ಪಹಲ್ಗಾಮ್ ದಾಳಿ ಬಳಿಕ ಅಟ್ಟಾರಿ-ವಾಘಾ ಗಡಿ ಮೂಲಕ ಭಾರತ ತೊರೆದ 786 ಪಾಕ್ ಪ್ರಜೆಗಳು

Photo credit: PTI
ಹೊಸದಿಲ್ಲಿ: ಕಳೆದ ಆರು ದಿನಗಳಲ್ಲಿ ಪಾಕಿಸ್ತಾನದ 786 ಪ್ರಜೆಗಳು ಅಟ್ಟಾರಿ-ವಾಘಾ ಗಡಿ ಮೂಲಕ ಭಾರತವನ್ನು ತೊರೆದಿದ್ದಾರೆ ಎಂದು ಹಿರಿಯ ಅಧಿಕಾರಿಯೋರ್ವರು ತಿಳಿಸಿದ್ದಾರೆ.
ಇದೇ ಅವಧಿಯಲ್ಲಿ 1,376 ಮಂದಿ ಭಾರತೀಯರು ಪಾಕಿಸ್ತಾನದಿಂದ ಅಟ್ಟಾರಿ-ವಾಘಾ ಗಡಿಯ ಮೂಲಕ ತಾಯ್ನಾಡಿಗೆ ವಾಪಾಸ್ಸಾಗಿದ್ದಾರೆ. ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನಕ್ಕೆ ಪ್ರಯಾಣಿಸದಂತೆ ಭಾರತೀಯ ಪ್ರಜೆಗಳಿಗೆ ಸಲಹೆ ನೀಡಲಾಗಿತ್ತು. ಪ್ರಸ್ತುತ ಪಾಕಿಸ್ತಾನದಲ್ಲಿರುವ ಭಾರತೀಯ ಪ್ರಜೆಗಳಿಗೆ ಆದಷ್ಟು ಬೇಗ ಭಾರತಕ್ಕೆ ಮರಳುವಂತೆ ಸೂಚಿಸಲಾಗಿತ್ತು.
ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಕಠಿಣ ನಿಲುವನ್ನು ತೆಗೆದುಕೊಂಡಿದ್ದ ಭಾರತ ಸರಕಾರ, ಪಾಕ್ ಪ್ರಜೆಗಳು ಎಪ್ರಿಲ್ 27ರೊಳಗೆ ಭಾರತವನ್ನು ತೊರೆಯಬೇಕು ಎಂದು ಗಡುವು ನಿಗದಿಪಡಿಸಿತ್ತು. ವೈದ್ಯಕೀಯ ವೀಸಾ ಹೊಂದಿರುವವರಿಗೆ ಭಾರತವನ್ನು ತೊರೆಯಲು ಎಪ್ರಿಲ್ 29ರವರೆಗೆ ಕಾಲಾವಕಾಶ ನೀಡಲಾಗಿತ್ತು. ರಾಜತಾಂತ್ರಿಕ, ಅಧಿಕೃತ ಮತ್ತು ದೀರ್ಘಾವಧಿಯ ವೀಸಾಗಳನ್ನು ಹೊಂದಿರುವವರಿಗೆ ವಿನಾಯಿತಿ ನೀಡಲಾಗಿತ್ತು.
ಪಾಕಿಸ್ತಾನಕ್ಕೆ ನೇರವಾಗಿ ವಿಮಾನದ ವ್ಯವಸ್ಥೆ ಇಲ್ಲದ ಕಾರಣ ಹಲವರು ದುಬೈ ಮೂಲಕ ಪಾಕಿಸ್ತಾನಕ್ಕೆ ವಾಪಾಸ್ಸಾಗಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಪಾಕಿಸ್ತಾನದ ಪ್ರಜೆಗಳನ್ನು ರಾಜ್ಯ ಪೊಲೀಸರು ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳು ಪತ್ತೆ ಹಚ್ಚುತ್ತಿರುವುದರಿಂದ ಹೆಚ್ಚಿನ ಪಾಕ್ ಪ್ರಜೆಗಳು ದೇಶವನ್ನು ತೊರೆಯುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.