ಭೂಗತ ಪಾತಕಿ ಬಿಷ್ಣೋಯಿ ಸಹೋದರನೆಂದು ನಟ ಸಲ್ಮಾನ್ ಖಾನ್‌ ಗೆ ಬೆದರಿಕೆ | ನೋಯ್ಡಾದ ವ್ಯಕ್ತಿಯ ಬಂಧನ

Update: 2024-10-29 15:38 GMT

 ನಟ ಸಲ್ಮಾನ್ ಖಾನ್‌ | PC : @BeingSalmanKhan

ನೋಯ್ಡಾ : ಲಾರೆನ್ಸ್ ಬಿಷ್ಣೋಯಿ ಸಹೋದರನೆಂದು ಸೋಗು ಹಾಕಿ ನಟ ಸಲ್ಮಾನ್ ಖಾನ್‌ ಗೆ ಬೆದರಿಕೆ ಒಡ್ಡಿದ ಹಾಗೂ 10 ಕೋಟಿ ರೂ. ಸುಲಿಗೆ ಹಣಕ್ಕೆ ಬೇಡಿಕೆ ಇರಿಸಿದ ಆರೋಪದಲ್ಲಿ ವ್ಯಕ್ತಿಯೋರ್ವನನ್ನು ನೋಯ್ಡಾ ಹಾಗೂ ಮುಂಬೈ ಪೊಲೀಸರು ಜಂಟಿ ಕಾರ್ಯಚರಣೆಯಲ್ಲಿ ಇಲ್ಲಿಂದ ಬಂಧಿಸಿದ್ದಾರೆ.

ಆರೋಪಿಯನ್ನು ತಾಲಿಬ್ ಅನ್ಸಾರಿ ಎಂದು ಗುರುತಿಸಲಾಗಿದೆ. ಆತ ತಾನು ಇಂಟರ್‌ ನೆಂಟ್‌ನಿಂದ ಫೋನ್ ನಂಬರ್ ತೆಗೆದುಕೊಂಡು ಬೆದರಿಕೆ ಕರೆ ಮಾಡಿದೆ. ಅದು ಮುಂಬೈ ಪೊಲೀಸರು ನೀಡಿದ ಸಹಾಯವಾಣಿ ನಂಬರ್ ಆಗಿತ್ತು ಎಂದು ಪೊಲೀಸರಿಗೆ ತಿಳಿಸಿರುವುದಾಗಿ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಉತ್ತರಪ್ರದೇಶದ ಬರೇಲಿ ಜಿಲ್ಲೆಯ ನಿವಾಸಿಯಾಗಿರುವ ಅನ್ಸಾರಿಯನ್ನು ಸೆಕ್ಟರ್ 92ರಲ್ಲಿರುವ ನಿರ್ಮಾಣ ಹಂತದಲ್ಲಿರುವ ಮನೆಯೊಂದರಿಂದ ಸೋಮವಾರ ರಾತ್ರಿ ಬಂಧಿಸಲಾಯಿತು. ಅಲ್ಲಿ ಆತ ಬಡಗಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ಸೆಕ್ಟರ್ 39 ಪೊಲೀಸ್ ಠಾಣೆಯ ಉಸ್ತುವಾರಿ ಇನ್ಸ್‌ಪೆಕ್ಟರ್ ಜಿತೇಂದ್ರ ಕುಮಾರ್ ಸಿಂಗ್ ಹೇಳಿದ್ದಾರೆ.

ಮುಂಬೈಯ ಬಾಂದ್ರಾ ಪೊಲೀಸರು ನೋಯ್ಡಾ ಪೊಲೀಸರನ್ನು ಸೋಮವಾರ ರಾತ್ರಿ ಸಂಪರ್ಕಿಸಿದ್ದರು ಲಾರನ್ಸ್ ಬಿಷ್ಣೋಯಿ ಸಹೋದರ ಅನ್ಮೋಲ್ ಬಿಷ್ಣೋಯಿ ಸಲ್ಮಾನ್ ಖಾನ್‌ ಗೆ ಬೆದರಿಕೆ ಒಡ್ಡಿದ್ದಾನೆ ಎಂದು ಮಾಹಿತಿ ನೀಡಿದ್ದರು. ಫೋನ್ ಇರುವ ಪ್ರದೇಶವನ್ನು ಪತ್ತೆ ಹಚ್ಚಲಾಗಿದೆ ಎಂದು ಅವರು ತಿಳಿಸಿದ್ದರು ಎಂದು ಅವರು ಹೇಳಿದ್ದಾರೆ.

ಸೆಕ್ಟರ್ 92ರಲ್ಲಿರುವ ನಿರ್ಮಾಣ ಹಂತದಲ್ಲಿರುವ ಮನೆಯ ಮೇಲೆ ನೋಯ್ಡಾ ಹಾಗೂ ಮುಂಬೈ ಪೊಲೀಸ್‌ ನ ಜಂಟಿ ತಂಡ ದಾಳಿ ನಡೆಸಿತು. ಬೆದರಿಕೆ ಹಾಗೂ 10 ಕೋಟಿ ರೂ. ಸುಲಿಗೆ ಹಣದ ಬೇಡಿಕೆಯ ಆರೋಪದಲ್ಲಿ ಅನ್ಸಾರಿಯನ್ನು ಬಂಧಿಸಿತು ಎಂದು ಸಿಂಗ್ ಹೇಳಿದ್ದಾರೆ.

ಘಟನೆಯಲ್ಲಿ ಬಳಸಲಾದ ಮೊಬೈಲ್ ಫೋನ್ ಅನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಂಬೈ ಪೊಲೀಸರು ಅನ್ಸಾರಿಯನ್ನು ಗೌತಮ್ ಬುಧ್ಧ ನಗರ ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರಪಡಿಸಿದ ಬಳಿಕ ‘ಟಾನ್ಸಿಟ್ ಡಿಮಾಂಡ್’ನಲ್ಲಿ ಮಹಾರಾಷ್ಟ್ರಕ್ಕೆ ಕರೆದೊಯ್ದಿದ್ದಾರೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News