‘ಪುಳು’ ಚಿತ್ರದಲ್ಲಿ ನಟಿಸಿರುವುದಕ್ಕೆ ನಟ ಮಮ್ಮುಟ್ಟಿಗೆ ಕಿರುಕುಳ| ಕೇರಳ ರಾಜಕಾರಣಿಗಳಿಂದ ಖಂಡನೆ
ತಿರುವನಂತಪುರ: ‘ಪುಳು’ ಚಿತ್ರದಲ್ಲಿನ ತನ್ನ ಪಾತ್ರಕ್ಕಾಗಿ ನಟ ಮಮ್ಮುಟ್ಟಿ ಎದುರಿಸಿದ ಆನ್ಲೈನ್ ಕಿರುಕುಳವನ್ನು ಕೇರಳದ ರಾಜಕೀಯ ನಾಯಕರು ಬುಧವಾರ ಖಂಡಿಸಿದ್ದಾರೆ. ಅಲ್ಲದೆ, ಮಮ್ಮುಟ್ಟಿ ಅವರು ‘ಮಲೆಯಾಳಿಗಳ ಹೆಮ್ಮೆ’ ಎಂದು ಹೇಳಿದ್ದಾರೆ.
ರತಿನಾ ಪಿ.ಟಿ. ನಿರ್ದೇಶನದ ‘ಪುಳು’ ಚಿತ್ರ ಮೇಲ್ಜಾತಿಯನ್ನು ಅವಮಾನಿಸಿದೆ ಎಂದು ನಿರ್ದೇಶಕಿಯ ಪತಿ ಶರ್ಶಾದ್ ಬನಿಯಾಂಡಿ ಅವರು ಆನ್ಲೈನ್ ಚಾನೆಲ್ ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಬಳಿಕ ಈ ವಿಷಯ ವಿವಾದಕ್ಕೆ ಗ್ರಾಸವಾಗಿದೆ.
ಈ ಯೋಜನೆಯನ್ನು ಕೈಗೆತ್ತಿಕೊಂಡಿರುವ ಮಮ್ಮುಟ್ಟಿ ಅವರ ನಿರ್ಧಾರವನ್ನು ಬನಿಯಾಂಡಿ ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ಈ ಚಿತ್ರದಲ್ಲಿ ನಟಿಸುವ ಮುನ್ನ ಮಮ್ಮುಟ್ಟಿ ಅವರು ಸ್ಕ್ರಿಪ್ಟ್ ಓದಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಇದರ ಪರಿಣಾಮವಾಗಿ ಮಮ್ಮುಟ್ಟಿ ಅವರು ಹಿಂದುತ್ವ ಬೆಂಬಲಿಗರಿಂದ ಆನ್ಲೈನ್ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ‘ದಿ ಹಿಂದು’ ಪತ್ರಿಕೆ ವರದಿ ಮಾಡಿದೆ.
ಸ್ಪಷ್ಟ ರಾಜಕೀಯ ಮಾರ್ಗಸೂಚಿಯೊಂದಿಗೆ ಸ್ಥಾಪಿತ ಹಿತಾಸಕ್ತಿ ಈ ವಾಗ್ದಾಳಿಯ ಹಿಂದಿದೆ ಎಂದು ಕಾಂಗ್ರೆಸ್ ನಾಯಕ ಕೆ.ಸಿ. ವೇಣುಗೋಪಾಲ್ ಆರೋಪಿಸಿದ್ದಾರೆ.
ಸಿಪಿಐ (ಮಾಕ್ಸ್ವಾದಿ) ನಾಯಕ ಹಾಗೂ ರಾಜ್ಯ ಸಾಮಾನ್ಯ ಶಿಕ್ಷಣ ಖಾತೆ ಸಚಿವ ವಿ. ಶಿವನ್ ಕುಟ್ಟಿ ಅವರು, ಮಮ್ಮುಟ್ಟಿಯನ್ನು ‘‘ಮಲೆಯಾಳಿಗಳ ಹೆಮ್ಮೆ’’ ಎಂದು ವ್ಯಾಖ್ಯಾನಿಸಿದ್ದಾರೆ.
‘‘ಮಮ್ಮುಟ್ಟಿ ಅವರನ್ನು ಮುಹಮ್ಮದ್ ಕುಟ್ಟಿ, ನಿರ್ದೇಶಕ ಕಮಲ್ ಅವರನ್ನು ಕಮಾಲುದ್ದೀನ್ ಹಾಗೂ ನಟ ವಿಜಯ್ ಅವರನ್ನು ಜೋಸೆಫ್ ವಿಜಯ್ ಎಂದು ಕರೆಯುವ ಸಂಘಿಗಳ ರಾಜಕೀಯ ಇಲ್ಲಿ ನಿಷ್ಪ್ರಯೋಜಕ’’ ಎಂದು ರಾಜ್ಯ ಕಂದಾಯ ಸಚಿವ ಕೆ. ರಾಜನ್ ಹೇಳಿದ್ದಾರೆ.