ಒಡಿಶಾದ 35 ಕಾರ್ಮಿಕರು ಲಾವೋಸ್ ನಲ್ಲಿ ಸೆರೆಯಾಳು

Update: 2023-10-14 16:51 GMT

ಸಾಂದರ್ಭಿಕ ಚಿತ್ರ

ಭುವನೇಶ್ವರ: ಒಡಿಶಾದ 35 ಕಾರ್ಮಿಕರ ಗುಂಪೊಂದು ಲಾವೋಸ್ ನ ಕಂಪೆನಿಯೊಂದರಲ್ಲಿ ಸೆರೆಯಾಳಾಗಿದ್ದು, ತಮ್ಮನ್ನು ಮರಳಿ ಭಾರತಕ್ಕೆ ಕರೆಸಿಕೊಳ್ಳುವಂತೆ ಒಡಿಶಾ ಸರಕಾರವನ್ನು ವಿನಂತಿಸಿದ್ದಾರೆ.

ವೀಡಿಯೊ ತುಣಕೊಂದರಲ್ಲಿ ಕಾರ್ಮಿಕರು ತಮ್ಮನ್ನು ಮರಳಿ ಭಾರತಕ್ಕೆ ಕರೆಸಿಕೊಳ್ಳುವಂತೆ ಸರಕಾರವನ್ನು ಆಗ್ರಹಿಸಿದ್ದಾರೆ. ತಾವು ಕೆಲಸ ಮಾಡುತ್ತಿದ್ದ ಪ್ಲೈ ವುಡ್ ಕಂಪೆನಿ ಸುಮಾರು ಒಂದೂವರೆ ತಿಂಗಳ ಹಿಂದೆ ಕಾರ್ಯಾಚರಣೆ ನಿಲ್ಲಿಸಿದೆ. ಆದರೆ, ಕಂಪೆನಿ ತಮ್ಮ ವೇತನವನ್ನೂ ನೀಡುತ್ತಿಲ್ಲ, ಭಾರತಕ್ಕೆ ಮರಳಲೂ ಅವಕಾಶ ನೀಡುತ್ತಿಲ್ಲ ಎಂದಿದ್ದಾರೆ.

ಕಂಪೆನಿ ನಮ್ಮ ಪಾಸ್ ಪೋರ್ಟ್ ಅನ್ನು ಬಲವಂತವಾಗಿ ಕಿತ್ತುಕೊಂಡಿದೆ ಎಂದು ಕೇಂದ್ರಪಾರಾ ಜಿಲ್ಲೆಯ ರಾಜ್ಕಾನಿಕಾ ಬ್ಲಾಕ್ ನಿವಾಸಿಗಳಾದ ಈ ಕಾರ್ಮಿಕರು ಆರೋಪಿಸಿದ್ದಾರೆ.

ಇದು ರಾಜ್ಯ ಸರಕಾರದ ಗಮನಕ್ಕೆ ಬಂದ ಬಳಿಕ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಕಾರ್ಮಿಕರನ್ನು ಮರಳಿ ಭಾರತಕ್ಕೆ ಕರೆ ತರಲು ವ್ಯವಸ್ಥೆ ಮಾಡುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ರಾಜ್ಯ ಕಾರ್ಮಿಕ ಆಯುಕ್ತರು ಲಾವೋಸ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಮಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕಳುಹಿಸಿ ಕೊಡಲು ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ರಾಯಭಾರಿ ಕಚೇರಿ ಒಡಿಶಾ ಸರಕಾರಕ್ಕೆ ಭರವಸೆ ನೀಡಿದೆ ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಶಾಸಕರೊಂದಿಗೆ ಸಂಪರ್ಕ ಇರುವ ತಮ್ಮ ಗ್ರಾಮದ ಜನರಿಗೆ ಈ ಕಾರ್ಮಿಕರು ವೀಡಿಯೊ ತುಣುಕನ್ನು ಕಳುಹಿಸಿದ್ದರು. ಶಾಸಕರು ಇದನ್ನು ರಾಜ್ಯ ಸರಕಾರದ ಗಮನಕ್ಕೆ ತಂದಿದ್ದರು.

‘‘ನಮ್ಮಲ್ಲಿ ಹಣ ಅಥವಾ ತಿನ್ನಲು ಆಹಾರ ಇಲ್ಲ. ನಮಗೆ ಭಾರತಕ್ಕೆ ಹಿಂದಿರುಗಲು ಕೂಡ ಅನುಮತಿ ನೀಡುತ್ತಿಲ್ಲ’’ ಎಂದು ಲಾವೋಸ್ ನಲ್ಲಿ ಸೆರೆಯಾಳುಗಳಾಗಿರುವ ಕಾರ್ಮಿಕರಲ್ಲಿ ಓರ್ವರಾದ ಸರೋಜ್ ಪಾಲೈ ಅವರು ವೀಡಿಯೊದಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News