ಆಧಾರ್ ಕಾರ್ಡ್ ಜನ್ಮದಿನಾಂಕದ ಪುರಾವೆಯಲ್ಲ : ಸುಪ್ರೀಂ ಕೋರ್ಟ್

Update: 2024-10-25 14:59 GMT

   ಸಾಂದರ್ಭಿಕ ಚಿತ್ರ

ಹೊಸದಿಲ್ಲಿ : ಅಪಘಾತ ಪ್ರಕರಣದಲ್ಲಿ ಪರಿಹಾರವನ್ನು ಮಂಜೂರು ಮಾಡಲು ಮೃತನ ವಯಸ್ಸನ್ನು ನಿರ್ಧರಿಸಲು ಆಧಾರ್ ಕಾರ್ಡ್‌ನಲ್ಲಿಯ ಜನ್ಮದಿನಾಂಕವನ್ನು ಪರಿಗಣಿಸಿದ್ದ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ತಳ್ಳಿಹಾಕಿದೆ.

ಬಾಲ ನ್ಯಾಯ(ಆರೈಕೆ ಮತ್ತು ರಕ್ಷಣೆ) ಕಾಯ್ದೆ,2015ರ ಕಲಂ 94ರಡಿ ಶಾಲೆಯ ಲೀವಿಂಗ್ ಸರ್ಟಿಫಿಕೇಟ್‌ನಲ್ಲಿ ನಮೂದಿಸಲಾದ ಜನ್ಮ ದಿನಾಂಕವನ್ನು ಪರಿಗಣಿಸಿ ಮೃತನ ವಯಸ್ಸನ್ನು ನಿರ್ಧರಿಸಬೇಕಿತ್ತು ಎಂದು ನ್ಯಾಯಮೂರ್ತಿಗಳಾದ ಸಂಜಯ ಕರೋಲ್ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಹೇಳಿತು.

ಆಧಾರ್ ಕಾರ್ಡ್‌ನ್ನು ಗುರುತಿನ ಪುರಾವೆಯಾಗಿ ಬಳಸಬಹುದು. ಜನ್ಮದಿನಾಂಕದ ಪುರಾವೆಯಾಗಿ ಅಲ್ಲ ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರವು ತನ್ನ ಸುತ್ತೋಲೆಯಲ್ಲಿ ಸ್ಪಷ್ಟ ಪಡಿಸಿದ್ದನ್ನು ಪೀಠವು ಬೆಟ್ಟು ಮಾಡಿತು.

ಗುರುವಾರ ವಿಚಾರಣೆ ಸಂದರ್ಭದಲ್ಲಿ ಮೇಲ್ಮನವಿದಾರರ ವಾದವನ್ನು ಅಂಗೀಕರಿಸಿದ ಸರ್ವೋಚ್ಚ ನ್ಯಾಯಾಲಯವು ಶಾಲಾ ಲೀವಿಂಗ್ ಸರ್ಟಿಫಿಕೇಟ್‌ನ ಆಧಾರದಲ್ಲಿ ಮೃತನ ವಯಸ್ಸನ್ನು ನಿರ್ಧರಿಸಿದ್ದ ಮೋಟರ್ ಅಪಘಾತಗಳ ಕ್ಲೇಮ್‌ಗಳ ನ್ಯಾಯಮಂಡಳಿ (ಎಂಎಸಿಟಿ)ಯ ತೀರ್ಪನ್ನು ಎತ್ತಿ ಹಿಡಿಯಿತು.

2015ರಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಕುಟುಂಬಕ್ಕೆ ರೋಹ್ಟಕ್‌ನ ಎಂಎಸಿಟಿ 19.35 ಲಕ್ಷ ರೂ.ಗಳ ಪರಿಹಾರವನ್ನು ಮಂಜೂರು ಮಾಡಿ ಆದೇಶಿಸಿತ್ತು. ಆದರೆ ಮೃತನ ವಯಸ್ಸನ್ನು ನಿರ್ಧರಿಸುವಲ್ಲಿ ಎಂಎಸಿಟಿ ತಪ್ಪು ಮಾಡಿದೆಯೆಂದು ಹೇಳಿದ್ದ ಉಚ್ಚ ನ್ಯಾಯಾಲಯವು ಪರಿಹಾರದ ಮೊತ್ತವನ್ನು 9.22 ಲಕ್ಷ ರೂ.ಗಳಿಗೆ ತಗ್ಗಿಸಿತ್ತು. ಇದನ್ನು ಪ್ರಶ್ನಿಸಿ ಮೃತನ ಕುಟುಂಬವು ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ಸಲ್ಲಿಸಿತ್ತು.

ಮೃತನ ವಯಸ್ಸು 47 ವರ್ಷಗಳು ಎಂದು ನಿರ್ಧರಿಸಲು ಉಚ್ಚ ನ್ಯಾಯಾಲಯವು ಆತನ ಆಧಾರ್ ಕಾರ್ಡ್‌ನ್ನು ನೆಚ್ಚಿಕೊಂಡಿತ್ತು.

ಆಧಾರ್ ಕಾರ್ಡ್‌ನ ಆಧಾರದಲ್ಲಿ ಮೃತನ ವಯಸ್ಸನ್ನು ನಿರ್ಧರಿಸುವಲ್ಲಿ ಉಚ್ಚ ನ್ಯಾಯಾಲಯವು ತಪ್ಪೆಸಗಿದೆ. ಮೃತನ ಶಾಲಾ ಲೀವಿಂಗ್ ಸರ್ಟಿಫಿಕೇಟ್‌ನಂತೆ ಆತನಿಗೆ ಸಾಯುವಾಗ 45 ವರ್ಷ ವಯಸ್ಸಾಗಿತ್ತು ಎಂದು ಕುಟುಂಬವು ವಾದಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News