ಪಹಲ್ಗಾಮ್ ದಾಳಿಯ ಬಳಿಕ ರೈಲುಗಳ ಮೂಲಕ ಜಮ್ಮುಕಾಶ್ಮೀರವನ್ನು ತೊರೆದ 4,000 ಪ್ರವಾಸಿಗಳು

PC : newindianexpress.com
ಹೊಸದಿಲ್ಲಿ: ಪಹಲ್ಗಾಮ್ ನಲ್ಲಿ ಭಯೋತ್ಪಾದಕ ದಾಳಿಯ ನಂತರ ಭಯಭೀತರಾಗಿರುವ ಪ್ರವಾಸಿಗಳು ಸಾಧ್ಯವಾದಷ್ಟು ಶೀಘ್ರ ಜಮ್ಮುಕಾಶ್ಮೀರದಿಂದ ನಿರ್ಗಮಿಸಲು ಹಾತೊರೆಯುತ್ತಿದ್ದು, ವಿಮಾನಗಳ ಅಲಭ್ಯತೆಯಿಂದಾಗಿ ತಮ್ಮ ತವರುಗಳನ್ನು ಸೇರಿಕೊಳ್ಳಲು ರೈಲು ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕೇವಲ ಎರಡು ದಿನಗಳಲ್ಲಿ ಸುಮಾರು 4,000 ಪ್ರವಾಸಿಗಳು ರೈಲುಗಳ ಮೂಲಕ ರಾಜ್ಯದಿಂದ ನಿರ್ಗಮಿಸಿದ್ದಾರೆ.
ಪ್ರವಾಸಿಗಳ ಅನುಕೂಲಕ್ಕಾಗಿ ಎರಡು ವಿಶೇಷ ರೈಲುಗಳನ್ನು ಓಡಿಸಲಾಗಿದ್ದು, ಅವರಿಗೆ ಸ್ಥಳಾವಕಾಶ ಕಲ್ಪಿಸಲು ನಿಯಮಿತ ರೈಲುಗಳಲ್ಲಿ ಹೆಚ್ಚುವರಿ ಬೋಗಿಗಳನ್ನೂ ಅಳವಡಿಸಲಾಗಿದೆ. ಪ್ರಯಾಣಿಕರಿಗಾಗಿ ಕಾಶ್ಮೀರದ ರೈಲು ನಿಲ್ದಾಣಗಳಲ್ಲಿ ದಿನದ 24 ಗಂಟೆಗಳೂ ತೆರೆದಿರುವ ಆಹಾರ ಮಳಿಗೆಗಳನ್ನು ಆರಂಭಿಸಲಾಗಿದೆ ಎಂದು ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಹಿಮಾಂಶು ಎಸ್.ಉಪಾಧ್ಯಾಯ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಪ್ರಯಾಣಿಕರು ಬಸ್ ಗಳು ಮತ್ತು ಟ್ಯಾಕ್ಸಿಗಳ ಮೂಲಕ ಶ್ರೀವೈಷ್ಣೋದೇವಿ ಕತ್ರಾ ಅಥವಾ ಜಮ್ಮು ರೈಲು ನಿಲ್ದಾಣಗಳನ್ನು ತಲುಪುತ್ತಿದ್ದಾರೆ. ಎ.22 ಮತ್ತು ಎ.24ರಂದು ಕತ್ರಾದಿಂದ ಜಮ್ಮು ಮೂಲಕ ಹೊಸದಿಲ್ಲಿಗೆ ಎರಡು ವಿಶೇಷ ರೈಲುಗಳನ್ನು ಬಿಡಲಾಗಿದೆ. ಪ್ರತಿಯೊಂದೂ ರೈಲಿನಲ್ಲಿ ಕನಿಷ್ಠ 1,500 ಪ್ರಯಾಣಿಕರಿದ್ದರು. ಈ ರೈಲುಗಳು ಉಧಮಪುರ, ಜಮ್ಮು, ಪಠಾಣ್ ಕೋಟ್, ಜಲಂಧರ್, ಅಂಬಾಲಾ, ಕುರುಕ್ಷೇತ್ರ ಮತ್ತು ಪಾನಿಪತ್ ಗಳಲ್ಲಿ ನಿಲುಗಡೆಗಳನ್ನು ಹೊಂದಿದ್ದವು. ಇದರ ಜೊತೆಗೆ ಶಾಲಿಮಾರ್ ಮಾಲಿನಿ ಮತ್ತು ಕೋಲ್ಕತಾ ಎಕ್ಸ್‌ಪ್ರೆಸ್ ಸೇರಿದಂತೆ ರಾಜ್ಯದಿಂದ ನಿರ್ಗಮಿಸಿದ ಕೆಲವು ನಿಯಮಿತ ರೈಲುಗಳಿಗೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಲಾಗಿತ್ತು. ಶುಕ್ರವಾರದ ವೇಳೆಗೆ ಜನರ ದಟ್ಟಣೆ ಕಡಿಮೆಯಾಗಿದ್ದರಿಂದ ವಿಶೇಷ ರೈಲುಗಳನ್ನು ಓಡಿಸಿಲ್ಲ ಎಂದು ಅವರು ವಿವರಿಸಿದರು.
ರೈಲ್ವೆಯು ಪ್ರಯಾಣಿಕರಿಗೆ ಎಲ್ಲ ನೆರವು ಒದಗಿಸಲು ಪ್ರಯತ್ನಿಸುತ್ತಿದ್ದು, ರಾಜ್ಯಾದ್ಯಂತ ಎಲ್ಲ ನಿಲ್ದಾಣಗಳಲ್ಲಿ ಹೆಲ್ಪ್ ಡೆಸ್ಕ್‌ಗಳನ್ನು ಆರಂಭಿಸಲಾಗಿದೆ ಎಂದರು.