ಪ್ರಧಾನಿಯಿಂದ ಅದಾನಿ ಸೇವೆ | ದ್ವೇಷ, ವಿಭಜನೆ ಹರಡುತ್ತಿರುವ ಬಿಜೆಪಿ : ರಾಹುಲ್ ವಾಗ್ದಾಳಿ

Update: 2024-11-30 15:09 GMT

ರಾಹುಲ್ ಗಾಂಧಿ | PC : PTI 

ವಯನಾಡ್ : ಪ್ರಧಾನಿ ನರೇಂದ್ರ ಮೋದಿ ಮೇಲಿನ ತನ್ನ ದಾಳಿಯನ್ನು ಶನಿವಾರ ಮುಂದುವರಿಸಿರುವ ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಪ್ರಧಾನಿಯವರು ಕೈಗಾರಿಕೋದ್ಯಮಿ ಗೌತಮ್ ಅದಾನಿಯನ್ನು ‘‘ವಿಭಿನ್ನವಾಗಿ’’ ನಡೆಸಿಕೊಳ್ಳುತ್ತಾರೆ ಎಂದು ಆರೋಪಿಸಿದ್ದಾರೆ.

‘‘ಲೋಕಸಭೆಯಲ್ಲಿ ನಾವು ರಾಜಕೀಯ ಸಿದ್ಧಾಂತವೊಂದರ ವಿರುದ್ಧ ನಾವು ಹೋರಾಡುತ್ತಿದ್ದೇವೆ. ನಾವು ಭಾವನೆಗಳು, ಪ್ರೀತಿ, ಸಹೋದರತ್ವದ ಬಗ್ಗೆ ಮಾತನಾಡುತ್ತೇವೆ. ಅವರು ದ್ವೇಷ, ಕೋಪ, ವಿಭಜನೆ, ಹಿಂಸೆಯ ಬಗ್ಗೆ ಮಾತನಾಡುತ್ತಾರೆ. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಸಂವಿಧಾನ ಹೇಳುತ್ತದೆ. ಆದರೆ, ಅದಾನಿಯನ್ನು ಇತರ ಭಾರತೀಯರಿಗಿಂತ ವಿಭಿನ್ನವಾಗಿ ಕಾಣಲಾಗುವುದು ಎಂದು ಪ್ರಧಾನಿ ಮೋದಿ ಹೇಳುತ್ತಾರೆ’’ ಎಂದು ವಯನಾಡ್‌ನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಹೇಳಿದರು.

‘‘ಅದಾನಿಯ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ದೋಷಾರೋಪ ಹೊರಿಸಿದರೆ, ಅವರನ್ನು ಅಮೆರಿಕದಲ್ಲಿ ಅಪರಾಧಿ ಎಂದು ಕರೆದರೆ ಪರವಾಗಿಲ್ಲ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಭಾರತದಲ್ಲಿ, ನಾವು ಅವರ ವಿರುದ್ಧ ದೋಷಾರೋಪ ಹೊರಿಸುವುದಿಲ್ಲ’’ ಎಂದು ರಾಹುಲ್ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಅದಾನಿ ಗ್ರೀನ್ ಕಂಪೆನಿಯಿಂದ ಹೆಚ್ಚಿನ ಬೆಲೆಗೆ ಸೌರ ವಿದ್ಯುತ್ ಖರೀದಿಸುವಂತೆ ಮಾಡಲು ಭಾರತದಲ್ಲಿ ಸರಕಾರಿ ಅಧಿಕಾರಿಗಳಿಗೆ ಸಾವಿರಾರು ಕೋಟಿ ರೂಪಾಯಿ ಲಂಚ ನೀಡಿರುವ ಆರೋಪಕ್ಕೆ ಸಂಬಂಧಿಸಿ ಗೌತಮ್ ಅದಾನಿ ಮತ್ತು ಅವರ ಕಂಪೆನಿಯ ಇತರರ ವಿರುದ್ಧ ಅಮೆರಿಕದ ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯದಲ್ಲಿ ದೋಷಾರೋಪ ಹೊರಿಸಿದ್ದಾರೆ.

ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ‘‘ಅವರ ಬಳಿ ಇಡೀ ಸರಕಾರವಿದೆ. ಅವರ ಬಳಿ ಮಾಧ್ಯಮಗಳಿವೆ. ಅವರ ಬಳಿ ಹಣ, ಗುಪ್ತಚರ ಸಂಸ್ಥೆಗಳು, ಸಿಬಿಐ, ಇಡಿ, ಆದಾಯ ತೆರಿಗೆ ಇಲಾಖೆಗಳಿವೆ. ಅವು ಯಾವುದೂ ನಮ್ಮಲ್ಲಿ ಇಲ್ಲ. ನಮ್ಮಲ್ಲಿ ಇರುವುದು ಜನರ ಭಾವನೆಗಳು ಮಾತ್ರ. ಪ್ರತಿ ಬಾರಿಯೂ ಜನರ ಭಾವನೆಗಳು ಗೆಲ್ಲುವುದನ್ನು ನೋಡಿದಾಗ ಆಶ್ಚರ್ಯವಾಗುತ್ತದೆ. ಬಿಜೆಪಿಯ ಸಿದ್ಧಾಂತವನ್ನು ನಾವು ಸೋಲಿಸುತ್ತೇವೆ ಎನ್ನುವ ಬಗ್ಗೆ ನನಗೆ ವಿಶ್ವಾಸವಿದೆ’’ ಎಂದು ಅವರು ನುಡಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News