ಅದಾನಿಗಾಗಿ ಗಡಿ ಭದ್ರತಾ ನಿಯಮಗಳ ಸಡಿಲಿಕೆ ಆರೋಪ: ಕೇಂದ್ರ ಸರಕಾರದ ವಿರುದ್ಧ ಮುಗಿಬಿದ್ದ ಕಾಂಗ್ರೆಸ್

Update: 2025-02-12 20:52 IST
ADANI

ಗೌತಮ್ ಅದಾನಿ | PTI 

  • whatsapp icon

ಹೊಸದಿಲ್ಲಿ: ಪಾಕಿಸ್ತಾನದ ಗಡಿಗೆ ಸನಿಹದಲ್ಲಿರುವ ಗುಜರಾತ್ ನ ಖಾವ್ಡಾದಲ್ಲಿ ನವೀಕರಿಸಬಹುದಾದ ಇಂಧನ ಪಾರ್ಕ್ ನಿರ್ಮಿಸಲು ಅದಾನಿ ಸಮೂಹಕ್ಕೆ ಅನುಕೂಲವಾಗುವಂತೆ ಗಡಿ ಭದ್ರತಾ ನಿಯಮಗಳನ್ನು ಸಡಿಲಗೊಳಿಸಲಾಗಿದೆ ಎಂಬ ವರದಿಗಳು ಬುಧವಾರ ರಾಜಕೀಯ ವಿವಾದ ಸೃಷ್ಟಿಸಿದ್ದು, “ರಾಷ್ಟ್ರೀಯ ಭದ್ರತೆಗಿಂತ ಆಪ್ತ ಮಿತ್ರನ ವ್ಯಾವಹಾರಿಕ ಹಿತಾಸಕ್ತಿ ಮುಖ್ಯವಾಯಿತೆ?” ಎಂದು ನರೇಂದ್ರ ಮೋದಿ ಸರಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಬಿಜೆಪಿಯ ಡೋಂಗಿ ರಾಷ್ಟ್ರೀಯತೆಯ ಮುಖ ಮತ್ತೊಮ್ಮೆ ಬಯಲಾಗಿದೆ ಎಂದು ಟೀಕಾಪ್ರಹಾರ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಭಾರತ-ಪಾಕಿಸ್ತಾನ ಗಡಿಯಲ್ಲಿ ಸುಲಭವಾಗಿ ದಾಳಿ ನಡೆಸಲು ಸಾಧ್ಯವಾಗುವಷ್ಟು ದೂರದಲ್ಲಿ ಖಾಸಗಿ ಯೋಜನೆಯೊಂದಕ್ಕೆ ಸರಕಾರವೇಕೆ ಅನುಮತಿ ನೀಡಿದೆ ಹಾಗೂ ಸೇನಾಪಡೆಯ ರಕ್ಷಣಾ ಹೊಣೆಗಾರಿಕೆಯನ್ನು ಅಧಿಕಗೊಳಿಸಿ, ವ್ಯೂಹತಂತ್ರ ಲಾಭವನ್ನು ಕಡಿಮೆಗೊಳಿಸಿದೆ ಎಂದು ಪ್ರಶ್ನಿಸಿದ್ದಾರೆ.

ಇದಕ್ಕೂ ಮುನ್ನ, ವಿಶ್ವಾಸಾರ್ಹ ಸುದ್ದಿ ಮೂಲಗಳು ಹಾಗೂ ಗೋಪ್ಯ ದಾಖಲೆಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದ ‘The Guardian’ ಸುದ್ದಿ ಸಂಸ್ಥೆ, ಭಾರತ-ಪಾಕಿಸ್ತಾನ ಗಡಿಯಲ್ಲಿರುವ ಸೂಕ್ಷ್ಮ ಪ್ರದೇಶವನ್ನು ವಾಣಿಜ್ಯ ಚಟುವಟಿಕೆಗಳಿಗೆ ಕಾರ್ಯಸಾಧ್ಯುವಾಗಿಸಲು ರಕ್ಷಣಾ ಸಚಿವಾಲಯವು ಭದ್ರತಾ ಶಿಷ್ಟಾಚಾರಗಳಿಗೆ ತಿದ್ದುಪಡಿ ತಂದಿದೆ ಎಂದು ಪ್ರಕಟಿಸಿತ್ತು. ಇದಕ್ಕೂ ಮುನ್ನ, ಈ ಹಿಂದಿನಿಂದಲೂ ಅಸ್ತಿತ್ವದಲ್ಲಿರುವ ಗ್ರಾಮಗಳು ಹಾಗೂ ಗಡಿಯಿಂದ 10 ಕಿಮೀ ದೂರದವರೆಗಿನ ರಸ್ತೆಗಳಲ್ಲಿ ಯಾವುದೇ ಪ್ರಮುಖ ನಿರ್ಮಾಣಗಳಿಗೆ ಅನುಮತಿ ನೀಡಲಾಗುತ್ತಿರಲಿಲ್ಲ.

ವರದಿಯ ಪ್ರಕಾರ, ಕಛ್ ನ ರಣ್ ನಲ್ಲಿರುವ ಭೂಮಿಯನ್ನು ಸೌರ ಮತ್ತು ಪವನ ವಿದ್ಯುತ್ ಯೋಜನೆಗಳಿಗೆ ಲಭ್ಯವಾಗಿಸಲು ಶಿಷ್ಟಾಚಾರಗಳನ್ನು ಸಡಿಲಗೊಳಿಸಬೇಕು ಎಂದು ಗುಜರಾತ್ ಸರಕಾರ ಕೇಂದ್ರ ಸರಕಾರಕ್ಕೆ ಮನವಿ ಮಾಡಿತ್ತು. ಆದರೆ, ಆ ಸಭೆಯಲ್ಲಿದ್ದ ಹಿರಿಯ ಸೇನಾಧಿಕಾರಿಗಳು ಈ ನಡೆಯ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದರು. ಹೀಗಿದ್ದೂ, ಮೇ 2023ರಲ್ಲಿ ಈ ಪ್ರಸ್ತಾವನೆಗೆ ಕೇಂದ್ರ ಸರಕಾರ ಅನುಮೋದನೆ ನೀಡಿದೆ ಎಂದು ಹೇಳಲಾಗಿದೆ.

ಸಭೆಯಲ್ಲಿ ಗಡಿಯ ಬಳಿ ಸೌರ ಫಲಕಗಳನ್ನು ಸ್ಥಾಪಿಸುವ ಕುರಿತು ಸೇನಾಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದರು. ಅವರು ಸೌರ ಫಲಕಗಳ ಗಾತ್ರದ ಕುರಿತೂ ತಮ್ಮ ಕಳವಳ ವ್ಯಕ್ತಪಡಿಸಿದ್ದರು. ಆದರೆ, ಸೌರ ಫಲಕಗಳ ಗಾತ್ರವನ್ನು ಬದಲಿಸುವುದು ಆರ್ಥಿಕವಾಗಿ ಕಾರ್ಯಸಾಧ್ಯಿವಲ್ಲ ಎಂದು ಕಂಪನಿಯು ಆ ಕಳವಳಗಳನ್ನು ತಳ್ಳಿ ಹಾಕಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.

ಇದರ ಬೆನ್ನಿಗೇ, ಬಿಜೆಪಿಯು ಖಾಸಗಿ ಕೋಟ್ಯಧಿಪತಿಗೆ ಲಾಭ ಮಾಡಿಕೊಡಲು ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೊಡ್ಡುತ್ತಿದೆ ಎಂದು ಆರೋಪಿಸಿರುವ ಮಲ್ಲಿಕಾರ್ಜುನ ಖರ್ಗೆ, ಅಮೂಲ್ಯ ವ್ಯೂಹಾತ್ಮಕ ಭೂಮಿಯನ್ನು ಮೋದಿ ತಮ್ಮ ಆಪ್ತ ಗೆಳೆಯನಿಗೆ ಉಡುಗೊರೆ ನೀಡಿದ್ದಾರೆ ಹಾಗೂ ಈ ಸಡಿಲಿಕೆಯು ಕೇವಲ ಭಾರತ-ಪಾಕಿಸ್ತಾನ ಗಡಿಗೆ ಮಾತ್ರ ಅನ್ವಯವಾಗದೆ, ಬಾಂಗ್ಲಾದೇಶ, ಚೀನಾ, ಮಯನ್ಮಾರ್ ಹಾಗೂ ನೇಪಾಳ ಗಡಿಗಳಿಗೂ ಅನ್ವಯವಾಗುವ ಮೂಲಕ ಗಡಿ ಭದ್ರತೆಗೆ ಅಪಾಯವನ್ನುಂಟು ಮಾಡಲಿದೆ ಎಂಬುದು ನಿಜವೇ ಎಂದು ಪ್ರಶ್ನಿಸಿದ್ದಾರೆ.

ಗಡಿ ಭದ್ರತಾ ನಿಯಮಗಳನ್ನು ಸಡಿಲಗೊಳಿಸಲಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಸಂಸದ ಮನೀಶ್ ತಿವಾರಿ ಕೂಡಾ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News