ಮೊದಲ ಹಂತದಲ್ಲಿ ಶೇ.60 ಮತದಾನ | ಪಶ್ಚಿಮ ಬಂಗಾಳ, ಮಣಿಪುರ ಹೊರತುಪಡಿಸಿ ಬಹುತೇಕ ಶಾಂತ

Update: 2024-04-19 16:55 GMT

PC :PTI 

ಹೊಸದಿಲ್ಲಿ : ಭಾರತದ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನವು ಶುಕ್ರವಾರ ನಡೆಯಿತು. 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 102 ಕ್ಷೇತ್ರಗಳಲ್ಲಿ ಮತದಾನವಾಗಿದ್ದು, ಶೇ.60ರಷ್ಟು ಮಂದಿ ಹಕ್ಕು ಚಲಾಯಿಸಿದ್ದಾರೆ. ಪಶ್ಚಿಮಬಂಗಾಳ ಹಾಗೂ ಮಣಿಪುರದ ವಿವಿಧೆಡೆ ವ್ಯಾಪಕ ಹಿಂಸಾಚಾರದ ಘಟನೆಗಳು ವರದಿಯಾಗಿದ್ದರೆ, ಉಳಿದೆಡೆ ಮತದಾನ ಬಹುತೇಕ ಶಾಂತಿಯುತವಾಗಿತ್ತು.

ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿರುವ ಮಣಿಪುರದ ತಮನ್ಪೊಕ್ಪಿ ಎಂಬಲ್ಲಿ ಅಜ್ಞಾತ ದುಷ್ಕರ್ಮಿಗಳು ಮತಗಟ್ಟೆ ಸಮೀಪ ಗುಂಡಿನ ದಾಳಿ ನಡೆಸಿದ್ದಾರೆ. ಇರೊಯಿಸೆಂಬಾ ಪಟ್ಟಣದ ಮತಗಟ್ಟೆಯೊಂದರಲ್ಲಿಯೂ ಹಿಂಸಾಚಾರ ನಡೆದಿರುವ ಬಗ್ಗೆ ವರದಿಯಾಗಿದೆ.

ದಕ್ಷಿಣ ಭಾರತದ ರಾಜ್ಯವಾದ ತಮಿಳುನಾಡಿನ ಎಲ್ಲಾ 39 ಲೋಕಸಭಾ ಕ್ಷೇತ್ರಗಳಿಗೂ ಮತದಾನ ನಡೆಯಿತು. ಇಂದು ಮತದಾನ ನಡೆದ 21 ರಾಜ್ಯಗಳು ಹಾಗೂ ಕೇಂದ್ರಾಡಳಿತಗಳಲ್ಲಿ ಸಂಜೆ 6:00 ಗಂಟೆಯ ವೇಳೆಗೆ ಒಟ್ಟಾರೆ ಶೇ.60 ಮತದಾನವಾಗಿದೆ. ಪಶ್ಚಿಮ ಬಂಗಾಳದಲ್ಲಿ ಗರಿಷ್ಠ (77.57)ಮತದಾನವಾಗಿದೆ, ತ್ರಿಪುರ ಆನಂತರದ ಸ್ಥಾನದಲ್ಲಿದ್ದು, ಅಲ್ಲಿ 76.10 ಶೇಕಡ ಮತದಾನವಾಗಿದೆ ಹಾಗೂ ಕೇಂದ್ರಾಡಳಿತ ಪುದುಚೇರಿಯಲ್ಲಿ 72.84 ಶೇ. ಮತದಾನವಾಗಿದೆ. ಬಿಹಾರದಲ್ಲಿ ಅತ್ಯಂತ ಕನಿಷ್ಠ (46.32 ಶೇ.) ಮತದಾನವಾಗಿದೆ.

ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ಕಿರಣ್ ರಿಜಿಜು, ಬಿಜೆಪಿ ತಮಿಳುನಾಡು ಅಧ್ಯಕ್ಷ ಅಣ್ಣಾ ಮಲೈ , ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಸೇರಿದಂತೆ 1625 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.

ಶುಕ್ರವಾರ ನಡೆದ ಚುನಾವಣೆಯಲ್ಲಿ ಹಲವಾರು ಪ್ರಮುಖ ರಾಜಕೀಯ ನಾಯಕರು ಹಾಗೂ ಗಣ್ಯರು ಮತದಾನ ಮಾಡಿದ್ದಾರೆ. ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ಅವರ ಪುತ್ರ ಹಾಗೂ ಶಿವಗಂಗಾ ಕ್ಷೇತ್ರದ ಅಭ್ಯರ್ಥಿ ಕಾರ್ತಿ ಚಿದಂಬರಂ, ಖ್ಯಾತ ನಟ ರಜನಿಕಾಂತ್, ಆರೆಸ್ಸೆಸ್ ವರಿಷ್ಠ ಮೋಹನ್ ಭಾಗವತ್ ಹಾಗೂ ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ವರಿಷ್ಠ ಎಂ.ಕೆ.ಸ್ಟಾಲಿನ್ ಮತದಾನ ಮಾಡಿದ್ದಾರೆ.

ತಮಿಳುನಾಡು ಬಿಜೆಪಿ ಅಧ್ಯಕ್ಷ ಹಾಗೂ ಕೊಯಮತ್ತೂರು ಕ್ಷೇತ್ರದ ಅಭ್ಯರ್ಥಿ ಕೆ. ಅಣ್ಣಾಮಲೈ ಅವರು ಕರೂರು ಗ್ರಾಮದ ಉದುಪಟ್ಟಿ ಮತಗಟ್ಟೆಯಲ್ಲಿ ಮತ ಚಲಾಯಿಸಿದ್ದಾರೆ. ಮತದಾನದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು ಮತದಾರರ ಮೇಲೆ ಪ್ರಭಾವ ಬೀರಲು ಡಿಎಂಕೆ ಹಾಗೂ ಎಡಿಎಂಕೆ ಪಕ್ಷಗಳು 1 ಸಾವಿರ ಕೋಟಿ ರೂ.ಗೂ ಅಧಿಕ ಹಣವನ್ನು ವ್ಯಯಿಸಿವೆ ಎಂದರು.

ಮೊದಲ ಹಂತದ ಮತದಾನದಲ್ಲಿ ತಮಿಳುನಾಡು (39), ಉತ್ತರಾಖಂಡ (5), ಅರುಣಾಚಲ ಪ್ರದೇಶ (2), ಮೇಘಾಲಯ (2), ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳು (1), ಮಿರೆರಾಂ (1), ನಾಗಾಲ್ಯಾಂಡ್ (1), ಪುದುಚೇರಿ (1), ಸಿಕ್ಕಿಂ (1) ಹಾಗೂ ಲಕ್ಷದ್ವೀಪ (1)ದಲ್ಲಿ ಮತದಾನವಾಗಿದೆ.

ಇದರ ಜೊತೆಗೆ ಅರುಣಾಚಲದ 62 ವಿಧಾನಸಭಾ ಕ್ಷೇತ್ರಗಳು ಹಾಗೂ ಸಿಕ್ಕಿಂನ 32 ವಿಧಾನಸಭಾ ಕ್ಷೇತ್ರಗಳಿಗೂ ಇಂದು ಮತದಾನ ನಡೆಯಿತು.

ಜಮ್ಮುಕಾಶ್ಮೀರದ ಉದಂಪುರ ಲೋಕಸಭಾ ಕ್ಷೇತ್ರದಲ್ಲಿ ಶುಕ್ರವಾರ ಮತದಾನವಾಗಿದ್ದು, ಜನರು ಬಿರುಸಿನ ಮಳೆಯ ನಡುವೆಯೂ ಭಾರೀ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ತೆರಳಿ ಹಕ್ಕು ಚಲಾಯಿಸಿದ್ದಾರೆ.

ಜನತೆ ದಾಖಲೆಯ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ನಾಗರಿಕರಿಗೆ ಕರೆ ನೀಡಿದ್ದಾರೆ. ‘‘ ದೊಡ್ಡ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಬೇಕೆಂದು ನಾನು ವಿಶೇಷವಾಗಿ ಯುವಜನರನ್ನು ಹಾಗೂ ಚೊಚ್ಚಲ ಮತದಾರರಿಗೆ ಕರೆ ನೀಡುತ್ತಿದ್ದೇನೆ. ಒಟ್ಟಾರೆಯಾಗಿ ಪ್ರತಿಯೊಂದು ಮತವೂ ಅಮೂಲ್ಯವಾದುದು ಹಾಗೂ ಪ್ರತಿಯೊಬ್ಬರ ಧ್ವನಿಯೂ ಮಹತ್ವದ್ದಾಗಿದೆ’’ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡಾ ನಾಗರಿಕರು ದೊಡ್ಡ ಸಂಖ್ಯೆಯಲ್ಲಿ ಆಗಮಿಸಿ ಮತಚಲಾಯಿಸಬೇಕೆಂದು ಕರೆ ನೀಡಿದ್ದಾರೆ.

ತಮಿಳುನಾಡು, ಅರುಣಾಚಲಪ್ರದೇಶ, ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳು ಹಾಗೂ ಅಸ್ಸಾಂನ ಕೆಲವು ಮತಗಟ್ಟೆಗಳ ಇವಿಎಂ ಯಂತ್ರಗಳಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಕಾಣಿಸಿಕೊಂಡಿದ್ದಾಗಿ ವರದಿಯಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News