ಚಿತೆಯಿಂದ ಮಹಿಳೆಯ ದೇಹದ ಅವಶೇಷಗಳನ್ನು ಹೆಕ್ಕಿ ತಿಂದ ಆರೋಪ: ಇಬ್ಬರ ಬಂಧನ

Update: 2023-07-13 14:35 GMT

ಸಾಂದರ್ಭಿಕ ಚಿತ್ರ \ Photo: PTI 

ಭುವನೇಶ್ವರ್: ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಸ್ಮಶಾನದಲ್ಲಿ ಶವದ ಸುಟ್ಟ ಅವಶೇಷಗಳನ್ನು ತಿಂದ ಆರೋಪ ಮೇಲೆ ಇಬ್ಬರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಇಬ್ಬರು ಆರೋಪಿಗಳನ್ನು ಸುಂದರ್ ಮೋಹನ್ ಸಿಂಗ್ (45) ಮತ್ತು ನರೇಂದ್ರ ಸಿಂಗ್ (25) ಎಂದು ಗುರುತಿಸಲಾಗಿದೆ.

ಮಧುಸ್ಮಿತಾ ಸಿಂಗ್ ಎಂಬವರ ಮೃತದೇಹದ ಅರ್ಧ ಸುಟ್ಟ ಭಾಗಗಳನ್ನು ತಿಂದಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿಗಳು ಮಧುಸ್ಮಿತಾ ಅವರ ದೂರದ ಸಂಬಂಧಿಗಳಾಗಿದ್ದು, ಇಬ್ಬರೂ ಅಂತ್ಯ ಸಂಸ್ಕಾರಗಳಲ್ಲಿ ಭಾಗಿಯಾಗಿದ್ದರು.

ಹ್ಯಾಂಡಿಯಾ ಸೇವಿಸಿ ಅಮಲೇರಿದ್ದ ಆರೋಪಿಗಳು ಸುಟ್ಟ ಮಾಂಸ ತಿನ್ನುತ್ತಿರುವುದನ್ನು ನೋಡಿದ ಇತರ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದು, ನಂತರ ಅವರನ್ನು ಬಂಧಿಸಲಾಗಿದೆ.

"ಇಬ್ಬರೂ ದೇಹದ ಸುಟ್ಟ ಅವಶೇಷಗಳನ್ನು ತಿನ್ನುತ್ತಿದ್ದಾರೆ ಎಂದು ದೃಢಪಡಿಸಲಾಗಿದೆ. ಪ್ರಾಥಮಿಕ ಸಾಕ್ಷ್ಯದ ಆಧಾರದ ಮೇಲೆ ಅವರನ್ನು ಬಂಧಿಸಲಾಗಿದೆ. ಐಪಿಸಿಯ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ" ಎಂದು ಮಯೂರ್‌ಭಂಜ್ ಎಸ್ಪಿ ಬಿ ಗಂಗಾಧರ್ ತಿಳಿಸಿದ್ದಾರೆ.

"ಅವರು ಈ ಹಿಂದೆ ಇಂತಹ ಅಭ್ಯಾಸದಲ್ಲಿ ತೊಡಗಿದ್ದಾರೆಯೇ ಎಂಬುದು ತನಿಖೆಯಲ್ಲಿದೆ. ಎಲ್ಲಾ ಆಯಾಮಗಳಿಂದಲೂ ಪರಿಶೀಲಿಸಲಾಗುತ್ತಿದೆ." ಎಂದು ಎಸ್‌ಪಿ ತಿಳಿಸಿದ್ದಾರೆ.

ಸುಂದರ್ ಮತ್ತು ನರೇಂದ್ರ ಅಂತ್ಯಕ್ರಿಯೆಯ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಇಬ್ಬರು ಚಿತೆಯ ಬಳಿಯೇ ಇದ್ದರು. ಇತರ ಸಂಬಂಧಿಕರು ಸ್ಮಶಾನದಿಂದ ತೆರಳುತ್ತಿದ್ದಂತೆ, ಆರೋಪಿಗಳು ಚಿತಾಭಸ್ಮದಿಂದ ಅರ್ಧ ಸುಟ್ಟ ದೇಹದ ಕೆಲವು ತುಂಡುಗಳನ್ನು ತಿನ್ನುತ್ತಿರುವುದು ಕಂಡುಬಂದಿದೆ. ಬಳಿಕ ಸಂಬಂಧಿಕರು ನಮಗೆ ಮಾಹಿತಿ ನೀಡಿದ್ದಾರೆ ಎಂದು ಎಸ್‌ಪಿ ವಿವರಿಸಿದ್ದಾರೆ.

ಅರ್ಧ ಸುಟ್ಟ ದೇಹದ ಭಾಗಗಳನ್ನು ಸೇವಿಸುತ್ತಿರುವುದನ್ನು ಗಮನಿಸಿದ ಸಂಬಂಧಿಕರು, ಆರೋಪಿಗಳನ್ನು ತಡೆದಿದ್ದಾರೆ, ಆದರೆ ಯಾವುದೇ ಪಶ್ಚಾತ್ತಾಪ ಭಾವವನ್ನು ಹೊಂದಿರದಿದ್ದ‌ ಆರೋಪಿಗಳು ಸಂಬಂಧಿಕರ ಮುಂದೆ ವಿಚಿತ್ರವಾಗಿ ನರ್ತಿಸಿದ್ದಾರೆ ಎಂದು TimesofIndia.com ವರದಿ ಮಾಡಿದೆ.

ದೀರ್ಘಕಾಲದವರೆಗೆ ಕಾಯಿಲೆಯಿಂದ ಬಳಲುತ್ತಿದ್ದ ಮಧುಸ್ಮಿತಾ ಸಾವನ್ನಪ್ಪಿದ್ದಾರೆ. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News