳಿಕ, ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ಸಂಸದರ ಸಂಖ್ಯೆಯಲ್ಲಿ 55 ಶೇಕಡ ಏರಿಕೆಯಾಗಿದೆ ಎಂದು ವಿಶ್ಲೇಷಣೆ ತಿಳಿಸಿದೆ.

2024ರಲ್ಲಿ, 251 ವಿಜೇತ ಅಭ್ಯರ್ಥಿಗಳ ಪೈಕಿ 170 (31 ಶೇಕಡ) ಮಂದಿ ಅತ್ಯಾಚಾರ, ಕೊಲೆ, ಕೊಲೆಯತ್ನ, ಅಪಹರಣ ಮತ್ತು ಮಹಿಳೆಯರ ವಿರುದ್ಧ ಅಪರಾಧ ಮುಂತಾದ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿದ್ದಾರೆ.

ಇದು ಕೂಡ 2019ರ 159 (29 ಶೇಕಡ), 2014ರ 112 (21 ಶೇಕಡ) ಮತ್ತು 2009ರ 76 (14 ಶೇಕಡ)ಕ್ಕಿಂತ ಹೆಚ್ಚಾಗಿದೆ.

ಗಂಭಿರ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿರು ವ್ಯಕ್ತಿಗಳು ಸಂಸದರಾಗಿ ಆಯ್ಕೆಯಾಗುವ ಪ್ರಮಾಣವು 2009ರ ಬಳಿಕ 124 ಶೇಕಡದಷ್ಟು ಹೆಚ್ಚಾಗಿದೆ.

543 ನೂತನ ಸಂಸದರು ಕೋಟ್ಯಧೀಶರು

ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದಿರುವ ಸಂಸದರ ಪೈಕಿ ಹೆಚ್ಚಿನವರು ಕೋಟ್ಯಧೀಶರು ಎಂದು ಗುರುವಾರ ಬಿಡುಗಡೆಯಾಗಿರುವ ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತ್ತು ನ್ಯಾಶನಲ್ ಇಲೆಕ್ಷನ್ ವಾಚ್ನ ವರದಿಗಳು ತಿಳಿಸಿವೆ.

ಈ ವರದಿಗಳ ಪ್ರಕಾರ, 543 ಸಂಸದರ ಪೈಕಿ 504 (93 ಶೇಕಡ) ಸಂಸದರು ಕೋಟ್ಯಧೀಶರಾಗಿದ್ದಾರೆ.

ಹೆಚ್ಚಿನ ಸಂಖ್ಯೆಯ ಕೋಟ್ಯಧೀಶರು ಬಿಜೆಪಿಯಲ್ಲಿದ್ದಾರೆ. ಅದರ 240 ನೂತನ ಸಂಸದರ ಪೈಕಿ 227 ಮಂದಿ (95 ಶೇಕಡ) ಕೋಟ್ಯಧೀಶರಾಗಿದ್ದಾರೆ. ಅವರ ಸರಾಸರಿ ಘೋಷಿತ ಸಂಪತ್ತು 50.04 ಕೋಟಿ ರೂಪಾಯಿ.

99 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ನಲ್ಲಿ 93 ಶೇಕಡ ಕೋಟ್ಯಧೀಶರಿದ್ದಾರೆ. ಅವರ ಸರಾಸರಿ ಘೋಷಿತ ಸಂಪತ್ತು 22.93 ಕೋಟಿ ರೂಪಾಯಿ.

5ರಿಂದ 12ನೇ ತರಗತಿವರೆಗೆ ಕಲಿತ 105 ನೂತನ ಸಂಸದರು

ನೂತನ ಸಂಸತ್ ಗೆ ಆಯ್ಕೆಯಾಗಿರುವ 543 ಸಂಸದರ ಪೈಕಿ ಸುಮಾರು 105 ಮಂದಿ (19 ಶೇಕಡ) ತಮ್ಮ ವಿದ್ಯಾಭ್ಯಾಸ 5ನೇ ತರಗತಿಯಿಂದ 12ನೇ ತರಗತಿ ಎಂಬುದಾಗಿ ಘೋಷಿಸಿದ್ದಾರೆ. ಅದೇ ವೇಳೆ, 420 ಸಂಸದರು (77 ಶೇಕಡ) ತಾವು ಪದವಿ ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ ಹೊಂದಿದ್ದೇವೆ ಎಂದು ಘೋಷಿಸಿದ್ದಾರೆ ಎಂದು ಅಸೋಸಿಯೇಶನ್ ಆಫ್ ಡೆಮಾಕ್ರಟಿಕ ರಿಫಾರ್ಮ್ಸ್ (ಎಡಿಆರ್)ನ ವಿಶ್ಲೇಷಣಾ ವರದಿಯೊಂದು ತಿಳಿಸಿದೆ.

ಹದಿನೇಳು ಸಂಸದರು ಡಿಪ್ಲೋಮ ಪದವಿ ಹೊಂದಿದ್ದಾರೆ ಮತ್ತು ಒಬ್ಬ ಸಂಸದ ‘‘ಅಕ್ಷರಸ್ಥ’’ರಾಗಿದ್ದಾರೆ.

ತಮ್ಮನ್ನು ಅನಕ್ಷರಸ್ಥರು ಎಂಬುದಾಗಿ ಘೋಷಿಸಿಕೊಂಡಿದ್ದ ಎಲ್ಲಾ 121 ಅಭ್ಯರ್ಥಿಗಳು ಚುನಾವಣೆಯಲ್ಲಿ ಸೋತಿದ್ದಾರೆ.

ಐದನೇ ತರಗತಿವರೆಗೆ ಕಲಿತ ಇಬ್ಬರು ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆದ್ದಿದ್ದಾರೆ. ನಾಲ್ವರು ಸಂಸದರು ತಾವು 8ನೇ ತರಗತಿವರೆಗೆ ಓದಿರುವುದಾಗಿ ಹೇಳಿದ್ದಾರೆ. 10ನೇ ತರಗತಿವರೆಗೆ ಶಾಲೆಗೆ ಹೋಗಿರುವುದಾಗಿ 34 ಸಂಸದರು ಘೋಷಿಸಿದ್ದಾರೆ. 65 ಸಂಸದರು 12ನೇ ತರಗತಿವರೆಗೆ ಓದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News