ಶೇ. 44ರಷ್ಟು ಹಾಲಿ ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳು: ವರದಿ

Update: 2024-03-29 18:17 GMT

Photo: iStock

ಹೊಸದಿಲ್ಲಿ: 17ನೇ ಲೋಕಸಭಾ ಸದಸ್ಯರಾಗಿರುವ 514 ಹಾಲಿ ಸಂಸದರ ಪೈಕಿ ಕನಿಷ್ಠ 225 ಮಂದಿ ತಾವು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದೇವೆ ಎಂಬ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ ಎಂದು ಎಡಿಆರ್ ಸಂಸ್ಥೆಯು ಶುಕ್ರವಾರ ಬಿಡುಗಡೆ ಮಾಡಿರುವ ತನ್ನ ವರದಿಯಲ್ಲಿ ಹೇಳಿದೆ. ಶೇ. 44ರಷ್ಟು ಹಾಲಿ ಸಂಸದರು ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

"2019ರ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದರ ಕ್ರಿಮಿನಲ್ ಹಿನ್ನೆಲೆ, ಆರ್ಥಿಕ, ಶೈಕ್ಷಣಿಕ, ಲಿಂಗ ಹಾಗೂ ಇನ್ನಿತರ ವಿವರಗಳ ವಿಶ್ಲೇಷಣೆ" ಎಂಬ ಈ ವರದಿಯಲ್ಲಿ 2019ರ ಲೋಕಸಭಾ ಚುನಾವಣೆ ಹಾಗೂ ಆನಂತರ ನಡೆದಿರುವ ಉಪ ಚುನಾವಣೆಗಳಲ್ಲಿ ಸ್ಪರ್ಧಿಸುವುದಕ್ಕೂ ಮುನ್ನ 514 ಮಂದಿ ಹಾಲಿ ಸಂಸದರು ತಮ್ಮ ಸ್ವಯಂ ಪ್ರಮಾಣ ಪತ್ರದಲ್ಲಿ ಮಾಡಿರುವ ಪ್ರಮಾಣವನ್ನು ಈ ವರದಿಯು ವಿಶ್ಲೇಷಿಸಿದೆ.

ಬಿಜೆಪಿಯ 294 ಹಾಲಿ ಸಂಸದರ ಪೈಕಿ 118 ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಇದು ಒಟ್ಟು ಬಿಜೆಪಿ ಸಂಸದರ ಪೈಕಿ ಶೇ. 40ರಷ್ಟಾಗಿದೆ. ಕಾಂಗ್ರೆಸ್ ಪಕ್ಷದ 46 ಸಂಸದರ ಪೈಕಿ 26 ಸಂಸದರ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು, ಇದು ಒಟ್ಟು ಕಾಂಗ್ರೆಸ್ ಸಂಸದರ ಪೈಕಿ ಶೇ. 57ರಷ್ಟಾಗಿದೆ. ಡಿಎಂಕೆಯ 24 ಹಾಲಿ ಸಂಸದರ ಪೈಕಿ 11 ಸಂಸದರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದು, ಇದು ಶೇ. 46ರಷ್ಟು ಪ್ರಮಾಣವಾಗಿದೆ.

ತೃಣಮೂಲ ಕಾಂಗ್ರೆಸ್ ಪಕ್ಷದ 19 ಹಾಲಿ ಸಂಸದರ ಪೈಕಿ 8 ಸಂಸದರು, ಜೆಡಿಯುನ 16 ಸಂಸದರ ಪೈಕಿ 12 ಸಂಸದರು ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆ ಹೊಂದಿದ್ದಾರೆ. ವೈಎಸ್‌ಆರ್‌ಸಿಯ 17 ಸಂಸದರ ಪೈಕಿ 8 ಸಂಸದರು ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಎಂದು ಪ್ರಮಾಣ ಪತ್ರದಲ್ಲಿ ಘೋಷಿಸಿಕೊಂಡಿದ್ದಾರೆ.

514 ಹಾಲಿ ಸಂಸದರ ಪೈಕಿ ಸುಮಾರು ಮೂರನೆ ಒಂದರಷ್ಟು ಸಂಸದರು (149 ಸಂಸದರು) ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ ಎಂದು ಘೋಷಿಸಿಕೊಂಡಿದ್ದು, ಅವರ ವಿರುದ್ಧ ಇರುವ ಪ್ರಕರಣಗಳು ಹತ್ಯೆ, ಹತ್ಯಾ ಪ್ರಯತ್ನ, ಕೋಮು ಸೌಹಾರ್ದತೆಗೆ ಧಕ್ಜೆ, ಅಪಹರಣ ಹಾಗೂ ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿವೆ.

ಉತ್ತರ ಪ್ರದೇಶ, ಮಹಾರಾಷ್ಟ್ರ, ಬಿಹಾರ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಹಿಮಾಚಲ ಪ್ರದೇಶದ ಸಂಸದರ ಪೈಕಿ ಶೇ. 50ಕ್ಕೂ ಹೆಚ್ಚು ಸಂಸದರು ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News