ಪ್ರಯಾಣಿಕರ ಸುರಕ್ಷತೆ ಕುರಿತು ಭಾರತೀಯ ರೈಲ್ವೆಯ ಬಡಾಯಿಯ ಹೊರತಾಗಿಯೂ 2022ರಲ್ಲಿ ರೈಲು ಅಪಘಾತಗಳಲ್ಲಿ ತೀವ್ರ ಏರಿಕೆ
ಹೊಸದಿಲ್ಲಿ: ಪ್ರಯಾಣಿಕರ ಸುರಕ್ಷತೆಯ ಕುರಿತು ಭಾರತೀಯ ರೈಲ್ವೆಯು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರೂ 2020-21ಕ್ಕೆ ಹೋಲಿಸಿದರೆ 2021-22ರಲ್ಲಿ ರೈಲು ಅಪಘಾತಗಳ ಸಂಖ್ಯೆ ತೀವ್ರ ಏರಿಕೆಯಾಗಿದೆ. ಪರಿಣಾಮವಾಗಿ ಅದು ಕೋಟ್ಯಂತರ ರೂ.ಗಳ ನಷ್ಟವನ್ನು ಅನುಭವಿಸಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ 2020-21ರಲ್ಲಿ 21 ಅಪಘಾತಗಳು ಸಂಭವಿಸಿದ್ದರೆ 2021-22ರಲ್ಲಿ ಅವುಗಳ ಸಂಖ್ಯೆ 35ಕ್ಕೇರಿತ್ತು.
2021-22ರಲ್ಲಿ 26 ಹಳಿತಪ್ಪುವಿಕೆ ಘಟನೆಗಳು ನಡೆದಿದ್ದರೆ 2020-21ರಲ್ಲಿ ಇವುಗಳ ಸಂಖ್ಯೆ 16ರಷ್ಟಿತ್ತು. 2021-22ರಲ್ಲಿ ಎರಡು ಡಿಕ್ಕಿ ಘಟನೆಗಳು ನಡೆದಿದ್ದರೆ 2020-21ರಲ್ಲಿ ಇಂತಹ ಕೇವಲ ಒಂದು ಘಟನೆ ಸಂಭವಿಸಿತ್ತು. 2021-22 ಮತ್ತು 2020-21ರಲ್ಲಿ ರೈಲುಗಳಲ್ಲಿ ಸಂಭವಿಸಿದ್ದ ಬೆಂಕಿ ಅವಘಡಗಳ ಸಂಖ್ಯೆ ಕ್ರಮವಾಗಿ ಮೂರು ಮತ್ತು ನಾಲ್ಕು ಆಗಿತ್ತು.
ರೈಲ್ವೆ ಸಿಬ್ಬಂದಿಗಳ ವೈಫಲ್ಯದಿಂದಾಗಿ 2020-21ರಲ್ಲಿ 16 ಮತ್ತು 2021-22ರಲ್ಲಿ 20 ಅಪಘಾತಗಳು ಸಂಭವಿಸಿವೆ. ಉಪಕರಣಗಳ ವೈಫಲ್ಯದಿಂದಾಗಿ 2021-22ರಲ್ಲಿ ನಾಲ್ಕು ಅಪಘಾತಗಳು ಸಂಭವಿಸಿದ್ದರೆ 2020-21ರಲ್ಲಿ ಇಂತಹ ಒಂದೂ ಘಟನೆ ವರದಿಯಾಗಿರಲಿಲ್ಲ. ಇದಲ್ಲದೆ 2021-22ರಲ್ಲಿ ಒಂದು ವಿಧ್ವಂಸಕ ಕೃತ್ಯ ವರದಿಯಾಗಿದ್ದರೆ,ಎರಡು ಅಪಘಾತ ಪ್ರಕರಣಗಳಲ್ಲಿ ಕಾರಣ ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ ಅಥವಾ ಯಾರನ್ನೂ ಹೊಣೆಯಾಗಿಸಿರಲಿಲ್ಲ.
2021-22ರಲ್ಲಿ ರೈಲು ಅಪಘಾತಗಳಲ್ಲಿ ಒಂಭತ್ತು ಜನರು ಮೃತಪಟ್ಟು 45 ಜನರು ಗಾಯಗೊಂಡಿದ್ದರೆ,2020-21ರಲ್ಲಿ ಯಾವುದೇ ಸಾವುನೋವುಗಳು ವರದಿಯಾಗಿರಲಿಲ್ಲ.
ಕುತೂಹಲಕಾರಿಯಾಗಿ,ರೈಲ್ವೆಯು 2021-22ರಲ್ಲಿ 85.88 ಕೋಟಿ ರೂ. ಪರಿಹಾರವನ್ನು ಪಾವತಿಸಿದ್ದರೆ 2020-21ರಲ್ಲಿ 104.38 ಕೋಟಿ ರೂ.ಪರಿಹಾರವನ್ನು ಪಾವತಿಸಿತ್ತು.
ಈ ಎರಡು ಹಣಕಾಸು ವರ್ಷಗಳಲ್ಲಿ ಪರಿಹಾರ ಮೊತ್ತದ ಅಸಮಾನತೆಯ ಕುರಿತು ಸಮಜಾಯಿಷಿ ನೀಡಿರುವ ಇಲಾಖಾ ವರದಿಯು,ಯಾವುದೇ ಒಂದು ವರ್ಷದಲ್ಲಿ ಪಾವತಿಸಲಾದ ಪರಿಹಾರ ಮೊತ್ತವು ಆ ವರ್ಷದಲ್ಲಿ ಇತ್ಯರ್ಥಗೊಂಡ ಪ್ರಕರಣಗಳಿಗೆ ಮತ್ತು ಹಣಪಾವತಿಗೆ ಸಂಬಂಧಿಸಿರುತ್ತದೆ. ಅಪಘಾತಗಳು ಅದೇ ವರ್ಷ ಸಂಭವಿಸಿರಬೇಕಾಗಿಲ್ಲ ಎಂದು ಹೇಳಿದೆ.
ಅಪಘಾತಗಳಿಂದಾಗಿ ಭಾರತೀಯ ರೈಲ್ವೆಯು 2020-21ರಲ್ಲಿ 1,765.85 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದ್ದರೆ,2021-22ರಲ್ಲಿ ಇದು 3,915.15 ಕೋ.ರೂ.ಗೇರಿದೆ.