ಸಾಕ್ಷ್ಯಚಿತ್ರ ಹಕ್ಕುಸ್ವಾಮ್ಯ ವಿವಾದ: ಒಂದು ಕೋಟಿ ರೂ. ಪರಿಹಾರ ಬೇಡಿಕೆ ಇಟ್ಟ ನಟ ಧನುಷ್ ರ ಚಿತ್ರ ನಿರ್ಮಾಣ ಸಂಸ್ಥೆ

ನಟಿ ನಯನತಾರಾ(X) , ನಟ ಧನುಷ್ (X\ @dhanushkraja)
)
ಚೆನ್ನೈ: ತಮಿಳು ಚಿತ್ರ ನಟಿ ನಯನತಾರಾರಿಂದ ಒಂದು ಕೋಟಿ ರೂ. ಪರಿಹಾರ ಕೋರಿ ದಾಖಲಿಸಿದ್ದ ತನ್ನ ಮುಖ್ಯ ಸಿವಿಲ್ ದಾವೆಯನ್ನು ಮುಂದುವರಿಸಲು ನಟ ಧನುಷ್ ರ ಚಿತ್ರ ನಿರ್ಮಾಣ ಸಂಸ್ಥೆಯಾದ ವಂಡರ್ ಬಾರ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಸೋಮವಾರ (ಮಾರ್ಚ್ 10) ನಿರ್ಧರಿಸಿದೆ. ಇದರೊಂದಿಗೆ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿರುವ ಸಾಕ್ಷ್ಯಚಿತ್ರ ‘ನಯನತಾರಾ: ಬಿಯಾಂಡ್ ದಿ ಫೇರಿ ಟೇಲ್’ನಲ್ಲಿ ‘ನಾನುಂ ರೌಡಿ ಧಾನ್’ ಚಲನಚಿತ್ರದ ತೆರೆಯ ಹಿಂದಿನ ದೃಶ್ಯಗಳನ್ನು ನಟ ಧನುಷ್ ರ ಅನುಮತಿ ಇಲ್ಲದೆ ಬಳಸಿಕೊಳ್ಳುವುದನ್ನು ತಡೆಯಲು ಅದರ ವಿರುದ್ಧ ಖಾಯಂ ತಡೆಯಾಜ್ಞೆ ಅರ್ಜಿ ಸಲ್ಲಿಸಲೂ ತೀರ್ಮಾನಿಸಿದೆ.
ಚಿತ್ರೀಕರಣದ ವೇಳೆ ನಯನತಾರಾರ ಪತಿ ವಿಘ್ನೇಶ್ ಶಿವನ್ ವೃತ್ತಿಪರವಲ್ಲದ ನಡವಳಿಕೆ ಪ್ರದರ್ಶಿಸಿದ್ದರು ಎಂದೂ ಧನುಷ್ ತಮ್ಮ ಪ್ರಮಾಣ ಪತ್ರದಲ್ಲಿ ಆರೋಪಿಸಿದ್ದಾರೆ.
ನಟ ಧನುಷ್ ರನ್ನು ಪ್ರತಿನಿಧಿಸುತ್ತಿರುವ ಅವರ ಚಿತ್ರ ನಿರ್ಮಾಣ ಸಂಸ್ಥೆ ವಂಡರ್ ಬಾರ್ ಫಿಲ್ಮ್ಸ್, ನಯನತಾರಾ ಹಾಗೂ ಸಾಕ್ಷ್ಯಚಿತ್ರ ನಿರ್ಮಾಣಕಾರರಿಂದ ಒಂದು ಕೋಟಿ ರೂ. ಪರಿಹಾರ ಕೋರಿ ಮೊಕದ್ದಮೆ ದಾಖಲಿಸಿದೆ.
ಸಾಕ್ಷ್ಯಚಿತ್ರ ಬಿಡುಗಡೆಯನ್ನು ತಡೆ ಹಿಡಿಯಲು ಕೋರಿ ಸಲ್ಲಿಕೆಯಾಗಿದ್ದ ಮಧ್ಯಂತರ ತಡೆಯಾಜ್ಞೆ ಅರ್ಜಿಯನ್ನು ನ್ಯಾ. ಸೆಂಥಿಲ್ ಕುಮಾರ್ ರಾಮಮೂರ್ತಿ ಮುಕ್ತಾಯಗೊಳಿಸಿದ ನಂತರ, ನಟ ಧನುಷ್ ರಿಂದ ಈ ನಿರ್ಧಾರ ಹೊರ ಬಿದ್ದಿದೆ.
ಇದಕ್ಕೂ ಮುನ್ನ, ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೆಂಥಿಲ್ ಕುಮಾರ್ ರಾಮಮೂರ್ತಿ, “ನವೆಂಬರ್ 18, 2024ರಂದೇ ಸಾಕ್ಷ್ಯಚಿತ್ರ ಬಿಡುಗಡೆಯಾಗಿರುವುದರಿಂದ, ಮಧ್ಯಂಂತರ ತಡೆಯಾಜ್ಞೆಯಿಂದ ಯಾವುದೇ ಪ್ರಯೋಜನವಿಲ್ಲ” ಎಂದು ಅಭಿಪ್ರಾಯ ಪಟ್ಟರು.