ʼಆಧಾರರಹಿತʼ: ಲಂಚದ ಆರೋಪವನ್ನು ನಿರಾಕರಿಸಿದ ಅದಾನಿ ಸಮೂಹ
ಹೊಸದಿಲ್ಲಿ: ಸೌರ ವಿದ್ಯುತ್ ಗುತ್ತಿಗೆ ವಿಚಾರದಲ್ಲಿ ಯುಎಸ್ ಪ್ರಾಸಿಕ್ಯೂಟರ್ಗಳು ಮಾಡಿರುವ ಲಂಚ ಮತ್ತು ವಂಚನೆ ಆರೋಪವನ್ನು ಅದಾನಿ ಸಮೂಹ ʼಆಧಾರರಹಿತʼ ಎಂದು ನಿರಾಕರಿಸಿದೆ.
ಈ ಕುರಿತು ಅದಾನಿ ಸಮೂಹದ ವಕ್ತರಾರು ಪ್ರಕಟನೆಯನ್ನು ಹೊರಡಿಸಿದ್ದು, ಯುಎಸ್ ನ್ಯಾಯಾಂಗ ಇಲಾಖೆ ಮತ್ತು ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ ಅದಾನಿ ಸಮೂಹದ ನಿರ್ದೇಶಕರ ವಿರುದ್ಧ ಮಾಡಿರುವ ಆರೋಪಗಳು ಆಧಾರರಹಿತವಾಗಿದೆ. ಯುಎಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್ ಮಾಡಿರುವುದು ಬರೀ ಆರೋಪಗಳಾಗಿವೆ ಮತ್ತು ತಪ್ಪಿತಸ್ಥರೆಂದು ಸಾಬೀತಾಗುವವರೆಗೆ ಆರೋಪಿಗಳನ್ನು ನಿರಪರಾಧಿ ಎಂದು ಭಾವಿಸಲಾಗುತ್ತದೆ. ಈ ಕುರಿತು ಕಾನೂನು ಹೋರಾಟ ನಡೆಸಲಾಗುವುದು ಎಂದು ಹೇಳಿದೆ.
ಭಾರತದ ಅತಿದೊಡ್ಡ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗಾಗಿ ಮುಂದಿನ 20 ವರ್ಷಗಳಲ್ಲಿ 2 ಶತಕೋಟಿ ಅಮೆರಿಕನ್ ಡಾಲರ್ ಲಾಭವನ್ನು ನಿರೀಕ್ಷಿಸುವ ಒಪ್ಪಂದಗಳನ್ನು ಪಡೆಯಲು ಭಾರತೀಯ ಸರ್ಕಾರಿ ಅಧಿಕಾರಿಗಳಿಗೆ ಲಂಚವನ್ನು ನೀಡಿದ ಮತ್ತು ವಿದೇಶಿ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿದ ಆರೋಪ ಇವರ ಮೇಲಿದೆ. ಇದಲ್ಲದೆ ಇತರ ಆರೋಪಿಗಳು ತನಿಖೆಗೆ ಅಡ್ಡಿಪಡಿಸುವ ಮೂಲಕ ಲಂಚದ ಆರೋಪವನ್ನು ಮರೆಮಾಚಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಅದಾನಿ ಗ್ರೂಪ್ ಯಾವಾಗಲೂ ಪಾರದರ್ಶಕತೆ ಮತ್ತು ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಬದ್ಧವಾಗಿದೆ. ನಮ್ಮ ಮಧ್ಯಸ್ಥಗಾರರು, ಪಾಲುದಾರರು ಮತ್ತು ಉದ್ಯೋಗಿಗಳಿಗೆ ನಮ್ಮದು ಕಾನೂನು ಪಾಲಿಸುವ ಸಂಸ್ಥೆ ಎಂದು ನಾವು ಭರವಸೆ ನೀಡುತ್ತೇವೆ ಎಂದು ಅದಾನಿ ಸಮೂಹದ ವಕ್ತಾರರು ಹೇಳಿದ್ದಾರೆ.